ಸಾಲ ತೀರುವಳಿ ಪತ್ರಕ್ಕಾಗಿ ರೈತರಿಂದ ಕೆನರಾ ಬ್ಯಾಂಕ್ ಆವರಣದಲ್ಲಿ ಧರಣಿ

| Published : Jun 04 2024, 12:30 AM IST

ಸಾಲ ತೀರುವಳಿ ಪತ್ರಕ್ಕಾಗಿ ರೈತರಿಂದ ಕೆನರಾ ಬ್ಯಾಂಕ್ ಆವರಣದಲ್ಲಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ನಿರುದ್ಯೋಗ ಸಮಸ್ಯೆಯಿಂದ ಸಕಾಲಕ್ಕೆ ಸಾಲ ತೀರಿಸಲಾಗಿರಲಿಲ್ಲ. ಈ ಬಗ್ಗೆ ಕೆನರಾ ಬ್ಯಾಂಕ್ ಸಾಲ ತೀರುವಳಿ ಮಾಡದ ಎಂ.ಆರ್.ಲಿಖಿತಾ ಅವರಿಗೆ ನ್ಯಾಯಾಲಯದ ಮೂಲಕ ನೋಟಿಸ್ ಕಳುಹಿಸಿತ್ತು. ಆನಂತರದ ಬೆಳವಣಿಗೆಯಲ್ಲಿ ಲಿಖಿತಾ ಬ್ಯಾಂಕ್ ಮ್ಯಾನೇಜರ್ ಸೂಚನೆ ಮೇರೆಗೆ 1.80 ಲಕ್ಷ ರು. ಕಟ್ಟಿ ಒನ್ ಟೈಮ್ ಸೆಟಲ್ ಮೆಂಟ್ ಯೋಜನೆ ಮೂಲಕ 2023ರ ಮಾರ್ಚ್ 31ರಂದು ಸಾಲ ತೀರುವಳಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾಲ ತೀರುವಳಿ ಮಾಡಿದ್ದರೂ ಪತ್ರ (ಎನ್ಓಸಿ) ನೀಡದೆ ಸತಾಯಿಸುತ್ತಿರುವ ಪಟ್ಟಣದ ಕೆನರಾ ಬ್ಯಾಂಕ್ ಧೋರಣೆ ವಿರುದ್ಧ ರೈತ ಮುಖಂಡರು ಬ್ಯಾಂಕ್‌ನ ಆವರಣದಲ್ಲಿ ಧರಣಿ ನಡೆಸಿದರು.

ರೈತ ಮುಖಂಡ ಸಿಂಧಘಟ್ಟ ಮುದ್ದುಕುಮಾರ್ ನೇತೃತ್ವದಲ್ಲಿ ಕೆನರಾ ಬ್ಯಾಂಕ್ ಶಾಖಾ ಕಚೇರಿಗೆ ಆಗಮಿಸಿದ ರೈತ ಮುಖಂಡರು ಧರಣಿ ಆರಂಭಿಸಿ, ತಾಲೂಕಿನ ಮಡುವಿನಕೋಡಿ ಗ್ರಾಮದ ರಂಗಸ್ವಾಮಿ ಪುತ್ರಿ ಎಂ.ಆರ್.ಲಿಖಿತಾ ಕಳೆದ 8 ವರ್ಷಗಳ ಹಿಂದೆ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ನಿಂದ 3.20 ಲಕ್ಷ ರು. ಶಿಕ್ಷಣ ಸಾಲ ಪಡೆದಿದ್ದರು ಎಂದರು.

ನಿರುದ್ಯೋಗ ಸಮಸ್ಯೆಯಿಂದ ಸಕಾಲಕ್ಕೆ ಸಾಲ ತೀರಿಸಲಾಗಿರಲಿಲ್ಲ. ಈ ಬಗ್ಗೆ ಕೆನರಾ ಬ್ಯಾಂಕ್ ಸಾಲ ತೀರುವಳಿ ಮಾಡದ ಎಂ.ಆರ್. ಲಿಖಿತಾ ಅವರಿಗೆ ನ್ಯಾಯಾಲಯದ ಮೂಲಕ ನೋಟಿಸ್ ಕಳುಹಿಸಿತ್ತು. ಆನಂತರದ ಬೆಳವಣಿಗೆಯಲ್ಲಿ ಲಿಖಿತಾ ಬ್ಯಾಂಕ್ ಮ್ಯಾನೇಜರ್ ಸೂಚನೆ ಮೇರೆಗೆ 1.80 ಲಕ್ಷ ರು. ಕಟ್ಟಿ ಒನ್ ಟೈಮ್ ಸೆಟಲ್ ಮೆಂಟ್ ಯೋಜನೆ ಮೂಲಕ 2023ರ ಮಾರ್ಚ್ 31ರಂದು ಸಾಲ ತೀರುವಳಿ ಮಾಡಿದ್ದಾರೆ ಎಂದರು.

ಸಾಲ ತೀರುವಳಿ ಮಾಡಿ ಒಂದು ವರ್ಷ ಕಳೆದಿದ್ದರೂ ಬ್ಯಾಂಕ್ ಇದುವರೆಗೂ ತೀರುವಳಿ ಪತ್ರ ನೀಡಿಲ್ಲ. ಈ ಬಗ್ಗೆ ಕೇಳಿದರೆ ಬ್ಯಾಂಕ್‌ನ ವ್ಯವಸ್ಥಾಪಕರು ಸಲ್ಲದ ಸಬೂಬು ಹೇಳಿ ಇಂದು ನಾಳೆ ಎನ್ನುತ್ತಾ ಕಾಲ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಖಿತಾ ಅವರ ಸಾಲಕ್ಕೆ ಜಾಮೀನು ಹಾಕಿದ್ದ ರೈತ ಪ್ರಕಾಶ್ ಅವರಿಗೆ ಯಾವುದೇ ಬ್ಯಾಂಕ್‌ಗಳು ಸಾಲ ನೀಡದೆ ಅವರು ಕೃಷಿ ಚಟುವಟಿಕೆಗೆ ಅಗತ್ಯ ಹಣ ಹೊಂದಿಸಲಾಗದೆ ಪರದಾಡುತ್ತಿದ್ದಾರೆ. ಅಮಾಯಕ ರೈತ ಕುಟುಂಬಗಳಿಗೆ ಕಿರುಕುಳ ನೀಡುತ್ತಿರುವ ಬ್ಯಾಂಕ್ ಕಾರ್ಯವೈಖರಿಯನ್ನು ಖಂಡಿಸಿದರು.

ರೈತ ಮುಖಂಡ ಮುದ್ದುಕುಮಾರ್ ಮಾತನಾಡಿ, ನಾವು ಏಕಾಏಕಿ ಧರಣಿಗೆ ಕುಳಿತಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಜೂನ್ 3 ರಂದು ಧರಣಿ ನಡೆಸುವುದಾಗಿ ಕಳೆದ 10 ದಿನಗಳ ಹಿಂದೆಯೇ ಬ್ಯಾಂಕ್‌ಗೆ ಲಿಖಿತ ಸೂಚನೆ ನೀಡಿದ್ದೇವೆ ಎಂದರು.

ಇಂದು ಸಂಜೆ 4.30ರೊಳಗೆ ತೀರುವಳಿ ಪ್ರಮಾಣ ಪತ್ರ ನೀಡುತ್ತೇವೆ. ಧರಣಿ ನಡೆಸದಂತೆ ದಾರಿ ತಪ್ಪಿಸಿದ ಬ್ಯಾಂಕ್‌ನ ವ್ಯವಸ್ಥಾಪಕರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲದ ಕಾರಣ ಧರಣಿ ಆರಂಭಿಸಿದ್ದೇವೆ. ಹೋರಾಟ ಮುಂದುವರಿಯಲಿದೆ ಎಂದರು.

ತೀರುವಳಿ ಪ್ರಮಾಣ ಪತ್ರ ನೀಡಲು ಮೂರು ದಿನಗಳ ಕಾಲಾವಕಾಶ ಕೇಳಿದ್ದೇವೆ. ಈ ಬಗ್ಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದು ಸಮಸ್ಯೆ ಬಗೆಹರಿಸಲು ಬ್ಯಾಂಕ್ ಸಿದ್ದವಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.

ಧರಣಿಯಲ್ಲಿ ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಅಕ್ಕಿಮಂಚನಹಳ್ಳಿ ಮಹೇಶ್, ಮಡುವಿನಕೋಡಿ ಪ್ರಕಶ್, ರಂಗಸ್ವಾಮಿ, ನೀತಿಮಂಗಲ ಮಹೇಶ್, ಚೇತನ್ ಮತ್ತಿತರರು ಇದ್ದರು.