ಸಾರಾಂಶ
ಶಿರಸಿ: ಕುಮಟಾ- ಶಿರಸಿ ಹೆದ್ದಾರಿ ನಿರ್ಮಾಣ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ. ಇತ್ತೀಚೆಗೆ ಹೆದ್ದಾರಿ ನಿರ್ಮಾಣದ ಯಂತ್ರ ಕೆಟ್ಟಿದ್ದು, ನಿಗದಿತ ಸಮಯದೊಳಗೆ ಕೆಲಸ ಮುಕ್ತಾಯಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.ಸಾಗರಮಾಲಾ ಯೋಜನೆಯ ಅಡಿಯಲ್ಲಿ ಶಿರಸಿ- ಕುಮಟಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೭೬೬ಇ ಯನ್ನಾಗಿ ಪರಿವರ್ತಿಸಲಾಗಿದೆ. ಕಳೆದ ಮೂರು ವರ್ಷ ತಾಲೂಕು ದೇವಿಮನೆ ಘಟ್ಟ ಪ್ರದೇಶದಿಂದ ಶಿರಸಿಯವರೆಗಿನ ರಸ್ತೆಯನ್ನು ಮಾತ್ರ ಪೂರ್ಣಗೊಳಿಸಿರುವ ಆರ್‌ಎನ್‌ಎಸ್ ಕಂಪನಿ, ಘಟ್ಟದ ಕೆಳಗಿನ ಪ್ರದೇಶದಲ್ಲಿ ಕಾಮಗಾರಿಯನ್ನು ವಿಳಂಬ ಮಾಡಿದೆ. ದಿವಗಿಯಿಂದ ಕತಗಾಲವರೆಗೆ ರಸ್ತೆ ನಿರ್ಮಿಸಿದ್ದರೆ, ದೇವಿಮನೆ ಘಟ್ಟ ಪ್ರದೇಶದಲ್ಲಿ ಅರ್ಧಭಾಗ ಮಾತ್ರ ರಸ್ತೆ ನಿರ್ಮಿಸಿತ್ತು. ಅಮ್ಮಿನಳ್ಳಿ ಸೇತುವೆಯನ್ನು ಕಳೆದ ವರ್ಷ ಮಾಡಲಾಗಿದೆ.
ಇನ್ನೂ ೯ ಕಡೆ ಸೇತುವೆ ನಿರ್ಮಾಣ ಹಾಗೂ ಇಕ್ಕಟ್ಟಾದ ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ವಾಹನ ಸಂಚಾರದಿಂದ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಕಳೆದ ವರ್ಷವೇ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಅನುವು ಮಾಡಿಕೊಡುವಂತೆ ವಿನಂತಿಸಿತ್ತು.ಜಿಲ್ಲಾಧಿಕಾರಿ ಆದೇಶದ ಅನ್ವಯ ಶಿರಸಿ- ಕುಮಟಾ ರಸ್ತೆಯಲ್ಲಿ ಡಿ. ೨ರಿಂದ ಫೆ. ೨೫ರ ವರೆಗೆ ವಾಹನ ಸಂಚಾರ ನಿಷೇಧಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗಿದೆ.
ಬಸ್, ಲಾರಿ ಮುಂತಾದ ಭಾರೀ ವಾಹನಗಳು ಈಗ ಜಿಲ್ಲಾಧಿಕಾರಿ ಸೂಚಿಸಿದ ಮಾರ್ಗದಲ್ಲಿಯೇ ತೆರಳುತ್ತಿವೆ. ಸಿಕ್ಕ ಈ ಅವಕಾಶವನ್ನು ಆರ್‌ಎನ್ಎಸ್ ಕಂಪನಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿತ್ತಾದರೂ ಆರಂಭದಲ್ಲಿ ಎಂದಿನಂತೆಯೇ ತನ್ನ ಮಂದಗತಿಯ ಧೋರಣೆಯನ್ನೇ ಅನುಸರಿಸಿದೆ.ಜಿಲ್ಲಾಧಿಕಾರಿ ಆದೇಶದನ್ವಯ ಈ ರಸ್ತೆ ಮತ್ತೆ ಸಂಚಾರಕ್ಕೆ ತೆರೆದುಕೊಳ್ಳಲು ಇನ್ನು ೫೩ ದಿನ ಮಾತ್ರ ಬಾಕಿ ಇವೆ. ೯ ಸೇತುವೆಗಳ ಪೈಕಿ ಕೆಲ ಸೇತುವೆಗಳ ತೆರವು ಕಾರ್ಯವನ್ನು ಈಗ ಮಾಡಲಾಗುತ್ತಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಮೂಡಿಸಿದೆ.ಹಾಳಾದ ರಸ್ತೆ ನಿರ್ಮಾಣದ ಯಂತ್ರ: ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಶಿರಸಿ- ಕುಮಟಾ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ರಸ್ತೆ ನಿರ್ಮಿಸುವ ಯಂತ್ರ ಕಳೆದ ೧೩ ದಿನಗಳಿಂದ ಹಾಳಾಗಿದ್ದು, ರಿಪೇರಿ ಆಗಬರಬೇಕಿದೆ. ಜಿಲ್ಲಾಧಿಕಾರಿಗಳ ಆದೇಶದನ್ವಯ ಈ ಮಾರ್ಗದಲ್ಲಿ ಲಘು ವಾಹನಗಳು, ಸ್ಥಳೀಯರ ವಾಹನ ಹೊರತಾಗಿ ಬೇರೆ ವಾಹನ ಸಂಚಾರಕ್ಕೆ ಆಸ್ಪದವಿಲ್ಲ. ಇರುವ ಈ ಕಡಿಮೆ ಸಮಯದಲ್ಲಿ ದೇವಿಮನೆ ಘಟ್ಟ ಪ್ರದೇಶದಲ್ಲಿ ಬಾಕಿ ಇರುವ ೫ ಕಿಮೀ ಮತ್ತು ಬಂಡಲ ಘಟ್ಟ ಪ್ರದೇಶದಲ್ಲಿ ೨ ಕಿಮೀ ರಸ್ತೆ ನಿರ್ಮಾಣವಾಗಬೇಕಿತ್ತು. ಡಿಸೆಂಬರ್ ತಿಂಗಳಿನಲ್ಲಿ ಮಳೆ ಬಂದ ಕಾರಣ ಕಾಮಗಾರಿ ಆರಂಭಕ್ಕೆ ನಿಧಾನವೂ ಆಗಿತ್ತು.ಸಿಮೆಂಟ್ ರಸ್ತೆ ನಿರ್ಮಿಸುವ ಯಂತ್ರವೂ ಕೆಟ್ಟಿದ್ದು, ಈ ಯಂತ್ರದ ಯುಎಸ್‌ಕೆ ಉಪಕರಣ ಹೊರ ರಾಜ್ಯದಿಂದ ತರಿಸಬೇಕಿದ್ದು, ಅಲ್ಲಿಯ ತಂತ್ರಜ್ಞರೇ ಆಗಮಿಸಿ ರಿಪೇರಿ ಮಾಡಬೇಕಿದೆ. ಯಂತ್ರದ ಉಪಕರಣಗಳು ಈಗಾಗಲೇ ಹುಬ್ಬಳ್ಳಿಗೆ ಬಂದಿದ್ದು, ಒಂದೆರಡು ದಿನದಲ್ಲಿ ರಿಪೇರಿ ನಡೆಸಿ ಕೆಲಸ ಆರಂಭಿಸಲಿದ್ದೇವೆ. ಯಂತ್ರ ಹಾಳಾಗಿದ್ದ ವೇಳೆ ಘಟ್ಟ ಪ್ರದೇಶದಲ್ಲಿ ಖಡೀಕರಣ, ಬೆಡ್ ಹಾಕಿದ್ದೇವೆ. ಯಂತ್ರ ಸರಿಯಾದ ತಕ್ಷಣ ಹೆಚ್ಚು ಹೊತ್ತು ಕಾರ್ಯ ನಿರ್ವಹಿಸಿ ನೀಡಲಾಗಿರುವ ಅವಧಿಯಲ್ಲೇ ಪೂರ್ಣಗೊಳಿಸಲು ಯತ್ನಿಸುತ್ತೇವೆ ಎಂದು ಆರ್‌ಎನ್‌ಎಸ್ ಕಂಪನಿಯ ಎಂಜಿನಿಯರ್ ಗೋವಿಂದ ಭಟ್ಟ ತಿಳಿಸಿದರು.ಬೆಣ್ಣೆಹೊಳೆ ಸೇತುವೆ ಮಾತ್ರ ನಿರ್ಮಿಸಲಾಗುತ್ತಿರುವ ಸೇತುವೆಗಳಲ್ಲಿ ದೊಡ್ಡದಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಉಳಿದ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವ ವಿಶ್ವಾಸವಿದೆ ಎನ್ನುತ್ತಾರೆ ಆರ್‌ಎನ್‌ಎಸ್ ಕಂಪನಿ ಎಂಜಿನಿಯರ್ ಗೋವಿಂದ ಭಟ್ಟ.