ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯುತ್ತಿಲ್ಲ. ಇನ್ನೂ ಒಂದು ವರ್ಷ ಮಳೆಗಾಲದಲ್ಲಿ ಮಣ್ಣಿನ ರಾಡಿ, ಬೇಸಿಗೆಯಲ್ಲಿ ಧೂಳಿನ ಗೋಳು ಮುಂದುವರಿಯಲಿದೆ.
ಪ್ರವೀಣ ಹೆಗಡೆ ಕರ್ಜಗಿ
ಶಿರಸಿ: ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಸಲು 2027ರ ವರೆಗೂ ಅವಕಾಶವಿದ್ದು, ಇನ್ನೂ ಒಂದು ವರ್ಷ ಧೂಳು ತಿನ್ನುವುದು ಪಕ್ಕಾ ಆಗಿದೆ.ಈಗಾಗಲೇ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯುತ್ತಿಲ್ಲ. ಇನ್ನೂ ಒಂದು ವರ್ಷ ಮಳೆಗಾಲದಲ್ಲಿ ಮಣ್ಣಿನ ರಾಡಿ, ಬೇಸಿಗೆಯಲ್ಲಿ ಧೂಳಿನ ಗೋಳು ಮುಂದುವರಿಯಲಿದೆ.
ನಗರದ ಅಗಸೇಬಾಗಿಲು ಮೀನು ಮಾರುಕಟ್ಟೆಯಿಂದ ಹಾವೇರಿ ಜಿಲ್ಲೆಯ ನಾಲ್ಕರ ಕ್ರಾಸ್ ವರೆಗಿನ (766ಇ)ನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವ ಕಾಮಗಾರಿ ಪರಿಸರ ಇಲಾಖೆಯ ಅನುಮತಿ, ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ನಾಲ್ಕೈದು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಒಂದೆಡೆ ಕಾಮಗಾರಿಯೂ ನಡೆಯದೇ ಇತ್ತ ನಿರ್ವಹಣೆಯೂ ಇಲ್ಲದೇ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಬೇರೆ ಜಿಲ್ಲೆಯ ವಾಹನ ಸವಾರರು ರಸ್ತೆಯ ಪರಿಸ್ಥಿತಿ ಕಂಡು ಈ ಮಾರ್ಗದಲ್ಲಿ ಸಂಚರಿಸುವುದನ್ನೇ ಬಿಟ್ಟಿದ್ದರು. ವಾಹನಗಳು ಕೆಟ್ಟು ನಿಲ್ಲುವುದಲ್ಲದೇ, ದುಪ್ಪಟ್ಟು ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ಹಲವರು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಆರಂಭದಲ್ಲಿ ಕಾಮಗಾರಿ ಸ್ವಲ್ಪ ವೇಗವಾಗಿ ನಡೆದು, ಈಗ ಅತಿ ನಿಧಾನವಾಗಿ ನಡೆಯುತ್ತಿದೆ. ಕಾಮಗಾರಿಗೆ ವೇಗ ನೀಡಲು ಸಂಸದರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಚನೆ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.ಧೂಳಿನಿಂದ ತೀವ್ರ ಸಮಸ್ಯೆ: ಹೆದ್ದಾರಿ ಕಾಮಗಾರಿಗೆ ಎಲ್ಲೆಡೆ ಅಗೆದಿದ್ದರಿಂದ ಧೂಳು ಮೇಲೆಳುವಂತೆ ಆಗಿದೆ. ಅದರಲ್ಲಿಯೂ ಬಸ್, ಲಾರಿಗಳಂತ ದೊಡ್ಡ ವಾಹನಗಳು ತೆರಳಿದರಂತೂ ಹಿಂಬದಿ ವಾಹನಗಳಿಗೆ ರಸ್ತೆಯೇ ಕಾಣದಂತಾಗುತ್ತದೆ. ಈ ರಸ್ತೆ ಅಂಚಿನ ಮನೆಯವರ ಪರಿಸ್ಥಿತಿ ಹೇಳತೀರದು. ನಿತ್ಯ ರಸ್ತೆಗೆ ನೀರು ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಸೂಚನಾ ಫಲಕವೂ ಇಲ್ಲ: ಶಿರಸಿ-ಹಾವೇರಿ, ಶಿರಸಿ-ಹುಬ್ಬಳ್ಳಿ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹುಬ್ಬಳ್ಳಿ, ಧಾರವಾಡ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸುವುದು ಇದೇ ರಸ್ತೆಯಾದ್ದರಿಂದ ಆ್ಯಂಬುಲೆನ್ಸ್‌ಗಳು ವೇಗವಾಗಿ ಸಂಚರಿಸುತ್ತವೆ. ಹೆದ್ದಾರಿ ನಿರ್ಮಾಣಕ್ಕೆ ಅಗೆದ ಕಡೆಗಳಲ್ಲಿ ಸೂಚನಾ ಫಲಕವೂ ಅಳವಡಿಸಿಲ್ಲ. ಕಿಲೋ ಮೀಟರ್‌ಗಳಷ್ಟು ದೂರ ಜೆಲ್ಲಿಕಲ್ಲು ಹಾಕಿ ಹಾಗೆಯೇ ಬಿಟ್ಟಿರುವುದರಿಂದ ಕಾರು, ಬೈಕ್ ಸವಾರರಿಗೆ ವಾಹನ ನಿಯಂತ್ರಣ ಸಾಧ್ಯವಾಗದೇ ಉರುಳಿ ಬಿದ್ದು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೈಗೊಳ್ಳುವಾಗ ವಾಹನ ಸವಾರರಿಗೆ ಗೋಚರವಾಗುವ ರೀತಿಯಲ್ಲಿ ಸೂಚನಾ ಫಲಕ ಅಳವಡಿಸಿ, ಸಂಭವನೀಯ ಅಪಘಾತ ತಪ್ಪಿಸಲು ಮುಂದಾಗಬೇಕಿದೆ.ಅಪಾಯಕ್ಕೆ ಆಹ್ವಾನ: ಹೆದ್ದಾರಿ ನಿರ್ವಹಣೆಯಿಲ್ಲದೇ ಮಳೆಗಾಲದಲ್ಲಿ ನಗರದ ಹೊರವಲಯ ಚಿಪಗಿ, ಗೌಡಳ್ಳಿ ಭಾಗದಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿದ್ದವು. ಈ ಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಒಳಗಾಗಿತ್ತು. ಇದೀಗ ಚಿಪಗಿಯಿಂದ ಗೌಡಳ್ಳಿ, ಖಾನ್‌ನಗರ, ಹುಲದೇವನಸರ ಬಸ್ ತಂಗುದಾಣ ಪ್ರದೇಶ ಸೇರಿದಂತೆ ಅರುಂಧತಿ ನಗರ ಕ್ರಾಸ್ ವರೆಗೆ ಹೆದ್ದಾರಿ ಅಗೆಯಲಾಗಿದೆ. ಅಗೆದ ಹಳೆಯ ರಸ್ತೆಯ ಅವಶೇಷವನ್ನು ಹೆದ್ದಾರಿ ಅಂಚಿಗೆ ರಾಶಿ ಹಾಕಲಾಗಿದೆ. ಕೆಲವು ಕಡೆ ಘಟ್ಟ ಇರುವ ಸ್ಥಳಗಳನ್ನು ಆಳೆತ್ತರಕ್ಕೆ ಅಗೆದು ತಗ್ಗಿಸಲಾಗಿದೆ. ಹೀಗೆ ಅಗೆದ ಕಡೆಗಳಲ್ಲಿ ಜಲ್ಲಿಕಲ್ಲು ಹಾಕುವ ಕೆಲಸ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಜೆಲ್ಲಿಯ ಗೋಪುರ ನಿರ್ಮಾಣ ಮಾಡಲಾಗಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಶಿರಸಿ-ಹಾವೇರಿ ರಸ್ತೆ ನಿರ್ಮಾಣಕ್ಕೆ ಮಾರ್ಚ್ 2027ರ ವರೆಗೆ ಅವಕಾಶವಿದೆ. ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯೊಳಗಡೆ ಅಗೆದ ಭಾಗಗಳಲ್ಲಿ ರಸ್ತೆ ನಿರ್ಮಾಣ ಮುಗಿಸಲು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ. ಎರಡು ದಿನಗಳಿಗೊಮ್ಮೆ ಕಾಮಗಾರಿಯ ಪ್ರಗತಿ ಪರಿಶೀಲಿಸಿ, ಸಲಹೆ-ಸೂಚನೆ ನೀಡಲಾಗುತ್ತಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಶಿವಕುಮಾರ ಎಂ. ಹೇಳಿದರು.