ಸಾರಾಂಶ
ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ವತಿಯಿಂದ ಸರ್ಕಾರಿ ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ, ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನಾ ಮಂಜೂರಾತಿ ಪತ್ರ ವಿತರಣೆ ಶುಕ್ರವಾರ ನಗರದ ಧರ್ಮಸ್ಥಳ ಕಟ್ಟಡದಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಹಲವು ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿದೆ. ಹಲವಾರು ಮಹಿಳೆಯರಲ್ಲಿ ಬದಲಾವಣೆಗೆ ಸಹಕಾರಿಯಾಗಿರುವ ಯೋಜನೆಯು ಹಲವು ಕುಟುಂಬಗಳನ್ನು ಸಂತೋಷವಾಗಿಡುವಲ್ಲಿ ಸಹಕಾರಿಯಾಗಿದೆ ಎಂದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಸಾಜಿ ರಾಧಾಕೃಷ್ಣ ಆಳ್ವ ಮಾತನಾಡಿ, ಯೋಜನೆಯ ಹಲವು ಕಾರ್ಯಕ್ರಮಗಳಲ್ಲಿ ಶಿಕ್ಷಕರ ನೇಮಕ, ವಿದ್ಯಾರ್ಥಿ ವೇತನ ವಿತರಣೆಯೂ ಒಂದಾಗಿದೆ. ಸರ್ಕಾರಿ ಶಾಲೆಗಳ ಜೊತೆಗೆ ಅನುದಾನಿತ ಶಾಲೆಗಳಿಗೂ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಜತೆಗೆ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಸಮುದಾಯ ಅಭಿವೃದ್ಧಿ ಮೂಲಕ ಯೋಜನೆಯ ಲಾಭಾಂಶದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುತ್ತಿದೆ. ಸರ್ಕಾರದ ಎಲ್ಲಾ ಯೋಜನೆಗಳಿಗೆ ಪೂರಕವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.
ಶಿಕ್ಷಣ ಸಂಯೋಜಕ ಹರಿಪ್ರಸಾದ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮೂಲಕ ನಡೆಯುವ ವಿವಿಧ ಯೋಜನೆಗಳ ಮೂಲಕ ಸಾಮಾಜದ ಎಲ್ಲರ ಪ್ರಗತಿಗೂ ಅವಕಾಶ ನೀಡುತ್ತಿರುವುದನ್ನು ಶ್ಲಾಘನೀಯ ಎಂದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಮಹಾಬಲ ಕುಲಾಲ್, ಯೋಜನೆಯ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ವೇದಿಕೆಯಲ್ಲಿ ಇದ್ದರು.ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ. ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ವಂದಿಸಿದರು.