ಸಾರಾಂಶ
ವಿವಿಧ ಕೌಶಲಗಳನ್ನು ಬೆಳೆಸಿಕೊಂಡಾಗ ಮಾತ್ರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳು ವಿವಿಧ ಕೌಶಲಗಳನ್ನು ಬೆಳೆಸಿಕೊಂಡಾಗ ಮಾತ್ರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಕಿವಿಮಾತು ಹೇಳಿದರು.ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನೆ ಕೋಶ ಆಯೋಜಿಸಿದ್ದ ವಿಶ್ವಯುವ ಕೌಶಲ್ಯ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಗೆ ಯುವ ಶಕ್ತಿ ಬೇಕು. ಇದನ್ನು ಹಲವು ಕೌಶಲಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಸಾಧಿಸಬಹುದು. ಕೌಶಲಗಳ ಜೊತೆಗೆ ಉತ್ತಮ ತರಬೇತಿಯನ್ನು ಪಡೆದಾಗ ಒಳ್ಳೆಯ ಉದ್ಯೋಗ ಪಡೆಯಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತು ಸಂವಹನ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಕೌಶಲಗಳಿಂದ ಸಾಮರ್ಥ್ಯ ವೃದ್ಧಿಯಾಗಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.ಹುಬ್ಬಳ್ಳಿಯ ಗುರುಕುಲ ಸ್ಕಿಲ್‌ನ ತರಬೇತುದಾರ ರಾಜಶೇಖರ ದಿಡ್ಡಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ವಿವಿಧ ಕೌಶಲಗಳ ಅವಶ್ಯಕತೆ ಇದೆ. ಅವುಗಳನ್ನು ಪದವಿ ಹಂತದಿಂದಲೇ ಬೆಳೆಸಿಕೊಳ್ಳಲು ಸೂಕ್ತ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.
ಕೋಶದ ಸಂಯೋಜಕ ಬಸವರಾಜ ಮಾದರ ಸ್ವಾಗತಿಸಿದರು. ಉಪನ್ಯಾಸಕರಾದ ಎನ್.ಬಿ.ಹಸಬಿ, ಮಹೇಶ ಬೆನಕಟ್ಟಿ, ಎಸ್.ವೈ.ಬೊಮ್ಮಣ್ಣವರ ಇದ್ದರು.