ವಿದ್ಯಾರ್ಥಿನಿಯರು, “ದೇಶದ ರಕ್ಷಣೆಗಾಗಿ ನೀವು ಕುಟುಂಬದಿಂದ ದೂರವಿದ್ದು ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ. ರಕ್ಷಾಬಂಧನದ ಈ ರಾಖಿ ನಿಮ್ಮ ಕೈ ಸೇರಿ, ನಮ್ಮ ಸಹೋದರಿಯರ ಪ್ರೀತಿ ಮತ್ತು ಶುಭ ಹಾರೈಕೆಗಳ ಸಂಕೇತವಾಗಲಿ” ಎಂಬ ಭಾವನೆಗಳನ್ನು ಪತ್ರಗಳಲ್ಲಿ ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿ:

ತಾಲೂಕಿನ ಕೋಳಿವಾಡ ಗ್ರಾಮದ ಹುತಾತ್ಮ ವೀರಯೋಧ ಕರವೀರಪ್ಪ ಸ್ಮಾರಕ ಸೇವಾ ಸಮಿತಿ ವತಿಯಿಂದ ರಕ್ಷಾಬಂಧನದ ಪ್ರಯುಕ್ತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮದ ಯೋಧರಿಗೆ ಗ್ರಾಮದ ಸಹೋದರಿಯರು ಪತ್ರ ಹಾಗೂ ರಾಖಿ ಕಳುಹಿಸುವ ಮೂಲಕ ವಿಶಿಷ್ಟವಾಗಿ ರಕ್ಷಾಬಂಧನ ಆಚರಿಸಿದರು.

ಗ್ರಾಮದ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಇನ್‌ಲ್ಯಾಂಡ್ ಲೆಟರ್‌ಗಳಲ್ಲಿ ಯೋಧರ ಬಗ್ಗೆ ತಮಗಿರುವ ಗೌರವ, ಪ್ರೀತಿ ಹಾಗೂ ಅಭಿಮಾನವನ್ನು ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ. ಜತೆಗೆ ರಾಖಿ ಕಳುಹಿಸಿದ್ದಾರೆ.

ದೇಶದ ಗಡಿ ಕಾಯುವ ಯೋಧರ ಸೇವೆ, ತ್ಯಾಗ, ಧೈರ್ಯ ಹಾಗೂ ದೇಶಭಕ್ತಿಯನ್ನು ಸ್ಮರಿಸಿರುವ ವಿದ್ಯಾರ್ಥಿನಿಯರು, “ದೇಶದ ರಕ್ಷಣೆಗಾಗಿ ನೀವು ಕುಟುಂಬದಿಂದ ದೂರವಿದ್ದು ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆ. ರಕ್ಷಾಬಂಧನದ ಈ ರಾಖಿ ನಿಮ್ಮ ಕೈ ಸೇರಿ, ನಮ್ಮ ಸಹೋದರಿಯರ ಪ್ರೀತಿ ಮತ್ತು ಶುಭ ಹಾರೈಕೆಗಳ ಸಂಕೇತವಾಗಲಿ” ಎಂಬ ಭಾವನೆಗಳನ್ನು ಪತ್ರಗಳಲ್ಲಿ ಹಂಚಿಕೊಂಡಿದ್ದಾರೆ. ಸತತ ನಾಲ್ಕು ವರ್ಷದಿಂದ ಯೋಧರಿಗೆ ಗ್ರಾಮದಿಂದ ರಾಖಿ ಕಳುಹಿಸಲಾಗುತ್ತಿದೆ. ಯೋಧರಿಗೆ ಗ್ರಾಮದ ಹೆಣ್ಣುಮಕ್ಕಳಿಂದ ರಾಖಿ ಹಾಗೂ ಪತ್ರ ಕಳುಹಿಸಿರುವ ಈ ವಿಶಿಷ್ಟ ಕಾರ್ಯವು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.