ಸಾರಾಂಶ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿ ಅನಾಮಿಕ ದೂರು ನೀಡಿದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಉತ್ಖನನ ನಡೆಸಿದರೂ ತಲೆಬುರುಡೆ ಪತ್ತೆಯಾಗಿಲ್ಲ. ಇದರ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಬಲವಾದ ಸಂಚು ಇರುವ ಶಂಕೆ ಇದೆ. ಮಾತ್ರವಲ್ಲ ಆರಂಭದಲ್ಲಿ ತಲೆಬುರುಡೆಯನ್ನು ಪ್ರದರ್ಶಿಸಿದ ಅನಾಮಿಕನ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಬಿಜೆಪಿ ಹಿರಿಯ ಮುಖಂಡ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆಗ್ರಹಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಧರ್ಮಸ್ಥಳದ ದೂರುದಾರ ಅನಾಮಿಕ ಆರಂಭದಲ್ಲಿ ಮಾನವನ ತಲೆಬುರುಡೆಯನ್ನು ಎಲ್ಲಿಂದ ತಂದಿದ್ದಾನೆ ಎಂಬ ಬಗ್ಗೆ ಇದುವರೆಗೆ ತನಿಖೆ ಆಗಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು. ಧರ್ಮಸ್ಥಳದಲ್ಲಿ ಉತ್ಖನನಕ್ಕೆ ನ್ಯಾಯಾಲಯ ಆದೇಶ ನೀಡಿದೆಯೇ ಎಂಬುದನ್ನು ತಿಳಿಸಬೇಕು. ಉಳ್ಳಾಲದ ಧಾರ್ಮಿಕ ಸ್ಥಳದಲ್ಲಿ ಉತ್ಖನನಕ್ಕೆ ಒತ್ತಾಯಿಸಿದರೆ ಕಾಂಗ್ರೆಸ್ ಸರ್ಕಾರ ಅನುಮತಿ ನೀಡುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಉನ್ನತ ತನಿಖೆ ನಡೆಯಲಿ: ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇರಳದ ಮಲಪ್ಪುರಂ ಮಾಡಲು ಮುಸ್ಲಿಂ ಲೀಗ್ ರಹಸ್ಯ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಹಿಂದುಗಳ ಶ್ರದ್ಧಾಕೇಂದ್ರ ಧರ್ಮಸ್ಥಳವನ್ನು ನಾಶಮಾಡಲು ಷಡ್ಯಂತ್ರ ಮಾಡಲಾಗಿದೆ. ಧರ್ಮಸ್ಥಳದ ವಿರುದ್ಧ ರೂಪಿಸಿರುವ ಷಡ್ಯಂತ್ರವನ್ನು ಬಯಲುಗೊಳಿಸಲು ಎನ್‌ಐಎ, ಸಿಬಿಐ, ಇಡಿ ತನಿಖೆ ನಡೆಸಬೇಕು ಎಂದು ಹರಿಕೃಷ್ಣ ಬಂಟ್ವಾಳ್ ಒತ್ತಾಯಿಸಿದರು.
ಪೂಜಾರಿ ಸೋಲಿಗೆ ಕಾಂಗ್ರೆಸ್ ಕಾರಣ:
ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಸೋಲಲು ದ.ಕ. ಜನರು ಕಾರಣ ಎಂಬ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ಖಂಡನೀಯ. ಜನಾರ್ದನ ಪೂಜಾರಿ ಅವರು ಸೋಲಲು ಕಾಂಗ್ರೆಸ್ ಪಕ್ಷವೇ ಕಾರಣ. ಅವರು ಚುನಾವಣಗೆ ಸ್ಪರ್ಧಿಸಿದ್ದ ವೇಳೆ ಕಾಂಗ್ರೆಸ್‌ನಲ್ಲಿ ಕೆಲವು ಗುಂಪುಗಳಿದ್ದವು. ಆ ಗುಂಪಿನ ಮುಖಂಡರಿಂದಲೇ ಪೂಜಾರಿ ಅವರಿಗೆ ಸೋಲಾಯಿತು ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.ಜನಾರ್ದನ ಪೂಜಾರಿ ಅವರು ಧರ್ಮಸ್ಥಳದ ಪಾವಿತ್ರ್ಯತೆ ಧಕ್ಕೆ ಉಂಟುಮಾಡುತ್ತಿರುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮುಸ್ಲಿಂ, ಕ್ರೈಸ್ತ ಮತೀಯರಿಗೆ ಪೂಜಾರಿ ಅವರು ಅವಮಾನ ಮಾಡಿಲ್ಲ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಒಬಿಸಿ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಬಿಜೆಪಿ ಜಿಲ್ಲಾ ವಕ್ತಾರರಾದ ರಾಜಗೋಪಾಲ ರೈ, ಅರುಣ್ ಜಿ. ಶೇಟ್ ಇದ್ದರು.