ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾದ ದೇಶದ ಅತಿ ಎತ್ತರದ ಸ್ಕೈಡೆಕ್ ಅನ್ನು ಬೆಂಗಳೂರಿನ ಹೊರ ವಲಯದ ಹೆಮ್ಮಿಗೆಪುರದ ಬಳಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳಿದ್ದರೆ 7 ದಿನದಲ್ಲಿ ಸಲ್ಲಿಸುವಂತೆ ಬಿಬಿಎಂಪಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಅದರೊಂದಿಗೆ, ಬೆಂಗಳೂರಿನ ಪಶ್ಚಿಮ ಹಾಗೂ ನೈಋತ್ಯ ಭಾಗದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಯೋಗ್ಯ ಸ್ಥಳಾವಕಾಶವಿದ್ದರೂ ಸಲಹೆ ನೀಡುವಂತೆ ಕೋರಿದೆ.
ಪ್ರವಾಸೋದ್ಯಮ ಉತ್ತೇಜನದ ಜತೆಗೆ ಬೆಂಗಳೂರು ನಗರವನ್ನು ವೀಕ್ಷಣೆ ಮಾಡುವ ಉದ್ದೇಶದಿಂದ ಆಕಾಶ ಗೋಪುರ ನಿರ್ಮಾಣ ಮಾಡಲು ಬಿಬಿಎಂಪಿ ತೀರ್ಮಾನಿಸಿತ್ತು. ಇದಕ್ಕಾಗಿ ಎನ್‌ಜಿಇಎಫ್, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್, ಜಿಕೆವಿಕೆ, ರೇಸ್‌ಕೋರ್ಸ್, ಬೆಂಗಳೂರು ಅರಮನೆ ಆವರಣದ ಜಾಗಗಳನ್ನು ಗುರುತಿಸಲಾಗಿತ್ತು.
ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್‌ಎಎಲ್ ವಿಮಾನ ನಿಲ್ದಾಣ ಸುರಕ್ಷತೆ ದೃಷ್ಟಿಯಿಂದ ಎನ್‌ಜಿಇಎಫ್, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್, ಜಿಕೆವಿಕೆ, ರೇಸ್‌ಕೋರ್ಸ್, ಬೆಂಗಳೂರು ಅರಮನೆ ಆವರಣದ ಜಾಗಗಳನ್ನು ಬಳಕೆ ಮಾಡಿಕೊಳ್ಳಲು ನಿರ್ಬಂಧವಿದೆ.
ಸುಮಾರು 250 ಮೀಟರ್ ಎತ್ತರದ ಆಕಾಶ ಗೋಪುರ ನಿರ್ಮಾಣ ಮಾಡಬೇಕಾಗಿದೆ. ಇದರಿಂದ ಎಚ್‌ಎಎಲ್, ಯಲಹಂಕ ಭಾಗದಲ್ಲಿ ನಿರ್ಮಾಣ ಸಾಧ್ಯವಿಲ್ಲ. ಇದರಿಂದಾಗಿ ನೈಸ್ ರಸ್ತೆ ಸಮೀಪದ ಹೆಮ್ಮಿಗೆಪುರ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ, ವಿವಿ ಆವರಣದಲ್ಲಿ ನಿರ್ಮಾಣವಾದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಹೆಮ್ಮಿಗೆಪುರದಲ್ಲಿ ಜಾಗ ಗುರುತಿಸಲಾಗಿದೆ. ಈ ಪ್ರದೇಶಕ್ಕೆ ತುಮಕೂರು, ಕನಕಪುರ, ಹೊಸೂರು ಹಾಗೂ ಮೈಸೂರು ರಸ್ತೆಗಳಿಂದ ನೈಸ್ ರಸ್ತೆ ಮುಖಾಂತರ ಇಲ್ಲಿಗೆ ತೆರಳಬಹುದಾಗಿದೆ.
ಇದು ತುರಹಳ್ಳಿ ಕಾಡಿನ ಪ್ರದೇಶಕ್ಕೆ ತೀರಾ ಸಮೀಪ ಇರುವುದರಿಂದ ಹಸಿರು ಪ್ರದೇಶದ ವೀಕ್ಷಣೆಯೊಂದಿಗೆ ಬೆಂಗಳೂರಿನ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಹೆಮ್ಮಿಗೆಪುರದ ಬಳಿ ಆಕಾಶ ಗೋಪುರ ನಿರ್ಮಾಣ ಮಾಡುವ ಸಂಬಂಧ ಆಕ್ಷೇಪಣೆಗಳು, ಸಲಹೆಗಳನ್ನು ಸಲ್ಲಿಸಬಹುದಾಗಿದೆ.
ಡೆಕ್‌ಗೆ ಸೂಕ್ತ ಎನಿಸುವ ಜಾಗ ಇದ್ದರೂ ತಿಳಿಸಿ: ಬೆಂಗಳೂರಿನ ಪಶ್ಚಿಮ, ನೈಋತ್ಯ ಭಾಗದಲ್ಲಿ ಸೂಕ್ತ ಜಾಗ ಇದ್ದಲ್ಲಿ bbmpeepc3@gamil.com ಗೆ ಅಥವಾ ಲಿಖಿತ ರೂಪದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ಆಯುಕ್ತರ ಕಚೇರಿಗೆ ಏಳು ದಿನದೊಳಗೆ ಸಲ್ಲಿಸಲು ಸೂಚಿಸಲಾಗಿದೆ.