ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲೇ ಕಳೆದ ೨೨ ದಿನದಲ್ಲಿ ಶಂಕಿತ ಡೇಂಘಿ ಜ್ವರವು ಒರ್ವ ಯುವಕ ಹಾಗೂ ೪ ಮಕ್ಕಳನ್ನು ಬಲಿ ಪಡೆದಿದ್ದು, ತಾಲೂಕು ಆರೋಗ್ಯ ಇಲಾಖೆಯವರು ಡೆಂಘೀ ಜ್ವರ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳದೇ ಜಾಣ ಕುರುಡು ಪ್ರದರ್ಶನದಿಂದಾಗಿ ಗ್ರಾಮೀಣ ಜನರಿಗೆ ಕಂಟಕವಾಗಿ ಕಾಡುತ್ತಿರುವ ಶಂಕಿತ ಡೆಂಘೀ ಜ್ವರ ಐದು ಬಲಿ ಪಡೆದಿದೆ. ಜಿಲ್ಲಾಧಿಕಾರಿ ಭೇಟಿಯಿಂದಲೂ ಸಮಸ್ಯೆ ಬಗೆಹರಿಯದೇ ಸಮಸ್ಯೆ ಹಾಗೇ ಕಾಡುತ್ತಿದ್ದು, ತುರ್ತು ಕ್ರಮ ಕೈಗೊಳ್ಳುವಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ನಾಗರಿಕರು ದೂರಿದ್ದಾರೆ. ತಾಲೂಕಿನ ಹಳ್ಳಿಮೈಸೂರು ಹೋಬಳಿಯ ದೊಡ್ಡಹಳ್ಳಿಯ ಸೋಮಶೇಖರ್ ನಂದಿನಿ ದಂಪತಿಯ ಪುತ್ರ ಚಿರಂತ್ ಗೌಡ(೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಭೇರ್‍ಯ ಗ್ರಾಮದಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಚಿರಂತ್ ಗೌಡನಿಗೆ ನಂತರ ಕೆ.ಆರ್.ನಗರದ ಆಸ್ಪತ್ರೆಯಲ್ಲಿ ದಾಖಲಾಗಿ, ಜ್ವರ ಉಲ್ಪಣಿಸಿದ ಕಾರಣ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ. ಜೂನ್ ೨೯ರಂದು ಹಳ್ಳಿಮೈಸೂರಿನ ಕುಮಾರ್ ಎಂಬುವರ ಪುತ್ರಿ ವರ್ಷಿಕ(೮), ಜುಲೈ ೩ರಂದು ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್ ತನುಜ ದಂಪತಿಯ ಪುತ್ರಿ ಕಲಾಶ್ರೀ ಜಿ.ಎಲ್.(೧೧), ಜುಲೈ ೫ರಂದು ದೊಡ್ಡಹಳ್ಳಿಯ ರಮೇಶ್ ಅಶ್ವಿನಿ ದಂಪತಿಯ ಪುತ್ರಿ ಸಮೃದ್ಧಿ(೬), ಜುಲೈ ೧೯ರಂದು ಗೋಹಳ್ಳಿಯ ಮಂಜುನಾಥ್ ರೇಖಾ ದಂಪತಿಗಳ ಪುತ್ರ ಕುಶಾಲ್ (೨೨) ಹಾಗೂ ದೊಡ್ಡಹಳ್ಳಿಯ ಸೋಮಶೇಖರ್ ನಂದಿನಿ ದಂಪತಿಯ ಪುತ್ರ ಚಿರಂತ್ ಗೌಡ(೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೃತಪಟ್ಟವರೆಲ್ಲರೂ ಹಳ್ಳಿಮೈಸೂರು ಹೋಬಳಿಯವರಾಗಿದ್ದು, ಸ್ಥಳೀಯ ಆಡಳಿತ ವ್ಯವಸ್ಥೆಯು ಶಂಕಿತ ಜ್ವರ ನಿಯಂತ್ರಣದಲ್ಲಿ ಕೈಗೊಂಡ ತುರ್ತು ಕ್ರಮಕ್ಕೆ ಸ್ಪಷ್ಟ ನಿರ್ದಶನವಾಗಿದೆ. ತಾಲೂಕಿನಲ್ಲಿ ಈಗಾಗಲೇ ಡೆಂಘೀ ಜ್ವರ ಉಲ್ಪಣಿಸಿದ್ದು, ಡೆಂಘೀ ಜ್ವರ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ತುರ್ತು ಕಾರ್ಯ ಕೈಗೊಳ್ಳಬೇಕಿದ್ದ ತಾಲೂಕು ಪಂಚಾಯತ್ ಇಒ ಹಾಗೂ ಆರೋಗ್ಯಾಧಿಕಾರಿಗಳು ಜುಲೈ ೫ ರಂದು ಜಿಲ್ಲಾಧಿಕಾರಿಗಳು ನೀಡಿದ ಸೂಚನೆಗಳನ್ನು ಪಾಲಿಸುತ್ತಿದ್ದಾರ ಎಂಬ ಪ್ರಶ್ನೆ ಕಾಡುತ್ತಿದ್ದು, ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡದೇ, ದಾಖಲಾತಿ ಪುಸ್ತಕದಲ್ಲಿ ಸುಳ್ಳು ವರದಿ ದಾಖಲು ಮಾಡುತ್ತಿರಬಹುದು ಎಂಬ ಸಂಶಯವನ್ನು ಹಳ್ಳಿಜನರು ವ್ಯಕ್ತಪಡಿಸಿದ್ದಾರೆ.