ಸಾರಾಂಶ
ಕಾರವಾರ: ಕೇಂದ್ರ ಸರ್ಕಾರ ಸಾಗರಮಾಲಾ ಯೋಜನೆಯಲ್ಲಿ ಶಿರಸಿ ಕುಮಟಾ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ(766 ಇ) ಮೇಲ್ದರ್ಜೆಗೇರಿಸಿ 2018ರಲ್ಲಿ ಟೆಂಡರ್ ನೀಡಿದೆ. ಆರ್‌ಎನ್‌ಎಸ್ ಕಂಪನಿ ಟೆಂಡರ್ ಪಡೆದು ಕಾಮಗಾರಿ ಆರಂಭಿಸಿದೆ. ಅದಾಗಿ ಆರು ವರ್ಷಗಳಾದರೂ ಕಾಮಗಾರಿ ಮುಗಿದಿಲ್ಲ.
ಭಾರಿ ವಾಹನಗಳ ಓಡಾಟಕ್ಕೆ ಯಾವಾಗ ಹೆದ್ದಾರಿ ಮುಕ್ತವಾಗಲಿದೆ ಎಂದು ಪ್ರಯಾಣಿಕರು ಕಾಯುತ್ತಿದ್ದಾರೆ. ಆರಂಭದಿಂದಲೆ ಕುಂಟುತ್ತ ಸಾಗಿದ ಕಾಮಗಾರಿಯಿಂದಾಗಿ ಹೆದ್ದಾರಿ ನಿರ್ಮಾಣ ಎಲ್ಲಿಲ್ಲದ ವಿಳಂಬಕ್ಕೆ ಕಾರಣವಾಗಿದೆ. ಈಗ ಕಾಮಗಾರಿ ವೇಗವಾಗಿ ನಡೆಸುವ ಉದ್ದೇಶದಿಂದ ಡಿ. 2ರಿಂದ ಫೆ. 25ರ ತನಕ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೀಗ ನಡೆಯುತ್ತಿರುವ ಕಾಮಗಾರಿ ವೇಗವನ್ನು ನೋಡಿದರೆ ಫೆ. 25ರ ತನಕವೂ ಮುಗಿಯುವುದು ಸಾಧ್ಯವೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಶಿರಸಿ- ಕುಮಟಾ ಹೆದ್ದಾರಿ ಉನ್ನತೀಕರಣ ಕಾಮಗಾರಿ ಮುಗಿಯುವುದು ಯಾವಾಗ ಎಂಬ ಪ್ರಶ್ನೆ ಹುಟ್ಟುಹಾಕಿದೆ.ರಾಜ್ಯ ಹೆದ್ದಾರಿ ಇರುವಾಗ ಶಿರಸಿ ಕುಮಟಾ ರಸ್ತೆ 8 ಮೀ.ನಷ್ಟು ಆಗಲ ಇತ್ತು. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವಾಗ 12 ಮೀ.ನಷ್ಟು ಅಗಲ ಮಾಡಲಾಗುತ್ತಿದೆ. ಈಗ ಒಟ್ಟು 10 ಸೇತುವೆಗಳು ನಿರ್ಮಾಣವಾಗಬೇಕಾಗಿದೆ. ದೇವಿಮನೆ ಹಾಗೂ ಬಂಡಲ ಘಟ್ಟ ಪ್ರದೇಶದಲ್ಲಿ 4.5 ಕಿಮೀ ರಸ್ತೆ ನಿರ್ಮಿಸಬೇಕಾಗಿದೆ. ಕತಗಾಲ ಹಾಗೂ ಅಂತ್ರವಳ್ಳಿಯಲ್ಲೂ ರಸ್ತೆ ನಿರ್ಮಾಣವಾಗಬೇಕಾಗಿದೆ. ಒಟ್ಟು 54 ಕಿಮೀ ಉದ್ದದ ರಸ್ತೆಯಲ್ಲಿ 10.5 ಕಿಮೀ ರಸ್ತೆ ನಿರ್ಮಾಣ ಬಾಕಿ ಇದೆ.
ಇವಿಷ್ಟೂ ಕಾಮಗಾರಿಗಳು ಬಾಕಿ ಇರುವುದರಿಂದ ಭಾರಿ ವಾಹನಗಳ ಸಂಚಾರ ನಿಷೇಧದ ಅವಧಿ ಫೆ. 25ರ ತನಕ ಮಾತ್ರ ಇದ್ದು, ಅಷ್ಟರೊಳಗೆ ಈ ಕಾಮಗಾರಿ ಮುಗಿಯುವ ಯಾವುದೇ ಸಾಧ್ಯತೆ ಇಲ್ಲ. ಹೆದ್ದಾರಿ ಸಂಪೂರ್ಣವಾಗಲು ಇನ್ನೂ ನಾಲ್ಕಾರು ತಿಂಗಳು ಬೇಕಾಗುವ ಸಾಧ್ಯತೆ ಇದೆ.ಈ ಹೆದ್ದಾರಿಯಲ್ಲಿ ಸಾಗಬೇಕಿದ್ದ ಸಾರಿಗೆ ಸಂಸ್ಥೆ ಬಸ್‌ಗಳು, ಖಾಸಗಿ ಬಸ್‌ಗಳು, ಲಾರಿಗಳು ಸುತ್ತುಬಳಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರಿಗೆ ಸಮಯವೂ ಹೆಚ್ಚು ಬೇಕು. ಹಣವೂ ಹೆಚ್ಚು ವೆಚ್ಚವಾಗಲಿದೆ. ಶಿರಸಿಯಿಂದ ದೇವಿಮನೆ ತನಕ ಬಸ್ ಸಂಪರ್ಕ ಇದೆ. ಕುಮಟಾದಿಂದ ಮಾಸ್ತಿಹಳ್ಳ ತನಕ ಬಸ್ ಸಂಪರ್ಕ ಇದೆ. ನಡುವೆ 5-6 ಕಿಮೀ ಬಸ್ ಸಂಪರ್ಕವೇ ಇಲ್ಲ. ಹೀಗಾಗಿ ಕುಮಟಾದಿಂದ ನೇರವಾಗಿ ಶಿರಸಿಗೆ ಬಸ್ ಸಂಚಾರ ಇಲ್ಲವಾಗಿದೆ.
ಈ ಹೆದ್ದಾರಿ ನಿರ್ಮಾಣ ಕಾರ್ಯ ವಿಳಂಬದಿಂದ ಸುತ್ತು ಬಳಸಿ ಸಾಗಬೇಕಿರುವುದರಿಂದ ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ. ಈಗ ಜನತೆ ಒಂದೇ ಬೇಡಿಕೆ ಮುಂದಿಡುತ್ತಿದ್ದಾರೆ. ಭಾರಿ ವಾಹನಗಳಿಗೆ ಸಂಚಾರ ನಿರ್ಬಂಧ ತೆರವುಗೊಳಿಸಿ, ನಿರ್ಮಾಣವಾಗುತ್ತಿರುವ ಸೇತುವೆ, ರಸ್ತೆಗಳ ಪಕ್ಕದಲ್ಲಿಯೇ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಆಗ್ರಹ ಕೇಳಿ ಬರುತ್ತಿದೆ. ಈ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ವಿಳಂಬ ಆಗುವುದಿದ್ದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಜನತೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ದಿನಕರ ಶೆಟ್ಟಿ ಆಗ್ರಹಿಸಿದರು.