ಹದಗೆಟ್ಟ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿ

| Published : Mar 03 2025, 01:45 AM IST

ಸಾರಾಂಶ

ಮುಂಡಗೋಡದಿಂದ ಶಿರಸಿ ಅಥವಾ ಹುಬ್ಬಳಿಗೆ ಹೋಗಬೇಕಾದರೆ ಮಾರ್ಗದುದ್ದಕ್ಕೂ ಹೊಂಡಗಳು ನಿರ್ಮಾಣವಾಗಿ ರಸ್ತೆ ಎಂಬುದು ತಗ್ಗು-ಗುಂಡಿಗಳಿಂದ ಕೂಡಿದೆ.

ಮುಂಡಗೋಡ: ಅತಿ ಹೆಚ್ಚು ವಾಹನ ಸಾಂದ್ರತೆ ಹೊಂದಿರುವ ತಾಲೂಕಿನ ಶಿರಸಿ-ಹುಬ್ಬಳ್ಳಿ (ಕುಮಟಾ-ತಡಸ್) ೬೯ ರಾಜ್ಯ ಹೆದ್ದಾರಿ ಸುಮಾರು ೧೨ ವರ್ಷದಿಂದ ಮರುಡಾಂಬರೀಕರಣವಾಗದೇ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.

ಮುಂಡಗೋಡದಿಂದ ಶಿರಸಿ ಅಥವಾ ಹುಬ್ಬಳಿಗೆ ಹೋಗಬೇಕಾದರೆ ಮಾರ್ಗದುದ್ದಕ್ಕೂ ಹೊಂಡಗಳು ನಿರ್ಮಾಣವಾಗಿ ರಸ್ತೆ ಎಂಬುದು ತಗ್ಗು-ಗುಂಡಿಗಳಿಂದ ಕೂಡಿದೆ. ಈ ಮಾರ್ಗವಾಗಿ ವಾಹನ ಚಲಾಯಿಸುವುದೇ ತಲೆ ನೋವಾಗಿದೆ. ಈ ಮೊದಲು ಮುಂಡಗೋಡದಿಂದ ಶಿರಸಿ ಅಥವಾ ಹುಬ್ಬಳ್ಳಿಗೆ ಒಂದು ಗಂಟೆಯೊಳಗೆ ತಲುಪಬಹುದಿತ್ತು. ಆದರೆ ಈಗ ರಸ್ತೆ ಸಂಪೂರ್ಣ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿರುವುದರಿಂದ ಕನಿಷ್ಠ ಒಂದೂವರೆ ಗಂಟೆ ಬೇಕು. ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ. ಚಾಲಕರಿಗೆ ಈ ಮಾರ್ಗವಾಗಿ ಸಂಚರಿಸುವುದೇ ಒಂದು ಹಿಂಸೆಯಾಗಿ ಪರಿಣಮಿಸಿದೆ.

ಸವಾರರು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತ ಪ್ರಯಾಣಿಸುತ್ತಾರೆ. ರಸ್ತೆ ಇಷ್ಟೊಂದು ಹದಗೆಟ್ಟು ಹೋಗಿದ್ದರೂ ಹೊಸ ರಸ್ತೆ ನಿರ್ಮಾಣ ಮಾಡಲು ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಜೂರಾದ ಹಣ ವಾಪಸ್ ಪಡೆದ ಸರ್ಕಾರ:

ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಬಿಸಲಕೊಪ್ಪ-ತಡಸ್ ಕ್ರಾಸ್ ವರೆಗೆ ಈಗಿರುವ ೫.೫ ಮೀಟರ್ ರಸ್ತೆಯನ್ನು ಮೇಲ್ದರ್ಜೆಗೇರಿಸಿ ೭ ಮೀಟರ್ ರಸ್ತೆ ನಿರ್ಮಾಣಕ್ಕಾಗಿ ಸುಮಾರು ₹೫೦ ಕೋಟಿ ಮಂಜೂರಾಗಿತ್ತು. ಆದರೆ ಸರ್ಕಾರ ಬದಲಾಗುತ್ತಿದ್ದಂತೆ ಗ್ಯಾರಂಟಿ ಯೋಜನೆ ವ್ಯಾಪಾರದಲ್ಲಿ ಅನುದಾನದ ಕೊರತೆಯಿಂದ ಮಂಜೂರು ಮಾಡಿದ ಹಣವನ್ನು ಮರಳಿ ಪಡೆಯಲಾಗಿದೆ ಎನ್ನಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಸಾಮಾನ್ಯವಾಗಿ ಯಾವುದೇ ಒಂದು ರಸ್ತೆಯನ್ನು ೩-೪ ವರ್ಷಕ್ಕೊಮ್ಮೆ ಮರು ಡಾಂಬರೀಕರಣ ಮಾಡಲಾಗುತ್ತದೆ. ಆದರೆ ೨೦೧೧-೧೨ನೇ ಸಾಲಿನಲ್ಲಿ ಡಾಂಬರೀಕರಣವಾದ ಶಿರಸಿ-ಹುಬ್ಬಳ್ಳಿ ಹೆದ್ದಾರಿ ೧೨ ವರ್ಷ ಕಳೆದರೂ ಮರು ಡಾಂಬರೀಕರಣ ಮಾಡಲಾಗಿಲ್ಲ. ಪ್ರತಿ ವರ್ಷ ಮಳೆಗಾಲ ಮುಗಿದ ತಕ್ಷಣ ದುರಸ್ತಿ ಹಾಗೂ ನಿರ್ವಹಣೆ ಹೆಸರಲ್ಲಿ ತೇಪೆ ಹಚ್ಚುವ ಕೆಲಸ ಮಾಡಿ ಲಕ್ಷಾಂತರ ರುಪಾಯಿ ಕರ್ಚು ಹಾಕುತ್ತಾ ಬರಲಾಗಿದೆಯೇ ವಿನಃ ಮರು ಡಾಂಬರೀಕರಣ ಮಾಡುವ ಗೋಜಿಗೆ ಹೋಗಿಲ್ಲ.

ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹದಿಂದಾಗುವ ಹಾನಿಗೆ ರಸ್ತೆ ದುರಸ್ತಿ ಕಾರ್ಯಕ್ಕಾಗಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಸರ್ಕಾರ ಅನುದಾನ ನೀಡಿದರೆ ರಸ್ತೆ ಮಾಡುತ್ತೇವೆ. ಅನುದಾನವೇ ಬಾರದೇ ಇದ್ದರೆ ಏನು ಮಾಡಲು ಸಾಧ್ಯ? ಮಹಾದೇವಪ್ಪ, ಮುಂಡಗೋಡ ಲೊಕೋಪಯೋಗಿ ಇಲಾಖೆ ಎಇಇ.