ಸುಮ್ಮನೆ ದೆಹಲಿಗೆ ಹೋಗಿ ಕೂತು ಬಂದರೆ ಹೇಗೆ ?

| Published : Apr 08 2024, 01:03 AM IST

ಸುಮ್ಮನೆ ದೆಹಲಿಗೆ ಹೋಗಿ ಕೂತು ಬಂದರೆ ಹೇಗೆ ?
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಈ ಹಿಂದೆಯೂ 165 ಭರವಸೆಗಳನ್ನು ಈಡೇರಿಸಿದ್ದೆವು. ರೈತರ ಸಾಲ ಮನ್ನಾ ಮಾಡಿದ್ದೆವು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಇಲ್ಲಿ ಆಯ್ಕೆಯಾಗಿ ದೆಹಲಿಗೆ ಹೋಗಿ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡದಿದ್ದರೆ ಹೇಗೆ? ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಕಲ್ಲ. ಸುಮ್ಮನೆ ದೆಹಲಿಗೆ ಹೋಗಿ ಕೂತು ಬಂದರೆ ಹೇಗೆ ಎಂದು ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರ ವಿರುದ್ಧ ಸಚಿವ ಶಿವಾನಂದ ಪಾಟೀಲ ವಾಗ್ದಾಳಿ ನಡೆಸಿದರು.

ಶನಿವಾರ ಜಮಖಂಡಿ ನಗರದ ಮುಖಂಡ ಬಿ.ಎಸ್.ಸಿಂಧೂರ ಅವರ ನಿವಾಸದಲ್ಲಿ ವಿವಿಧ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದಿಂದ ಪ್ರತಿವರ್ಷ 300 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಇದರಿಂದ ಆಂಧ್ರಕ್ಕೂ ಲಾಭ ಇಲ್ಲ, ನಮಗೂ ಲಾಭ ಇಲ್ಲ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೂ ರಾಷ್ಟ್ರೀಯ ಸಂಪತ್ತು ಹಾಳಾಗುತ್ತಿದೆಯಲ್ಲ. ಅದಕ್ಕೆ ಸರ್ಕಾರದ ಗಮನ ಸೆಳೆಯಬೇಕು. ಬಿಜಾಪೂರ ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಅವುಗಳ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದು ಹೇಳಿದರು.

ನಾವು ಈ ಹಿಂದೆಯೂ 165 ಭರವಸೆಗಳನ್ನು ಈಡೇರಿಸಿದ್ದೆವು. ರೈತರ ಸಾಲ ಮನ್ನಾ ಮಾಡಿದ್ದೆವು. ಈಗ ನಮ್ಮ ಪಕ್ಷದ ನಾಯಕರು ಹೇಳಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಇದರಿಂದ ಬಡವರ ಆರ್ಥಿಕ ಪ್ರಗತಿಗೆ ಬಹಳ ಸಹಕಾರಿಯಾಗಿದೆ ಎಂದರು.

ಮಗಳು ಸಂಯುಕ್ತಾ ಪಾಟೀಲ ವಿದ್ಯಾವಂತೆ, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಎಲ್ಲ ಸಮಸ್ಯೆಗಳಿಗೆ ಧ್ವನಿಯಾಗುತ್ತಾಳೆ. ಈ ಚುನಾವಣೆಯಲ್ಲಿ ಅವಳಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಬಿಜೆಪಿಯವರ ಕಾರ್ಯವೈಖರಿಗೆ ಬೇಸತ್ತು ಹಲವಾರು ಮುಖಂಡರು ಕಾಂಗ್ರೆಸ್‌ ಸೇರುತ್ತಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಕಾರ್ಯ ಸರ್ಕಾರ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಬಡ ಮಹಿಳೆಯರಿಗೆ ಪ್ರತಿ ವರ್ಷ ₹1 ಲಕ್ಷ , ರೈತರ ಸಾಲ ಮನ್ನಾ, ರೈತರು ಬೆಳೆದ ಬೆಳೆದ ಬೆಂಬಲ ಬೇಲೆ, ಯುವಕರಿಗೆ ಅಂಪ್ರೇಟಿಸ್ ₹8500 ನೀಡಲಾಗುವುದು. ನಮ್ಮ ಪಕ್ಷದ ಪ್ರಣಾಳಿಕೆಯನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಕಾರ್ಯ ಎಲ್ಲರೂ ಮಾಡಬೇಕು, ಈ ಸಾರಿ ಸಂಯುಕ್ತಾ ಪಾಟೀಲ ಅವರು ನಮ್ಮ ಕ್ಷೇತ್ರದಲ್ಲಿ ಸುಮಾರು 15 ರಿಂದ 20 ಸಾವಿರ ಮತಗಳ ಲೀಡ್ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಮುಖಂಡ ಬಿ.ಎಸ್.ಸಿಂಧೂರ ಮಾತನಾಡಿ, ಹಿಂದೆ ಮಾಡಿದ ತಪ್ಪು ಮುಂದೆ ಮಾಡಿದರೆ ರೈತಾಪಿ ವರ್ಗ ಜೀವನ ನಡೆಸುವುದು ದುಸ್ತರವಾಗುತ್ತದೆ. ಧರ್ಮದ ಆಧಾರದ ಮೇಲೆ ಮತ ಕೇಳುವುದು ಬಿಜೆಪಿಯವರ ಸಣ್ಣತನವಾಗಿದೆ. ಹಿಂದು - ಮುಸ್ಲಿಂ ಎಂದು ಭೇದ - ಭಾವ ಮೂಡಿಸಿ ಮತ ಪಡೆಯುತ್ತಾರೆ. ಇದು ನಡೆಯಲ್ಲ, ನಮಗೆ ಟೈಂ ಪಾಸ್ ಮಾಡುವ ಸಂಸದರು ಬೇಕಾಗಿಲ್ಲ. ಕೆಲಸ ಮಾಡುವ ಸಂಸದರು ನಮಗೆ ಬೇಕಾಗಿದ್ದಾರೆ ಎಂದರು.

ಈ ವೇಳೆ ಶೂರ್ಪಾಲಿ ಪಿಕೆಪಿಎಸ್ ಅಧ್ಯಕ್ಷ ರಮೇಶ ಕಣಬೂರ, ಮಹಾಲಿಂಗಪ್ಪ ಕುಂಚನೂರ, ಮಹಾಲಿಂಗಪ್ಪ ತಿಪ್ಪಣ್ಣವರ, ಈಶ್ವರ ಮಳಗೊಂಡ, ಸಂಗಪ್ಪ ಗೊಂಗನ್ನವರ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದರು. ಎಂ.ಡಿ.ಹಿಪ್ಪರಗಿ, ಮಾಮೂನ ಪಾರ್ಥನಳ್ಳಿ, ಕಾಡು ಮಾಳಿ, ನಿಖೀಲ ಪಾಟೀಲ, ಮಹಾದೇವ ಪಾಟೀಲ, ಅಬುಬಕರ ಕುಡಚಿ, ಲಿಂಗರಾಜ ಪಾಟೀಲ, ಬಸವರಾಜ ಹರಕಂಗಿ, ರೋಹಿತ ಸೂರ್ಯವಂಶಿ, ಶ್ರೀಧರ ಕಣ್ಣೂರ, ಮುಸ್ತಾಕ ಕರಜಗಿ, ಶೇಖರ ಪಾಟೀಲ ಇತರರು ಇದ್ದರು.

ಬಾಕ್ಷ್:

ಶೇ.80 ರಷ್ಟು ಮಹಿಳೆಯರು ಮತ ನೀಡುತ್ತಾರೆ. ವ್ಯಕ್ತಿ ದೊಡ್ಡನವನಲ್ಲ ಪಕ್ಷ ದೊಡ್ಡದು. ಸಂಯುಕ್ತಾ ಪಾಟೀಲ ನನ್ನ ಮಗಳಲ್ಲ ನಿಮ್ಮ ಮನೆ ಮಗಳು. ಈ ಗೆಲುವು ವಿಣಾ ಕಾಶಪ್ಪನವರ ಗೆಲುವುವಾಗುತ್ತದೆ.ಶಿವಾನಂದ ಪಾಟೀಲ. ಸಚಿವ