ಟಿಎಸ್‌ಎಸ್‌ಗೆ ವಿಶೇಷಾಧಿಕಾರಿ ನೇಮಕ

| Published : May 25 2024, 12:49 AM IST

ಸಾರಾಂಶ

ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅವರನ್ನು ವಿಶೇಷಾಧಿಕಾರಿಯಾಗಿ ನೇಮಿಸಿ ತಕ್ಷಣ ಟಿಎಸ್‌ಎಸ್‌ನ ಆಡಳಿತ ಅಧಿಕಾರ ವಹಿಸಿಕೊಳ್ಳುವಂತೆ ಮೇ ೨೪ರಂದು ಹೊರಡಿಸಿದ ಆದೇಶದಲ್ಲಿ ಸೂಚಿಸಿದ್ದಾರೆ.

ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್‌ಎಸ್ ಆಡಳಿತ ಮಂಡಳಿಗೆ ನಡೆದಿದ್ದ ಚುನಾವಣೆ ಲೋಪದೋಷಗಳಿಂದ ಕೂಡಿತ್ತು ಎಂಬ ಕಾರಣ ನೀಡಿ ಕಾರವಾರದ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದೂರಿನನ್ವಯ ಆದೇಶ ನೀಡಿದ ಸಹಕಾರ ಸಂಘಗಳ ಉಪನಿಬಂಧಕ ಎಸ್.ಜಿ. ಮಂಜುನಾಥ ಸಿಂಗ್, ಇಲ್ಲಿನ ತೋಟಗಾರ್ಸ್ ಸೇಲ್ ಸೊಸೈಟಿಗೆ 2023ರ ಆ.೨೦ರಂದು ನಡೆದ ಚುನಾವಣಾ ಫಲಿತಾಂಶವನ್ನು ರದ್ದುಪಡಿಸಿ ವಿಶೇಷಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅವರನ್ನು ವಿಶೇಷಾಧಿಕಾರಿಯಾಗಿ ನೇಮಿಸಿ ತಕ್ಷಣ ಟಿಎಸ್‌ಎಸ್‌ನ ಆಡಳಿತ ಅಧಿಕಾರ ವಹಿಸಿಕೊಳ್ಳುವಂತೆ ಮೇ ೨೪ರಂದು ಹೊರಡಿಸಿದ ಆದೇಶದಲ್ಲಿ ಸೂಚಿಸಿದ್ದಾರೆ. ಶುಕ್ರವಾರ ಸಂಜೆ ಟಿಎಸ್‌ಎಸ್‌ನಲ್ಲಿ ತೀರ್ಪು ಓದಿ ಹೇಳಿ ಪ್ರಕಟಿಸಲಾಯಿತು.ಕಳೆದ ಆಗಸ್ಟ್ ೨೦ರಂದು ನಡೆದ ಟಿಎಸ್‌ಎಸ್ ಆಡಳಿತ ಮಂಡಳಿ ಚುನಾವಣಾ ಪ್ರಕ್ರಿಯೆಯಲ್ಲಿ ತೀವ್ರ ಲೋಪ ದೋಷಗಳು ಉಂಟಾಗಿವೆ ಎಂದು ಹಿಂದಿನ ಆಡಳಿತ ಮಂಡಳಿ ಸದಸ್ಯರಾದ ಗಣಪತಿ ಶೇಷಗಿರಿ ರಾಯ್ಸದ ಮತ್ತು ವಿನಾಯಕ ದತ್ತಾತ್ರೇಯ ಭಟ್ ಸಲ್ಲಿಸಿದ್ದ ಚುನಾವಣಾ ದಾವಾ ಅರ್ಜಿಗಳ ವಿಚಾರಣೆ ನಡೆಸಿ, ಚುನಾವಣೆಯಲ್ಲಿ ಗಂಭೀರ ಲೋಪಗಳಾಗಿರುವುದನ್ನು ಮನಗಂಡು, ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಅಧಿನಿಯಮ ೩೦(೧)ರ ಅಡಿಯಲ್ಲಿ ಈ ಆದೇಶ ಹೊರಡಿಸುತ್ತಿರುವುದಾಗಿ ಸಹಕಾರಿ ಸಂಘಗಳ ಉಪನಿಬಂದಕ ಮಂಜುನಾಥ ಸಿಂಗ್ ತಮ್ಮ ಆದೇಶ ಪತ್ರದಲ್ಲಿ ಹೇಳಿದ್ದಾರೆ.ಇವರ ಆದೇಶದಂತೆ, ಇನ್ನು ಗರಿಷ್ಠ ಆರು ತಿಂಗಳ ಕಾಲ ವಿಶೇಷಾಧಿಕಾರಿಯ ಅಧಿಕಾರವಿರಲಿದೆ. ಅವರ ಅಧಿಕಾರಾವಧಿಯ ಕೊನೆಯೊಳಗೆ ಚುನಾವಣೆ ನಡೆಸಿ ಆಡಳಿತ ಮಂಡಳಿ ಸ್ಥಾಪನೆಗೆ ಕ್ರಮ ಜರುಗಿಸಬೇಕೆಂದು ಕೂಡ ಅವರಿಗೆ ಸೂಚಿಸಲಾಗಿದೆ. ಅಲ್ಲದೆ ಕಚೇರಿಯ ನಿಯಂತ್ರಣಕ್ಕೆ ಒಳಪಟ್ಟು ಸಹಕಾರ ಸಂಘದ ಆಡಳಿತ ಮಂಡಳಿಯ ಅಥವಾ ಸಹಕಾರ ಸಂಘದ ಯಾರೇ ಪದಾಧಿಕಾರಿಯ ಎಲ್ಲ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸುವುದು ಹಾಗೂ ಸಹಕಾರ ಸಂಘದ ಹಿತದೃಷ್ಟಿಯಿಂದ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.