ಶಿರಸಿ ಮಾರಿಕಾಂಬಾ ಜಾತ್ರೆ: ಹಣಕಾಸಿನ ಗೊಂದಲ ನಿವಾರಣೆಗೆ ತೀರ್ಮಾನ

| Published : Sep 04 2024, 01:52 AM IST

ಶಿರಸಿ ಮಾರಿಕಾಂಬಾ ಜಾತ್ರೆ: ಹಣಕಾಸಿನ ಗೊಂದಲ ನಿವಾರಣೆಗೆ ತೀರ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಜಾತ್ರೆಗೆ ಪಾವತಿ ಮಾಡಿದ ಹಣಕ್ಕೆ ಶೇ. ೧೦ರಷ್ಟು ಹೆಚ್ಚಿಗೆ ಮಾತ್ರ ಪಡೆಯುವುದಕ್ಕೆ ಸರ್ವಾನುಮತದಿಂದ ಠರಾವನ್ನು ಶಿರಸಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾಡಲಾಯಿತು.

ಶಿರಸಿ: ಪ್ರತಿ ಜಾತ್ರೆಯಲ್ಲಿಯೂ ನಗರಸಭೆ ಹಾಗೂ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ನಡುವೆ ಹಣದ ವ್ಯವಹಾರದಲ್ಲಿ ಗೊಂದಲ ಉಂಟಾಗುತ್ತಿದ್ದು, ಇದನ್ನು ಬಗೆಹರಿಸಲು ಚರ್ಚಿಸಿ, ನಿರ್ಣಯಗೊಳ್ಳುವಂತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.ನಗರದ ಅಟಲ್ ಜೀ ಸಭಾಭವನದಲ್ಲಿ ಮಂಗಳವಾರ ನಗರಸಭೆ ನೂತನ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯ ದಯಾನಂದ ನಾಯ್ಕ ವಿಷಯ ಪ್ರಸ್ತಾಪಿಸಿ, ನಗರಸಭೆಯಿಂದ ಜಾತ್ರಾ ಗದ್ದುಗೆಯ ಸುತ್ತಮುತ್ತ ಸ್ವಚ್ಛತೆ ಹಾಗೂ ಸ್ವಚ್ಛತಾ ಕಾರ್ಯಕ್ಕಾಗಿ ವಸ್ತುಗಳ ಖರೀದಿಯ ವೆಚ್ಚವಾಗಿ ದೇವಸ್ಥಾನದ ಆಡಳಿತ ಮಂಡಳಿಯಿಂದ ₹೫೫ ಲಕ್ಷ ಪಾವತಿ ಮಾಡಬೇಕೆಂಬ ಆದೇಶ ಸರಿಯಾದ ಕ್ರಮವಲ್ಲ. ಪ್ರತಿ ಜಾತ್ರೆ ಮುಗಿದ ಬಳಿಕ ನಗರಸಭೆ ಹಾಗೂ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿಯ ನಡುವೆ ಈ ವಿಷಯಕ್ಕಾಗಿ ವೈಮನಸ್ಸು ಉಂಟಾಗುತ್ತಿದೆ. ಕೋಟ್ಯಂತರ ರು. ಖರ್ಚಾಗಿದೆ. ಅದರ ಅರ್ಧಭಾಗ ದೇವಾಲಯ ಪಾವತಿ ಮಾಡಬೇಕೆಂಬ ನಿರ್ಣಯ ಸರಿಯಾದ ಕ್ರಮವಲ್ಲ ಎಂದರು. ಇದಕ್ಕೆ ಸರ್ವ ಸದಸ್ಯರು ಧ್ವನಿಗೂಡಿಸಿ, ಕಳೆದ ಜಾತ್ರೆಗೆ ಪಾವತಿ ಮಾಡಿದ ಹಣಕ್ಕೆ ಶೇ. ೧೦ರಷ್ಟು ಹೆಚ್ಚಿಗೆ ಮಾತ್ರ ಪಡೆಯುವುದಕ್ಕೆ ಸರ್ವಾನುಮತದಿಂದ ಠರಾವು ಮಾಡಲಾಯಿತು.

ನೈರ್ಮಲ್ಯ ಸಾಮಗ್ರಿ, ಸ್ವಚ್ಛತೆಗಾಗಿ ಡಸ್ಟ್ ಬಿನ್, ಗದ್ದುಗೆ ಸುತ್ತ ಸ್ವಚ್ಛತೆ ವಸ್ತುಗಳ ಖರೀದಿಗೆ ₹೧ ಕೋಟಿ ಮಾಹಿತಿ ನೀಡಿದ್ದೇವೆ. ೨೦೨೨ರ ಜಾತ್ರೆಯಲ್ಲಿ ₹೧೭ ಲಕ್ಷ ರೂ. ನೀಡಿದ್ದೇವೆ ಎಂದು ಅದಕ್ಕಿಂತ ಶೇ. ೧೦ರಷ್ಟು ಏರಿಕೆ ಮಾಡಿ ಕೋಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಅರ್ಧ ಹಣ ಭರಣ ಮಾಡಿಕೊಡಲು ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದಾರೆ. ಅಲ್ಲದೇ ಮುಂಗಡವಾಗಿ ಹಣ ಪಡೆಯಲು ಸೂಚಿಸಿದ್ದರು.

ಜಾತ್ರೆ ಗಡಿಬಿಡಿಯಲ್ಲಿ ಅದು ಸಾಧ್ಯವಾಗಿಲ್ಲ. ₹೧ ಕೋಟಿಗಿಂತ ಕೆಲಸ ಆಗಿದೆ. ಕ್ರಿಯಾಯೋಜನೆ ಕೆಲಸದ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದೇವೆ. ಜಾತ್ರೆಯ ಪ್ರಯುಕ್ತ ಅಂಗಡಿ ಹರಾಜಿನಲ್ಲಿ ₹೪೫ ಲಕ್ಷ ನಗರಸಭೆ ನಿಧಿಗೆ ಜಮಾ ಆಗಿದೆ. ಜಾತ್ರೆಯ ಸಂದರ್ಭದಲ್ಲಿ ನಿರ್ವಹಿಸಿದ್ದ ಕಾಮಗಾರಿಗಳಿಗೆ ಇನ್ನೂ ಅಂದಾಜು ₹೫೦ ಲಕ್ಷ ಬಿಲ್ ಬಾಕಿ ಇದೆ. ಜಿಲ್ಲಾಧಿಕಾರಿ ಆದೇಶದಿಂದ ಶೇ. ೫೦ರಷ್ಟು ದೇವಸ್ಥಾನದಿಂದ ಪಡೆದುಕೊಳ್ಳಿ ಎಂದು ಹೇಳಿದ್ದರು. ಅವರ ಆದೇಶದ ಪ್ರಕಾರ ದೇವಾಲಯಕ್ಕೆ ಪತ್ರ ಕಳುಹಿಸುತ್ತೇವೆ. ಇಲ್ಲವಾದಲ್ಲಿ ಲೆಕ್ಕ ತಪಾಸಣೆಯಲ್ಲಿ ತೊಂದರೆಯಾಗುತ್ತದೆ ಎಂದು ಲೆಕ್ಕಾಧಿಕಾರಿ ಸುಬ್ರಹ್ಮಣ್ಯ ತಿಳಿಸಿದರು.ಹಿರಿಯ ಸದಸ್ಯ ಶ್ರೀಕಾಂತ ತಾರೀಬಾಗಿಲ ಮಾತನಾಡಿ, ಜಿಲ್ಲಾಧಿಕಾರಿ ಆದೇಶದ ಮೇಲೆ ಠರಾವು ಮಾಡಲು ಸಾಧ್ಯವಿಲ್ಲ. ಈ ವಿಷಯಕ್ಕಾಗಿ ಪ್ರತ್ಯೇಕ ಸಮಿತಿ ರಚನೆ ಮಾಡಿ, ಅದರಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದಾಗ, ಇದರ ಕುರಿತು ವಿಶೇಷ ಸಭೆ ಕರೆದು ನಿರ್ಣಯ ಕೈಗೊಳ್ಳಲು ಸರ್ವ ಸದಸ್ಯರು ತೀರ್ಮಾನಿಸಿದರು.ಸ್ವಚ್ಛತೆಗಾಗಿ ಖರ್ಚು ಮಾಡಿದ ಹಣಕ್ಕೆ ಶೇ. ೫೦ರಷ್ಟು ದೇವಸ್ಥಾನದವರು ನಗರಸಭೆಗೆ ಪಾವತಿ ಮಾಡಬೇಕು ಎಂಬ ಜಿಲ್ಲಾಧಿಕಾರಿ ಆದೇಶದಂತೆ ದೇವಸ್ಥಾನಕ್ಕೆ ಪತ್ರ ಕಳುಹಿಸಿದ್ದೇವೆ. ಸೋಮವಾರ ಸಂಜೆ ₹೧೯ ಲಕ್ಷ ಚೆಕ್ ಕಳುಹಿಸಿಕೊಟ್ಟಿದ್ದಾರೆ. ಸರ್ವ ಸದಸ್ಯರು ಚರ್ಚಿಸಿ, ಕೈಗೊಂಡ ತೀರ್ಮಾನವನ್ನು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಪೌರಾಯುಕ್ತ ಕಾಂತರಾಜು ತಿಳಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಸದಸ್ಯರು, ನಾಮನಿರ್ದೇಶನ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.