ಶಂಕರ ಜಿ. ಜಾವೂರ

ಶಿರಸಿ: ಶಾಂತಿ, ಸುವ್ಯವಸ್ಥೆ, ರಕ್ಷಣೆಗೆ ಹಗಲು-ರಾತ್ರಿಯೆನ್ನದೇ ಸದಾ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ನೆಮ್ಮದಿಯಿಂದ ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇಲ್ಲಿಯ ಪೊಲೀಸ್‌ ವಸತಿಗೃಹಗಳು ಶಿಥಿಲಾವಸ್ಥೆ ತಲುಪಿದ್ದು, ಮಳೆಯಾದರೆ ಸೋರುತ್ತವೆ.

ಬಹುತೇಕ ಗೃಹಗಳು ವಾಸಕ್ಕೆ ಯೋಗ್ಯವಿಲ್ಲ. ಆದರೂ ಅನಿವಾರ್ಯವಾಗಿ ಪೊಲೀಸ್ ಸಿಬ್ಬಂದಿ ಕುಟುಂಬ ಅಲ್ಲಿಯೇ ವಾಸಿಸುತ್ತಿದೆ.

ನಗರದ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಕ್ಕದಲ್ಲಿ ಸುಮಾರು ೫೦ ವರ್ಷಗಳ ಹಿಂದೆ ನಿರ್ಮಿಸಿದ ವಸತಿಗೃಹಗಳಿವೆ. ಕಟ್ಟಡದ ಗೋಡೆ ಕೆಲವೆಡೆ ಕುಸಿದಿದೆ. ಚಾವಣಿಯ ಹೆಂಚು, ರೀಪು ಒಂದೊಂದಾಗಿಯೇ ಉದುರಿ ಬೀಳುತ್ತಿದೆ. ಇಂದೋ, ನಾಳೆಯೋ ಬೀಳುವ ಹಂತದಲ್ಲಿದೆ, ಆದರೂ ಸಿಬ್ಬಂದಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ.

ಶಿರಸಿ ತಾಲೂಕಿನಲ್ಲಿ ಡಿವೈಎಸ್‌ಪಿ ಕಚೇರಿ, ಸಿಪಿಐ ಕಚೇರಿ, ಶಿರಸಿ ಹೊಸ ಮಾರುಕಟ್ಟೆ ಠಾಣೆ, ನಗರ ಪೊಲೀಸ್ ಠಾಣೆ, ಟ್ರಾಫಿಕ್ ಪೊಲೀಸ್ ಠಾಣೆ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆ, ಬನವಾಸಿ ಪೊಲೀಸ್ ಠಾಣೆಯಲ್ಲಿ ಸುಮಾರು ೨೪೦ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ವಸತಿಗೃಹ ಲಭ್ಯವಿಲ್ಲದ ಕಾರಣ ಕೆಲವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶಿರಸಿ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವುದರಿಂದ ಮನೆ ಬಾಡಿಗೆಯೂ ಹೆಚ್ಚಾಗಿದೆ. ತಿಂಗಳಿಗೆ ₹12ರಿಂದ ₹15 ಸಾವಿರ ಬಾಡಿಗೆ ನೀಡಿ, ವಾಸ ಮಾಡಬೇಕಾದ ಅನಿವಾರ್ಯತೆಯಲ್ಲಿ ಸಿಬ್ಬಂದಿ ಇದ್ದಾರೆ.


ಶಿರಸಿ ಗ್ರಾಮೀಣ ಹಾಗೂ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಸಮೀಪದ ವಿಶಾಲ ಜಾಗದಲ್ಲಿರುವ ಹಳೆಯ ವಸತಿ ಗೃಹಗಳನ್ನು ನೆಲಸಮಗೊಳಿಸಿ, ಮೂರ್ನಾಲ್ಕು ಹೈಟೆಕ್ ಮಾದರಿಯಲ್ಲಿ ವಸತಿ ಗೃಹ ನಿರ್ಮಿಸಲು ಸ್ಥಳಾವಕಾಶ ಇದೆ. ಪೊಲೀಸ್ ಸಿಬ್ಬಂದಿಗೆ ಉತ್ತಮ ವಸತಿಗೃಹ ನಿರ್ಮಿಸಲು ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಿದ್ದಾರೆ.

ಪಾಸ್ಟಿಕ್ ಹೊದಿಕೆ: ನಗರ ಪೊಲೀಸ್ ಠಾಣೆಯ ಸಮೀಪದಲ್ಲಿರುವ ವಸತಿಗೃಹವು ಮಳೆಗಾಲದಲ್ಲಿ ಸೋರುವುದರಿಂದ ಸಿಬ್ಬಂದಿ ತಾತ್ಕಾಲಿಕ ದುರಸ್ತಿ ಮಾಡಿಸಿಕೊಂಡು ವಾಸ ಮಾಡಿದ್ದಾರೆ. ಚಾವಣಿ ಸೋರುತ್ತಿರುವುದರಿಂದ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಸೋರುವುದನ್ನು ತಡೆಗಟ್ಟಲು ತುರ್ತು ದುರಸ್ತಿ ಅತ್ಯವಶ್ಯವಾಗಿದೆ.ಸ್ಥಳೀಯ ಸಿಬ್ಬಂದಿಗೆ ಆದ್ಯತೆ ಸಿಗಲಿ: ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿ ಶಿರಸಿಯ ಪೊಲೀಸ್ ಇಲಾಖೆಯ ವಸತಿ ಗೃಹದಲ್ಲಿಯೇ ವಾಸವಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಸತಿ ಗೃಹ ಲಭಿಸದೇ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ, ಇಲ್ಲಿನ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಆದ್ಯತೆ ನೀಡಬೇಕೆಂಬ ಮಾತು ಕೇಳಿಬಂದಿದೆ.ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ: ಈಗಾಗಲೇ ಹಳೆಯ ವಸತಿ ಕಟ್ಟಡವನ್ನು ನೆಲಸಮಗೊಳಿಸುವ ಕುರಿತು ಇಲಾಖೆಗೆ ತಿಳಿಸಲಾಗಿದೆ. ಅಲ್ಲದೇ ಅತಿ ಜೀರ್ಣಾವಸ್ಥೆಯಲ್ಲಿರುವ ವಸತಿ ಗೃಹಗಳಲ್ಲಿ ವಾಸ್ತವ್ಯಕ್ಕೆ ಸಿಬ್ಬಂದಿಗೆ ಅನುವು ಮಾಡಿಕೊಟ್ಟಿಲ್ಲ. ಮತ್ತೊಮ್ಮೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದು, ನೂತನ ವಸತಿಗೃಹ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಹೇಳಿದರು.