ಸಾರಾಂಶ
ಕೆ. ಗೋವಿಂದ ಭಟ್ ಅವರು ಉನ್ನತ ಶೈಲಿಯ ನಾಟ್ಯ, ಶ್ರುತಿಬದ್ಧ ಮಾತಿನ ಪ್ರಭುದ್ಧತೆಯಿಂದ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಾಗಿ ಕೀರ್ತಿ ಗಳಿಸಿದ್ದಾರೆ. ಅವರು ಶ್ರೀ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಪ್ರಧಾನ ಕಲಾವಿದರಾಗಿ ಮೆರೆದವರು. ೮೪ ವರ್ಷ ಪ್ರಾಯದ ಅವರು ಸುಮಾರು ೬೦ ವರ್ಷ ಧರ್ಮಸ್ಥಳ ಒಂದೇ ಮೇಳದಲ್ಲಿ ತಿರುಗಾಟ ನಡೆಸಿ ದಾಖಲೆ ನಿರ್ಮಿಸಿದವರು.
ಕನ್ನಡಪ್ರಭ ವಾರ್ತೆ ಉಡುಪಿ
ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದಿಂದ ಅಭಿನವ ಪಾರ್ತಿಸುಬ್ಬ ಸೀತಾನದಿ ಗಣಪಯ್ಯ ಶೆಟ್ಟಿ ಅವರ ೩೭ನೇ ವರ್ಷದ ಸಂಸ್ಮರಣೆ ಸಂದರ್ಭದಲ್ಲಿ ನೀಡುವ ಪ್ರಶಸ್ತಿಗೆ ರಾಜ್ಯಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭ ಅ.7ರಂದು ಸಂಜೆ ೪.೩೦ಗಂಟೆಗೆ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.ಕೆ. ಗೋವಿಂದ ಭಟ್ ಅವರು ಉನ್ನತ ಶೈಲಿಯ ನಾಟ್ಯ, ಶ್ರುತಿಬದ್ಧ ಮಾತಿನ ಪ್ರಭುದ್ಧತೆಯಿಂದ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಾಗಿ ಕೀರ್ತಿ ಗಳಿಸಿದ್ದಾರೆ. ಅವರು ಶ್ರೀ ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಪ್ರಧಾನ ಕಲಾವಿದರಾಗಿ ಮೆರೆದವರು. ೮೪ ವರ್ಷ ಪ್ರಾಯದ ಅವರು ಸುಮಾರು ೬೦ ವರ್ಷ ಧರ್ಮಸ್ಥಳ ಒಂದೇ ಮೇಳದಲ್ಲಿ ತಿರುಗಾಟ ನಡೆಸಿ ದಾಖಲೆ ನಿರ್ಮಿಸಿದವರು.ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ್ ಶಾಸ್ತ್ರಿ, ಪರಮ ಶಿವನ್, ಮಾಧವ ಮೆನನ್ ಮೊದಲಾದವರು ಇವರ ಯಕ್ಷಗಾನ ಮತ್ತು ಭರತ ನಾಟ್ಯದ ಗುರುಗಳು. ರಾಜ ವೇಷ, ಪುಂಡು ವೇಷ, ಸ್ತ್ರೀವೇಷ ಅಲ್ಲದೆ ಹಾಸ್ಯ ಪಾತ್ರದಲ್ಲೂ ಪರಿಣತಿ ಹೊಂದಿದ ಗೋವಿಂದ ಭಟ್ಟರು ತೆಂಕುತಿಟ್ಟಿನ ದಶವತಾರಿ ಕಲಾವಿದರು. ಆಟ ಕೂಟಗಳಲ್ಲಿ ಸಮಾನ ಪ್ರತಿಭೆಯನ್ನು ಮೆರೆದ ಇವರು ಸಮರ್ಥ ಗುರುಗಳಾಗಿ ಸುಮಾರು ೭೦೦ ಶಿಷ್ಯರನ್ನು ಸಂಪಾದಿಸಿದ್ದಾರೆ. ರಾಜ್ಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ.