ಕನ್ನಡಪ್ರಭ ವಾರ್ತೆ ರಾಮದುರ್ಗ ರಾಮದುರ್ಗ ಮತ್ತು ಹುಕ್ಕೇರಿಗಳಲ್ಲಿ ಜಾರಕಿಹೊಳಿ ಕುಟುಂಬದವರು ಕಾಲಿಟ್ಟರೆ ಹೊರಗಿನಿಂದ ಬಂದವರು, ಹೊರಗಿನಿಂದ ಬಂದವರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಇಲ್ಲಿಯವರಿದ್ದೇವೆ. ನಾವೇನು ಪಾಕಿಸ್ತಾನದಿಂದ ಬಂದಿಲ್ಲ. 2018ರಲ್ಲಿ ಚುನಾವಣೆಗೆ ಟಿಕೇಟ್ ಕೊಡಿಸುವಾಗ ನಾವು ಹೊರಗಿನವರಾಗಿರಲಿಲ್ಲವೇ ಎಂದು ಬೆಳಗಾವಿ ಹಾಲೂ ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಮದುರ್ಗ ಮತ್ತು ಹುಕ್ಕೇರಿಗಳಲ್ಲಿ ಜಾರಕಿಹೊಳಿ ಕುಟುಂಬದವರು ಕಾಲಿಟ್ಟರೆ ಹೊರಗಿನಿಂದ ಬಂದವರು, ಹೊರಗಿನಿಂದ ಬಂದವರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಇಲ್ಲಿಯವರಿದ್ದೇವೆ. ನಾವೇನು ಪಾಕಿಸ್ತಾನದಿಂದ ಬಂದಿಲ್ಲ. 2018ರಲ್ಲಿ ಚುನಾವಣೆಗೆ ಟಿಕೇಟ್ ಕೊಡಿಸುವಾಗ ನಾವು ಹೊರಗಿನವರಾಗಿರಲಿಲ್ಲವೇ ಎಂದು ಬೆಳಗಾವಿ ಹಾಲೂ ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಶ್ನಿಸಿದರು.ರಾಮದುರ್ಗದ ಪ್ರಗತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು, ಹಾಲು ಒಕ್ಕೂಟದ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಮದುರ್ಗದಲ್ಲಿ ಸಭೆ ಮಾಡಿ ನಾವು ಒಬ್ಬರನ್ನು ಕಣಕ್ಕಿಳಿಸಿದ್ದೆವು. ನಮ್ಮ ವಿರುದ್ಧ ಇನ್ನೊಬ್ಬರು ಕಣದಲ್ಲಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಹಾಲಿ, ಮಾಜಿ ಶಾಸಕರು ಒಂದಾಗಿದ್ದರಿಂದ ನಮ್ಮ ಬೆಂಬಲಿಗರಿಗೆ ಸೋಲಾಗಿದೆ. ಇದನ್ನೇ ನಾವು ಸವಾಲಾಗಿ ಸ್ವೀಕರಿಸಿ ಗಟ್ಟಿಯಾಗಿ ರಾಮದುರ್ಗಕ್ಕೆ ಬಂದಿದ್ದೇವೆ ಎಂದರು.
ಮುಂಬರುವ 2028ರ ಚುನಾವಣೆಯಲ್ಲಿ ನೀವೆಲ್ಲ ಒಂದಾಗಿದ್ದರೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಹೋಗಲು ಬಂದಿದ್ದೇವೆ. ನೀವು ಗಟ್ಟಿಯಾಗಿ ನಿಂತು ನಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ನಾವು ಗೋಕಾಕ ಬಿಟ್ಟು ರಾಮದುರ್ಗಕ್ಕೆ ಕಾಲಿಟ್ಟಿರಲಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವರಿಗೆ ಕೇವಲ ನಾಲ್ಕು ಸ್ಥಾನಗಳು ಬರಬಹುದು ಎಂದು ಬಿಂಬಿಸಿದ್ದರು. ಹಿರಿಯರು ಗಟ್ಟಿಯಾಗಿ ನಿಂತಿದ್ದರಿಂದ ನಮ್ಮ ಪೆನೆಲ್‌ನ 16 ಮತಗಳನ್ನು ಪಡೆದುಕೊಂಡಿದ್ದೇವೆ. ಇಂದಿನ ಸನ್ಮಾನ ಸಮಾರಂಭಕ್ಕೆ ಹೋಗದಂತೆ ಕೆಲವರಿಗೆ ಫೋನ್ ಮಾಡಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಜನ ಸೇರಿದ್ದಾರೆ. ಇಷ್ಟೊಂದು ಜನ ಸೇರಿರುವುದನ್ನು ಗಮನಿಸಿದ ಹಾಲಿ, ಮಾಜಿ ಶಾಸಕರಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಗಟ್ಟಿತನ ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ. ನಿಮ್ಮ ಕಾರ್ಯಕರ್ತರ ಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಮಾತ್ರ ಜನ ನಿಮ್ಮನ್ನು ಬೆಂಬಲಿಸುತ್ತಾರೆ. ಟಿಕೆಟ್ ಸಿಗುವುದು ಹಣೆಬರಹ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಸರಿಯಾದ ಕಾಗದ ಪತ್ರಗಳು ಬ್ಯಾಂಕಿಗೆ ತಲುಪಿದ ಒಂದು ವಾರದೊಳಗಾಗಿ ಸಾಲ ನೀಡಲು ಬ್ಯಾಂಕ್ ಸಿದ್ಧವಿದೆ. ರಾಮದುರ್ಗ ತಾಲೂಕಿನ ಕೇವಲ 37 ಸೊಸೈಟಿಗಳಿವೆ. ಹೆಚ್ಚಿನ ಸೊಸೈಟಿ ಮಾಡಿದರೆ ಹೆಚ್ಚಿನ ಸಾಲ ಲಭ್ಯವಾಗಲಿದೆ ಎಂದು ಹೇಳಿದರು.ಪಿಕೆಪಿಎಸ್ ಇಲ್ಲಿವರೆಗೆ ಕೇವಲ ಶೂನ್ಯ ಮತ್ತು ಶೇ.3ರ ಬಡ್ಡಿ ದರದಲ್ಲಿ ಕೃಷಿಗೆ ಹಾಗೂ ಪಂಪಸೆಟ್‌ಗಳಿಗೆ ಸಾಲ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ರೈತರು ಬೈಕ್, ಕಾರು ಮನೆ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ಪಿಕೆಪಿಎಸ್‌ನಲ್ಲಿ ಪಡೆಯಲು ಅವಕಾಶ ಕಲ್ಪಿಸುವ ಯೋಜನೆಗೆ ಫೆ.18 ರಂದು ಚಾಲನೆ ನೀಡಲಾಗುವುದು ಎಂದ ಅವರು, ಪಿಕೆಪಿಎಸ್ ಸದೃಢಗೊಳಿಸಿ ಎಲ್ಲ ರೀತಿಯ ಹಣಕಾಸಿನ ಸೌಲಭ್ಯ ದೊರೆಯುವಂತೆ ಹಾಗೂ ಕೆಲಸಗಾರರಿಗೆ ವಿವಿಧ ವಿಮೆ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಈ ವೇಳೆ ಹಿರಿಯ ಸಹಕಾರಿ ಪಿ.ಎಂ.ಜಗತಾಪ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ಭೋಸಲೆ ನಿರೂಪಿಸಿದರು. ಕೆ.ವಿ.ಪಾಟೀಲ ಸ್ವಾಗತಿಸಿದರು. ಎಸ್.ಎಸ್. ಡವಣ ಪ್ರಾಸ್ತಾವಿಕ ಮಾತನಾಡಿದರು.