ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಎಸ್‌ಕೆಡಿಆರ್‌ಡಿಪಿ ಸಹಕಾರಿ

| Published : May 05 2024, 02:01 AM IST

ಸಾರಾಂಶ

ಮಹಿಳೆಯರ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಆರ್ಥಿಕ ಅಭಿವೃದ್ಧಿಗಾಗಿ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಈ ಯೋಜನೆಯಲ್ಲಿರುವ ಸೌಲಭ್ಯ, ಮಾಹಿತಿಗಳನ್ನು ಮಹಿಳೆಯರಿಗೆ ತಲುಪಿಸುವ ಕೆಲಸವಾಗಬೇಕು

ಕನ್ನಡಪ್ರಭ ವಾರ್ತೆ ತಿಪಟೂರು

ಮಹಿಳೆಯರ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಆರ್ಥಿಕ ಅಭಿವೃದ್ಧಿಗಾಗಿ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಈ ಯೋಜನೆಯಲ್ಲಿರುವ ಸೌಲಭ್ಯ, ಮಾಹಿತಿಗಳನ್ನು ಮಹಿಳೆಯರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು. ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಚೇರಿಯಲ್ಲಿ ತಾಲೂಕು ಜ್ಞಾನ ವಿಕಾಸ ಸಂಯೋಜಕರಿಗೆ ಆಯೋಜಿಸಿದ್ದ ಕ್ರಿಯಾ ಯೋಜನೆ ಸಭೆಯಲ್ಲಿ ಮಾತನಾಡಿದರು. ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾಗಿದೆ. ಈ ಕಾರ್ಯಕ್ರಮದಿಂದ ಮಹಿಳೆಯ ಆರ್ಥಿಕ ಸದೃಢತೆಗೆ ಮಾತ್ರ ಸೀಮಿತವಾಗದೆ ಆರೋಗ್ಯ, ಶಿಕ್ಷಣ, ಸ್ವಚ್ಚತೆ, ಸ್ವ ಉದ್ಯೋಗದ ಜೊತೆ ಕಾನೂನಿನ ಅರಿನ ಬಗ್ಗೆ ತಿಳುವಳಿಕೆ ನೀಡುತ್ತಾ ಮಹಿಳೆಯರನ್ನು ಸಶಕ್ತರನ್ನಾಗಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಕೌಟುಂಬಿಕ ಸಾಮರಸ್ಯ, ಆರೋಗ್ಯ, ನೈರ್ಮಲ್ಯ, ಮನೆಯ ಸ್ವಚ್ಚತೆ, ಸರ್ಕಾರಿ ಸೌಲಭ್ಯ ಮತ್ತು ಪೌಷ್ಠಿಕ ಆಹಾರ ಸೇವನೆ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಮೂಲಕ ಅವರಲ್ಲಿ ಜ್ಞಾನ ತುಂಬಲಾಗುತ್ತಿದೆ. ಜ್ಞಾನ ವಿಕಾಸ ಸಂಯೋಜಕಿಯರಿಗೆ ತಮ್ಮ ತಮ್ಮ ಕೇಂದ್ರದಲ್ಲಿ ಮಾಹಿತಿ ಕೊಡಲು ಜ್ಞಾನ ಶಕ್ತಿ, ಕ್ರೀಯಾಶಕ್ತಿ, ಇಚ್ಚಾ ಶಕ್ತಿ ಇರಬೇಕು. ಕೇಂದ್ರಗಳಲ್ಲಿ ವಿಶೇಷ ದಿನಾಚರಣೆಗಳು, ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುವಂತೆ ಪ್ರೇರೇಪಿಸಿದ ಅವರು ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ತಾಲೂಕು ಯೋಜನಾಧಿಕಾರಿ ಕೆ. ಉದಯ್, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ ಮಾತನಾಡಿದರು. ಆರ್ಥಿಕ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕ ಪಿ. ರೇಖಾರನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆ ಮಾಡಲಾಯಿತು. ಗ್ರಾಮಾಂತರ ಸಮನ್ವಯಾಧಿಕಾರಿ ಭಾಗ್ಯಲಕ್ಷಿ ಮತ್ತಿತರರಿದ್ದರು.