ಬೀದಿನಾಯಿಗಳಿಗೆ ಚರ್ಮರೋಗ ವ್ಯಾಪಕ

| Published : Dec 02 2024, 01:19 AM IST

ಸಾರಾಂಶ

ಪಟ್ಟಣ ಹಾಗೂ ತಾಲೂಕಿನ ಕೇಸೂರು, ದೋಟಿಹಾಳ ಹಾಗೂ ಅನೇಕ ಗ್ರಾಮಗಳಲ್ಲಿ ಬೀದಿನಾಯಿಗಳು ಚರ್ಮರೋಗ (ಹುರುಕು, ಕಜ್ಜಿ) ದಿಂದ ಬಳಲುತ್ತಿವೆ.

ಕುಷ್ಟಗಿ ತಾಲೂಕಿನ ಹಲವೆಡೆ ವ್ಯಾಪಿಸಿದ ಹುರುಕು ಕಜ್ಜಿ ರೋಗ

ಜನರಲ್ಲಿ ಆತಂಕ, ಸೂಕ್ತ ಚಿಕಿತ್ಸೆ ಕೊಡಿಸಲು ಆಗ್ರಹ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣ ಹಾಗೂ ತಾಲೂಕಿನ ಕೇಸೂರು, ದೋಟಿಹಾಳ ಹಾಗೂ ಅನೇಕ ಗ್ರಾಮಗಳಲ್ಲಿ ಬೀದಿನಾಯಿಗಳು ಚರ್ಮರೋಗ (ಹುರುಕು, ಕಜ್ಜಿ) ದಿಂದ ಬಳಲುತ್ತಿವೆ.

ಕಳೆದ ಸುಮಾರು ಒಂದು ತಿಂಗಳಿಂದ ಈ ಬೀದಿನಾಯಿಗಳಿಗೆ ಹುರುಕು, ಕಜ್ಜಿ ರೋಗ ಕಾಣಿಸಿಕೊಂಡಿದೆ. ಒಂದು ನಾಯಿಯಲ್ಲಿ ಕಾಣಿಸಿಕೊಂಡಿದ್ದ ಈ ರೋಗ ಹಂತ ಹಂತವಾಗಿ ಇತರ ನಾಯಿಗಳಿಗೂ ಹರಡುವ ಮೂಲಕ ಈಗ ಅನೇಕ ಬೀದಿನಾಯಿಗಳಲ್ಲಿ ವ್ಯಾಪಕವಾಗಿ ಹರಡಿದೆ. ಅದರಿಂದ ಮನುಷ್ಯರಿಗೂ ಅಪಾಯ ಉಂಟಾಗಬಹುದು ಎಂಬ ಭೀತಿ ಜನರನ್ನು ಕಾಡುತ್ತಿದೆ.

ಚರ್ಮರೋಗದಿಂದ ತೀವ್ರ ಬಾಧಿತವಾಗಿರುವ ನಾಯಿಗಳು ಎಲ್ಲೆಡೆ ಕಂಡುಬರುತ್ತಿವೆ. ನಾಯಿಗಳು ಮೈ ಕಡಿತವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಕಾಲಿನಿಂದ ಪರಚಿಕೊಳ್ಳುತ್ತಿದ್ದು, ಮೈ-ಕುತ್ತಿಗೆಯಲ್ಲೆಲ್ಲ ರಕ್ತದ ಕಲೆಗಳು ಉಂಟಾಗಿವೆ. ನೆಲಕ್ಕೆ ಬಿದ್ದು ಉರುಳಾಡುತ್ತವೆ.

ಈ ರೋಗದಿಂದಾಗಿ ನಾಯಿಗಳ ಮೈಬಣ್ಣ ಬದಲಾಗಿದೆ, ಸೊರಗಿವೆ. ಈ ರೋಗ ಸಾಕುನಾಯಿಗಳಿಗೂ ತಗುಲುವ ಸಂಭವ ಇದೆ. ಈ ರೋಗಕ್ಕೆ ತುತ್ತಾದ ಬೀದಿನಾಯಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಓಡಾಡಲು ಹೆದರಿಕೆ:

ರೋಗ ತಗುಲಿದ ನಾಯಿಗಳು ವಿಚಿತ್ರವಾಗಿ ವರ್ತಿಸುತ್ತ ಗ್ರಾಮಗಳಲ್ಲಿ ಹಾಗೂ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದ ನಾಗರಿಕರು ರಸ್ತೆಯಲ್ಲಿ ಸಂಚರಿಸಲು ಹೆದರುವಂತಾಗಿದೆ ಎಂದು ಪಟ್ಟಣದ ನಿವಾಸಿ ಮಲ್ಲಿಕಾರ್ಜುನ ಹೇಳುತ್ತಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ನಾಯಿಗಳಿಗೆ ರೇಬಿಸ್‌ ಲಸಿಕೆಯನ್ನೂ ಹಾಕಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಸ್ವಚ್ಛತೆ ಕೈಗೊಳ್ಳಿ:

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿತವಾಗಿರುವ ಚಿಕನ್ ಹಾಗೂ ಮಟನ್ ಸೆಂಟರಗಳು ಸ್ವಚ್ಛತೆ ಕಾಪಾಡುತ್ತಿಲ್ಲ. ಆದ ಕಾರಣ ನಾಯಿಗಳು ಅಂಗಡಿಯ ಮುಂದೆ ಜಮಾಯಿಸುತ್ತಿದ್ದು, ಒಂದು ನಾಯಿಗೆ ಅಂಟಿರುವ ಚರ್ಮರೋಗ ಇನ್ನುಳಿದ ನಾಯಿಗಳಿಗೂ ಅಂಟುತ್ತಿದೆ. ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯವೂ ಇದೆ.