ಸ್ಪರ್ಧೆ ಸಫಲತೆಗೆ ಕೌಶಲ್ಯಾಧಾರಿತ ಶಿಕ್ಷಣ ಅಗತ್ಯ: ಡಿಸಿ

| Published : Jan 18 2024, 02:01 AM IST

ಸ್ಪರ್ಧೆ ಸಫಲತೆಗೆ ಕೌಶಲ್ಯಾಧಾರಿತ ಶಿಕ್ಷಣ ಅಗತ್ಯ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಆಧುನಿಕ ಸಮೂಹ ಮಾಧ್ಯಮಗಳು ಮುಗ್ದ ಮಕ್ಕಳ ಮನಸ್ಸನ್ನು ಪಾಠದಿಂದ ಬೇರೆಡೆ ತಿರುಗಿಸುತ್ತವೆ. ಶಿಕ್ಷಕರು ಇದಕ್ಕೆ ಆಸ್ಪದ ನೀಡದೇ ಮಕ್ಕಳು ಆಸಕ್ತಿಕರವಾಗಿ ಕಲಿಯುವಂತಹ ಕೌಶಲ್ಯ ಮೈಗೂಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದ ನಂತರ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲತೆಯಿಂದ ಕೌಶಲ್ಯಾಧಾರಿತ ಶಿಕ್ಷಣ ಬೋಧಿಸಿದಲ್ಲಿ ವಿದ್ಯಾರ್ಥಿಗಳು ಸಾಫಲ್ಯತೆ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶೈಕ್ಷಣಿಕ ಸಾಧನೆಯಲ್ಲಿ ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದ ನಂತರ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲತೆಯಿಂದ ಕೌಶಲ್ಯಾಧಾರಿತ ಶಿಕ್ಷಣ ಬೋಧಿಸಿದಲ್ಲಿ ವಿದ್ಯಾರ್ಥಿಗಳು ಸಾಫಲ್ಯತೆ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಹೇಳಿದರು.

ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಬುಧವಾರ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದೆರೆಡು ದಶಕಗಳ ಹಿಂದೆ ಬ್ಲಾಕ್ ಬೋರ್ಡ್ ಮೇಲೆ ಬರೆದು, ಪುಸ್ತಕಗಳನ್ನು ಓದಿ ಶಿಕ್ಷಣ ಕಲಿಸಲಾಗುತ್ತಿತ್ತು. ಆದರೆ ಆಧುನಿಕ ತಂತ್ರಜ್ಞಾನವು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯನ್ನೇ ಬದಲಿಸಿಬಿಟ್ಟಿದೆ. ಆಧುನಿಕ ಸಮೂಹ ಮಾಧ್ಯಮಗಳು ಮಕ್ಕಳ ಮನಸ್ಸನ್ನು ಪಾಠದಿಂದ ಬೇರೆಡೆ ತಿರುಗಿಸುತ್ತವೆ. ಶಿಕ್ಷಕರು ಇದಕ್ಕೆ ಆಸ್ಪದ ನೀಡದೇ ಮಕ್ಕಳು ಆಸಕ್ತಿಕರವಾಗಿ ಕಲಿಯುವಂತಹ ಕೌಶಲ್ಯ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಸಂಕ್ರಾತಿ ಸಂಭ್ರಮದ ಮೂಲಕ ಬೀಳ್ಕೊಡುಗೆ ನೀಡುತ್ತಿರುವುದು ಅನುಕರಣೀಯ. ಈ ಕಾರ್ಯಕ್ರಮದ ಮೂಲಕ ಸ್ಥಳೀಯ ಸಂಸ್ಕೃತಿಗೆ ಆದ್ಯತೆ ದೊರೆಯುತ್ತದೆ. ಸಂಸ್ಕಾರಯುತ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಾಲೇಜು ಆಡಳಿತ ಮಂಡಳಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಬಿ. ಆದಿಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು ಹಾಗೂ ಹಾಸ್ಯ ಕಲಾವಿದರಾದ ಕವಿತ ಸುಧೀಂದ್ರ, ಗಾಯಕ ನಿಶಾಖ್ ನಗಲಾಪುರ್, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ನಾಗರಾಜ್, ಜಂಟಿ ಕಾರ್ಯದರ್ಶಿ ಸುಮಿತ್ರ ಕೇಶವಮೂರ್ತಿ, ಖಜಾಂಚಿ ಟಿ.ಪಿ. ನಾಗರಾಜ್, ಟಿ.ಎಸ್. ಹೂವಯ್ಯಗೌಡ, ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಜಿ.ಮಧು, ಸಿ.ಎಂ. ಭಾಗ್ಯ ಪ್ರಾರ್ಥಿಸಿ, ಟಿ.ಎನ್. ಪೂರ್ಣಿಮ, ಜಿ.ಮಧು ಮತ್ತಿತರರು ಇದ್ದರು.

- - - ಬಾಕ್ಸ್‌ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಿಂಚಿದ ವಿದ್ಯಾರ್ಥಿಗಳು

ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾನಿಲಯದ ಕಾಲೇಜಿನಲ್ಲಿ ಬುಧವಾರ ಸುಗ್ಗಿ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು.

ಯುವಕರು ಪಂಚೆ, ರೇಷ್ಮೆ ಅಂಗಿ ಧರಿಸಿ ಪಕ್ಕಾ ದೇಶಿ ಹೈಕಳಂತೆ ಕಾಣಿಸಿಕೊಂಡರೆ, ನೀರೆಯರು ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಸೀರೆಯಲ್ಲಿ ಮಿಂಚಿದರು. ವಿದ್ಯಾರ್ಥಿನಿಯರು ಬಣ್ಣ-ಬಣ್ಣದ ಸೀರೆಯನ್ನುಟ್ಟು ಸಾಂಸ್ಕೃತಿಕ ಪರಂಪರೆ ಬಿಂಬಿಸಿದರೆ, ವಿದ್ಯಾರ್ಥಿಗಳು ಪಂಚೆ, ಶರ್ಟ್, ಶಲ್ಯದಲ್ಲಿ ಮಿಂಚಿದರು. ಶೃಂಗಾರಗೊಂಡು, ಅಂಗಳದ ತುಂಬ ರಂಗೋಲಿಯಿಂದ ಬಣ್ಣ ಬಣ್ಣದ ಕಲರ್ ಪೇಪರ್‌ಗಳಿಂದ ಕಂಗೊಳಿಸುತ್ತಿತ್ತು. ಕಾಲೇಜಿನ ಆವರಣದಲ್ಲಿ ಸುಗ್ಗಿ ಸಂಭ್ರಮ ಸಾಂಪ್ರದಾಯಿಕ ದಿನವನ್ನು ಬಹಳ ಅಚ್ಚುಕಟ್ಟಾಗಿ ವಿದ್ಯಾರ್ಥಿಗಳು ಆಚರಿಸಿದರು.

ಹಳ್ಳಿಯಲ್ಲಿ ರೈತರು ಸಂಕ್ರಾಂತಿ ಹಬ್ಬದ ದಿನವನ್ನು ಹೇಗೆ ಆಚರಿಸುತ್ತಾರೋ, ಅದೇ ರೀತಿಯಲ್ಲಿ ಕಬ್ಬನ್ನು ಜೋಡಿಸಿ, ಬೆಳೆದಂತಹ ಧವಸ-ಧಾನ್ಯಗಳನ್ನ ಇಟ್ಟು ರಾಶಿ ಪೂಜೆ ನೆರವೇರಿಸಿ ಈ ಸುಗ್ಗಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಇನ್ನು ವಿದ್ಯಾರ್ಥಿನಿಯರು ಜಟಕಾ ಗಾಡಿ ಹತ್ತಿ ಕಾಲೇಜು ಆವರಣಕ್ಕೆ ಆಗಮಿಸಿ ಕಾಲೇಜು ಸುತ್ತ ರೌಂಡ್‌ ಹಾಕಿದ್ದು ವಿಶೇಷವಾಗಿತ್ತು. ಭತ್ತ , ರಾಗಿ ಜೋಳ, ಹುರಳಿ ಕಾಳು ನವಣೆ ಕಡ್ಲೆಕಾಯಿ ಸೇರಿದಂತೆ ಏಳು ಬಗೆಯ ಧಾನ್ಯಗಳನ್ನು ರಾಶಿ ಹಾಕಿ, ಅಲ್ಲಿ ಕಬ್ಬಿನ ಜಲ್ಲೆಗಳನ್ನು ನಿಲ್ಲಿಸಿ ಸುಗ್ಗಿ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಈ ವೇಳೆ ಫೋಟೋಗೆ ಫೋಸ್ ನೀಡಿದ ವಿದ್ಯಾರ್ಥಿಗಳು, ಸೆಲ್ಫಿಗೆ ಪೋಸ್ ಕೊಡುತ್ತ ನಕ್ಕು ನಲಿದಾಡಿದರು. ಪರಸ್ಪರ ಎಳ್ಳು ಬೆಲ್ಲ ತಿಂದು ಸಂಕ್ರಾಂತಿ ಶುಭಾಶಯ ಕೋರಿದರು. ಒಟ್ಟಿನಲ್ಲಿ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾನಿಲಯದ ಕಾಲೇಜಿನ ವಿದ್ಯಾರ್ಥಿಗಳ ಖುಷಿಗೆ ಪಾರವೇ ಇರಲಿಲ್ಲ.

- - - -13ಎಸ್‌ಎಂಜಿಕೆಪಿ03:

ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಬುಧವಾರ ಕಾಲೇಜು ಸಭಾಂಗಣದಲ್ಲಿ ಸಂಕ್ರಾತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ನಡೆಯಿತು.

-13ಎಸ್‌ಎಂಜಿಕೆಪಿ03:

ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಬುಧವಾರ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿದ್ಯಾರ್ಥಿನಿಯರು ಸೆಲ್ಫಿಗೆ ಪೋಸ್‌ ಕೊಟ್ಟಿದ್ದು ಹೀಗೆ.