ಕನ್ನಡಪ್ರಭ ವಾರ್ತೆ ಬಾಗಲಕೋಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿತ ಕಾರ್ಯಕ್ರಮದ ಕಲಾ ತಂಡಕ್ಕೆ ನೇರ ಹಣ ಸಂದಾಯ, ಪ್ರಾಯೋಜನೆ ಮೊತ್ತ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ರಾಜ್ಯ ಸರ್ವ ಕಲಾವಿದರ ಸಂಘದಿಂದ ನವನಗರದ ಕಲಾಭವನದ ಮುಂಭಾಗ ಧರಣಿ ಆರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿತ ಕಾರ್ಯಕ್ರಮದ ಕಲಾ ತಂಡಕ್ಕೆ ನೇರ ಹಣ ಸಂದಾಯ, ಪ್ರಾಯೋಜನೆ ಮೊತ್ತ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ರಾಜ್ಯ ಸರ್ವ ಕಲಾವಿದರ ಸಂಘದಿಂದ ನವನಗರದ ಕಲಾಭವನದ ಮುಂಭಾಗ ಧರಣಿ ಆರಂಭಗೊಂಡಿದೆ.ಬುಧವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಧರಣಿಯಲ್ಲಿ ನೂರಾರು ಕಲಾವಿದರು ಪಾಲ್ಗೊಂಡಿದ್ದು, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತಿರು ವ ಕಲಾವಿದರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಸರ್ವ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಲಕ್ಷ್ಮೇಶ್ವರ ಮಾತನಾಡಿ, ಹಲವು ವರ್ಷಗಳ ಹಿಂದೆ ಕಲಾ ತಂಡಗಳಿಗೆ ನೇರವಾಗಿ ಹಣ ಜಮಾ ಆಗುತ್ತಿತ್ತು. ಆದರೆ, ಈಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ತಮಗೆ ತಿಳಿದ ಕಲಾವಿದರನ್ನು ಆಯ್ಕೆ ಮಾಡಿ ಕಾರ್ಯಕ್ರಮ ಅಯೋಜಿಸುತ್ತಿದ್ದಾರೆ. ಕಲಾವಿದರ ಸಂಭಾವನೆ ಮೊದಲಿನಂತೆ ಸಂಘ ಸಂಸ್ಥೆ ಸೂಚಿಸಿದ ಕಲಾ ತಂಡಕ್ಕೆ ಒದಗಿಸುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು.

ಕಳೆದೆರಡು ವರ್ಷದಿಂದ ಜಿಲ್ಲಾ ಸಹಾಯಕ ನಿರ್ದೇಶಕರ ಹುದ್ದೆ ಖಾಲಿಯಿದ್ದು, ಕಲಾವಿದರ ಕೆಲಸಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ತಕ್ಷಣವೇ ಸಹಾಯಕ ನಿರ್ದೇಶಕ ಹುದ್ದೆಯನ್ನು ಭರ್ತಿ ಮಾಡಬೇಕು. ಕಲಾವಿದರ ಸಂಘದಿಂದ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಕಳೆದೆರಡು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಅದಕ್ಕಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಲಾವಿದರ ನಡಿಗೆ ಜಿಲ್ಲಾಡಳಿತದ ಕಡೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದರು.

ರಂಗಭೂಮಿಯ ಕಲಾವಿದರು ಹಲವು ಸಂಗೀತ ವಾದ್ಯಗಳೊಂದಿಗೆ ಮೂರು ದಿನ ಜನಪದ ಜಾತ್ರೆ ನಡೆಸಲಿದ್ದೇವೆ. ಇದೊಂದು ಸಾತ್ವಿಕ ಹಾಗೂ ಸಾಂಸ್ಕೃತಿಕ ಹೋರಾಟವಾಗಿದೆ ಎಂದು ಹೇಳಿದರು.ಧರಣಿಯಲ್ಲಿ ಶಶಿಕಾಂತ ನಾಯಕ, ಶಂಕ್ರಪ್ಪ ತಂಬಾಕದ, ಈಶ್ವರಪ್ಪ ಹೊರಟ್ಟಿ, ಸದಾಶಿವ ಅಗೋಶಿ, ಲಕ್ಷಮವ್ವ ಕಪರಟ್ಟಿ ಇತರರಿದ್ದರು.