ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ವ್ಯಕ್ತಿಯೊಬ್ಬರ ದೂರಿಗೆ ಸಂಬಂಧಿಸಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದು, ಇನ್ನು ಒಂದೆರಡು ದಿನಗಳಲ್ಲಿ ತಂಡ ಮಂಗಳೂರಿಗೆ ಆಗಮಿಸಿ ತನಿಖೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ನಡೆದಿದೆ. ಇದರ ನಡುವೆಯೇ ಸರ್ಕಾರ ಎಸ್‌ಐಟಿ ರಚಿಸಿರುವುದರಿಂದ ತಂಡ ಬೇರೇಯೇ ರೀತಿಯಲ್ಲಿ ತನಿಖೆ ನಡೆಸುತ್ತದೆಯೇ ಅದನ್ನೇ ಮುಂದುವರಿಸುತ್ತದೆಯೇ ಅಥವಾ ಬೇರೆಯೇ ರೀತಿಯಲ್ಲಿ ಎಸ್‌ಐಟಿ ತನಿಖೆ ನಡೆಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಎಸ್‌ಐಟಿಗೆ ಸಮಗ್ರ ತನಿಖೆ ನಡೆಸಲು ಪೂರ್ಣ ಅಧಿಕಾರ ನೀಡಿರುವುದರಿಂದ ದೂರುದಾರನ ತನಿಖೆ, ಸ್ಥಳ ತನಿಖೆ ಸೇರಿದಂತೆ ವಿವಿಧ ಮಗ್ಗುಲಲ್ಲಿ ತನಿಖೆ ನಡೆಸಲಿದೆ.ಮೊದಲ ಹಂತವಾಗಿ ಈ ನಾಲ್ವರು ಅಧಿಕಾರಿಗಳು ಬೆಂಗಳೂರಲ್ಲಿ ಸಭೆ ನಡೆಸಿದ ಬಳಿಕ ತಂಡಕ್ಕೆ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಲಿದ್ದಾರೆ. ಡಿವೈಎಸ್‌ಪಿ, ಇನ್ಸ್‌ಪೆಕ್ಟರ್, ಪಿಎಸ್‌ಐ ಹಾಗೂ ಎಎಸ್ಐ ಹಾಗೂ ಕಾನ್‌ಸ್ಟೇಬಲ್‌ಗಳ ನೇಮಕ ನಡೆಯಲಿದೆ. ಬಳಿಕ ಕೇಸಿನ ವಿಚಾರಣೆಗೆ ನಾಲ್ಕೈದು ತಂಡ ರಚಿಸಿ ಒಂದೊಂದು ತಂಡಕ್ಕೆ ಒಂದೊಂದು ಹೊಣೆ ನೀಡುವ ಸಾಧ್ಯತೆ ಇದೆ. ಶರಣಾದವನ ವಿಚಾರಣೆ, ತಾಂತ್ರಿಕ ವಿಚಾರಗಳ ಬಗ್ಗೆ ತನಿಖೆ ನಡೆಸಲಿದ್ದಾರೆ. ಅಜ್ಞಾತ ವ್ಯಕ್ತಿ ತೋರಿಸುವ ಜಾಗದಲ್ಲಿ ಹೂತಿದ್ದ ಹೆಣಗಳ ಹೊರ ತೆಗೆಯುವುದು, ಕಳೆಬರ ಸಿಕ್ಕಿದರೆ ಎಫ್‌ಎಸ್‌ಎಲ್ ವರದಿಗೆ ಕಳುಹಿಸುವುದು, ಅದರ ವರದಿ ಆಧಾರದಲ್ಲಿ ತನಿಖೆ, ಅಸ್ತಿಪಂಜರದ ಗುರುತು ಪತ್ತೆ ಕಾರ್ಯ, ನಾಪತ್ತೆಯಾದವರ ಕೇಸುಗಳ ತನಿಖೆ ಸೇರಿದಂತೆ ಹತ್ತುಹಲವು ಸಂಗತಿಗಳು ತನಿಖೆಯನ್ನು ಒಳಗೊಂಡಿರಲಿದೆ. ಅನಾಮಿಕ ವ್ಯಕ್ತಿಯ ಹೇಳಿಕೆ ಸುತ್ತ ತನಿಖೆ:
ಬೆಳ್ತಂಗಡಿ ನ್ಯಾಯಾಲಯಕ್ಕೆ ತಲೆಬುರುಡೆ ತಂದಿದ್ದ ಅಜ್ಞಾತ ವ್ಯಕ್ತಿ, ಬಳಿಕ ವಕೀಲರ ಜೊತೆ ಜುಲೈ 16 ರಂದು ಧರ್ಮಸ್ಥಳ ನೇತ್ರಾವತಿ ನದಿ ಪ್ರದೇಶದಲ್ಲಿ ಸ್ಥಳ ಮಹಜರಿಗೆ ಕಾದಿದ್ದರು. ಅಸ್ಥಿಪಂಜರ ಹೊರ ತೆಗೆದ ಜಾಗ ತೋರಿಸುತ್ತೇನೆ ಎಂದು ಅನಾಮಿಕ ವ್ಯಕ್ತಿ ಕಾದಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ಆಗಮಿಸಿರಲಿಲ್ಲ. ಪೊಲೀಸರು ಮಾಹಿತಿ ನೀಡಿದರೂ ತನಿಖೆಗೆ ಬಂದಿಲ್ಲ ಎಂದು ಅನಾಮಿಕ ವ್ಯಕ್ತಿ ಆರೋಪಿಸಿದ್ದರು. ಆದರೆ ಮಹಜರು ಪ್ರಕ್ರಿಯೆ ನಡೆಸುವುದು ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದು ಎಂದು ಬಳಿಕ ಎಸ್ಪಿ ಸಮಜಾಯಿಸಿ ನೀಡಿದ್ದರು. ಇದೇ ವೇಳೆ ಸಾಕ್ಷಿ ದೂರುದಾರ ನಾಪತ್ತೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದರು. ಈ ಅನುಮಾನ ಹಿನ್ನೆಲೆಯಲ್ಲಿ ಸಾಕ್ಷಿದಾರನ ಬ್ರೈನ್‌ಮ್ಯಾಪಿಂಗ್, ಫ್ರಿಂಗರ್ ಪ್ರಿಂಟ್ ಹಾಗೂ ನಾರ್ಕೊ ಟೆಸ್ಟ್ ಮಾಡುವ ಬಗ್ಗೆ ಎಸ್ಪಿ ಹೇಳಿಕೆ ನೀಡಿದ್ದರು.ಈಗಾಗಲೇ ಅನಾಮಿಕ ವ್ಯಕ್ತಿ ನೀಡಿದ ಕಳೆಬರವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅದರ ವರದಿಯ ಆಧಾರದಲ್ಲಿ ಎಸ್‌ಐಟಿ ತನಿಖೆ ನಡೆಸುವ ಸಂಭವ ಇದೆ. ಈಗಾಗಲೇ ಕೊಟ್ಟಿರುವ ಕಳೆಬರವನ್ನು ತೆಗೆದ ಸ್ಥಳದ ಬಗ್ಗೆ ತಂಡ ಪರಿಶೀಲಿಸುವ ಸಾಧ್ಯತೆ ಇದೆ. ಅಲ್ಲದೆ ಅಲ್ಲಿನ ಮಣ್ಣಿನ ಸ್ಯಾಂಪಲ್ ಪಡೆದು ನಿಜವಾಗಿಯೂ ಕಳೆಬರ ಅಲ್ಲಿಯೇ ಸಿಕ್ಕಿದ್ದಾ ಎಂದು ತಾಳೆ ನೋಡಲಿದೆ ಎಂದು ಮೂಲಗಳು ತಿಳಿಸಿವೆ.