ಹಿರೀಸಾವೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಯೂನಿಟ್ ಅಳವಡಿಕೆಗೆ ಶುಕ್ರವಾರ ಸ್ಥಳ ವೀಕ್ಷಿಸಿ ಮಾತನಾಡಿ, ಇದರಿಂದ ವ್ಯಾಪ್ತಿಯ ಮಧುಮೇಹ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು. ಆಧುನೀಕರಣ ವ್ಯವಸ್ಥೆ ಹಾಗೂ ಜೀವನಶೈಲಿಯೊಂದಿಗೆ ಆಹಾರ ಪದ್ಧತಿಯ ಬದಲಾವಣೆಯಿಂದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಪರಿಶ್ರಮವಿಲ್ಲದ ಜೀವನ ಅನಾರೋಗ್ಯಕ್ಕೆ ಎಡೆಮಾಡಿಕೊಟ್ಟಿದ್ದು ಮಧುಮೇಹ, ರಕ್ತದೊತ್ತಡ ಹಾಗೂ ವಿವಿಧ ಕಾಯಿಲೆಗಳು ಮನುಷ್ಯನ ನೆಮ್ಮದಿ ಕಸಿದುಕೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಹಿರಿಸಾವೆಯ ಸಮುದಾಯ ಆರೋಗ್ಯ ಕೇಂದ್ರಕ್ಕೂ ಡಯಾಲಿಸಿಸ್ ಕೇಂದ್ರ ಹಾಗೂ ಮೂಲಸೌಕರ್ಯಗಳನ್ನು ಅಗತ್ಯವಾಗಿ ಒದಗಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ತಾಲೂಕಿನ ಹಿರೀಸಾವೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಯೂನಿಟ್ ಅಳವಡಿಕೆಗೆ ಶುಕ್ರವಾರ ಸ್ಥಳ ವೀಕ್ಷಿಸಿ ಮಾತನಾಡಿ, ಇದರಿಂದ ವ್ಯಾಪ್ತಿಯ ಮಧುಮೇಹ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು. ಆಧುನೀಕರಣ ವ್ಯವಸ್ಥೆ ಹಾಗೂ ಜೀವನಶೈಲಿಯೊಂದಿಗೆ ಆಹಾರ ಪದ್ಧತಿಯ ಬದಲಾವಣೆಯಿಂದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಪರಿಶ್ರಮವಿಲ್ಲದ ಜೀವನ ಅನಾರೋಗ್ಯಕ್ಕೆ ಎಡೆಮಾಡಿಕೊಟ್ಟಿದ್ದು ಮಧುಮೇಹ, ರಕ್ತದೊತ್ತಡ ಹಾಗೂ ವಿವಿಧ ಕಾಯಿಲೆಗಳು ಮನುಷ್ಯನ ನೆಮ್ಮದಿ ಕಸಿದುಕೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮುದಾಯ ಆರೋಗ್ಯ ಕೇಂದ್ರವನ್ನು ವಿವಿಧ ಅನುದಾನಗಳನ್ನು ಬಳಸಿಕೊಂಡು ಹಂತ ಹಂತವಾಗಿ ಶೌಚಾಲಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ಧಿಗೊಳಿಸಲಾಗಿದೆ. ಸಮುದಾಯ ಕೇಂದ್ರದ ನವೀಕರಣಕ್ಕೆ ಅನುದಾನ ಅಗತ್ಯವಿದ್ದು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವರ ಗಮನ ಸೆಳೆದು ಶೀಘ್ರ ಅನುದಾನ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರವಿದ್ದು ಪ್ರತಿದಿನ ೩೫೦ ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಹೊರರೋಗಿಗಳು ಆಗಮಿಸುತ್ತಾರೆ. ಯಾವುದೇ ಸಮಸ್ಯೆ ಹಾಗೂ ಗೊಂದಲವಾಗದಂತೆ ಸೌಜನ್ಯದಿಂದ ವರ್ತಿಸಿ ಜನತೆಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ಸೂಚಿಸಿದರು. ಆರೋಗ್ಯ ಇಲಾಖೆಯ ಸಿಇಒ ಅವರಿಗೆ ಸ್ಥಳದಿಂದಲೇ ಕರೆ ಮಾಡಿ, ಡಯಾಲಿಸಿಸ್ ಯೂನಿಟ್ ಹಾಗೂ ಇತರೆ ಪರಿಕರಗಳನ್ನು ತುರ್ತಾಗಿ ಅಳವಡಿಸಿ ಶೀಘ್ರದಲ್ಲಿಯೇ ಚಿಕಿತ್ಸೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಶ್ರವಣಬೆಳಗೊಳ ಆಸ್ಪತ್ರೆಯಲ್ಲಿ ಚಿಕಿತ್ಸಾ ಕೊಠಡಿ ಇಲ್ಲ. ತಾಲೂಕಿನ ಕೆಲ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದ್ದು ಹೆಚ್ಚಿನ ಅನುದಾನ ಕಲ್ಪಿಸುವಂತೆ ಒತ್ತಾಯಿಸಲಾಗುವುದು ಎಂದರು.

ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಮಾಜಿ ಅಧ್ಯಕ್ಷ ಎಚ್.ಈ. ಬೋರಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್. ರವಿಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ. ಮಹೇಶ್, ನಿರ್ದೇಶಕ ಹಿಂದಟ್ಟಿ ಬೋರೇಗೌಡ, ಪ್ರಮುಖರಾದ ವೆಂಕಟೇಶ್, ಫೈನಾನ್ಸ್ ಮಹೇಶ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಿವಸ್ವಾಮಿ, ವೈದ್ಯ ವೃಂದ ಹಾಗೂ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.