ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂದು ಅಪಪ್ರಚಾರ: ಪ್ರಹ್ಲಾದ ಜೋಶಿ

| Published : Apr 29 2024, 01:46 AM IST / Updated: Apr 29 2024, 08:31 AM IST

ಸಾರಾಂಶ

ನೇಹಾ ಮತಾಂತರವಾಗಲು ಒಪ್ಪದಿದ್ದಾಗ ಕೊಲೆ ಮಾಡಲಾಯಿತು ಎಂದು ಆಕೆಯ ತಂದೆಯೇ ಹೇಳಿದ್ದರೂ ವೈಯಕ್ತಿಕ ಕಾರಣಕ್ಕಾಗಿ ಕೊಲೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.

ಶಿರಸಿ: ಯಾವ್ಯಾವಾಗ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತದೋ ಆ ಸಂದರ್ಭದಲ್ಲಿ ಸಂವಿಧಾನ ಬದಲಿಸುತ್ತದೆಂಬ ಅಪಪ್ರಚಾರ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಂವಿಧಾನಕ್ಕೆ, ಅಂಬೇಡ್ಕರರಿಗೆ ಗೌರವ ನೀಡಿ ಪಂಚತೀರ್ಥ ಎಂದು ಗೌರವಿಸಿದ್ದರೆ ಅದು ಬಿಜೆಪಿಯಾಗಿದೆ. ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿರುವುದು, ಬುಡಕಟ್ಟು ಆದಿವಾಸಿ ಮಹಿಳೆ ದ್ರೌಪತಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ ಪಕ್ಷ ಬಿಜೆಪಿಯಾಗಿದೆ. ಜೀವನದ ಭದ್ರತೆಯೇ ಮೋದಿ ಗ್ಯಾರಂಟಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೇಳುವಂತಾಗಿದೆ. ರಾಮೇಶ್ವರ ಕೆಫೆ ಬ್ಲಾಸ್ಟ್ ಆದಾಗ ಸಿಲಿಂಡರ್ ಸ್ಫೋಟ ಎಂದು ಗೃಹ ಸಚಿವ ಹೇಳಿದರು. ಹುಬ್ಬಳ್ಳಿಯ ಪೊಲೀಸ್ ಠಾಣೆ ಸುಟ್ಟ ಪಿಎಫ್‌ಐ ಸಂಪರ್ಕವಿದ್ದ ೧೫೦ ಆರೋಪಿಗಳಿಗೆ ಜಾಮೀನು ನೀಡಲು ತಯಾರಾಗಿದ್ದು ಕಾಂಗ್ರೆಸ್ ಎಂದು ವಾಗ್ಧಾಳಿ ನಡೆಸಿದರು.

ಕೆಜಿ ಹಳ್ಳಿ, ಡಿಜಿ ಹಳ್ಳಿ ಗಲಭೆ ವೇಳೆ ಕಾಂಗ್ರೆಸ್‌ನ ದಲಿತ ಶಾಸಕರಿಗೆ ರಕ್ಷಣೆ ನೀಡಿಲ್ಲ. ನೇಹಾ ಮತಾಂತರವಾಗಲು ಒಪ್ಪದಿದ್ದಾಗ ಕೊಲೆ ಮಾಡಲಾಯಿತು ಎಂದು ಆಕೆಯ ತಂದೆಯೇ ಹೇಳಿದ್ದರೂ ವೈಯಕ್ತಿಕ ಕಾರಣಕ್ಕಾಗಿ ಕೊಲೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಗ್ಯಾರಂಟಿ ಹಣ ಹೊಂದಾಣಿಕೆಗಾಗಿ ಬಾಂಡ್ ಪೇಪರ್ ಬೆಲೆ, ಪಹಣಿ ಉತಾರ್ ದರ, ಹಾಲಿನ ದರ, ಹಾಲಿನ ಸಬ್ಸಿಡಿ ನಿಲ್ಲಿಸಿ, ರೆಜಿಸ್ಟ್ರೇಶನ್ ದರ ಹೆಚ್ಚಳ, ಮದ್ಯದ ದರ ಹೆಚ್ಚಳ ಮಾಡಿದ್ದಾರೆ. ಮೋದಿಯ ಗ್ಯಾರಂಟಿ ಜೀವದ ಗ್ಯಾರಂಟಿ. ನಾಚಿಗೆಗೇಡಿನ ಸರ್ಕಾರ ರಾಜ್ಯದಲ್ಲಿದೆ ಎಂದರು.

ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಕೇರಳ ಕಾಂಗ್ರೆಸ್ ಮುಖಂಡನು ಬುಡಕಟ್ಟು ಜನಾಂಗದವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಬುಡಕಟ್ಟು ಸಮುದಾವರು ಎಂದಿಗೂ ದನದ ಮಾಂಸ ತಿಂದವರಲ್ಲ. ಗೋವು, ನದಿ, ಭೂಮಿಯನ್ನು ದೇವರು ಎಂದು ಪೂಜಿಸುವವರಾಗಿದ್ದಾರೆ. ನಾವ್ಯಾರು ಕಾಂಗ್ರೆಸ್ ಜತೆ ಸೇರುವುದಿಲ್ಲ. ಬುಡಕಟ್ಟು ಜನಾಂಗವಿದ್ದ ಎಲ್ಲೂ ಕಾಂಗ್ರೆಸ್ ಆಡಳಿತಕ್ಕೆ ಬಂದಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅರಣ್ಯ ಹಕ್ಕು ಕಾಯ್ದೆ ತಂದರು. ಕಾಂಗ್ರೆಸ್ ಸರ್ಕಾರ ಅದನ್ನು ಸ್ಥಗಿತಗೊಳಿಸಿತು. ೨೦೧೨ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹೆಚ್ಚು ಹಕ್ಕುಪತ್ರ ನೀಡಲಾಯಿತು. ದಲಿತರಿಗೆ ಮತ್ತು ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರ ಮಾಡಿದೆ. ಆದರೆ ಕಾಂಗ್ರೆಸ್ ಬಂದಾಗ ಗ್ಯಾರಂಟಿ ತಂದಿತು. ದಲಿತ ಸಮುದಾಯ ಅಭಿವೃದ್ಧಿಗೆ ಮೀಸಲಿಟ್ಟ ₹೧೧೫೦೦ ಕೋಟಿ ಹಣ ತೆಗೆದು ಗ್ಯಾರಂಟಿಗೆ ನೀಡಿತು. ಎಲ್ಲ ಕೆಲಸಗಳು ಈಡೇರಲು, ಸಂಸ್ಕಾರ, ಸಂಸ್ಕೃತಿ ಉಳಿಯಲು ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜನರ ವಿಶ್ವಾಸ ಗಳಿಸಿದ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಕ್ಷಾಂತರಿಯೂ ಅಲ್ಲ, ಸ್ವಾರ್ಥಿಯೂ ಅಲ್ಲ. ೨೦೦೬ರಲ್ಲಿ ಮಂತ್ರಿಯಾಗುವ ಅವಕಾಶವಿತ್ತು. ಭಟ್ಕಳದ ಶಿವಾನಂದ ನಾಯ್ಕ ಅವರಿಗೆ ಮಂತ್ರಿ ಸ್ಥಾನ ಸಿಗುವಂತೆ ಮಾಡಿದವರು. ಸಭಾಧ್ಯಕ್ಷರಾಗಿದ್ದ ಕಾಗೇರಿ ಪ್ರತಿ ಪತ್ರಕ್ಕೆ, ಪ್ರಶ್ನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದ್ದು, ಕಾಂಗ್ರೆಸ್ ಅವಧಿಯಲ್ಲಿ ಆರ್ಥಿಕ ದುಸ್ಥಿತಿಗೆ ಹದಗೆಟ್ಟು ಚಿನ್ನ ಅಡವಿಟ್ಟಿದ್ದ ದೇಶವಾಗಿತ್ತು. ಅದೇ ಭಾರತವೀಗ ಹತ್ತು ವರ್ಷಗಳಲ್ಲಿ ಹಲವು ದೇಶಗಳಿಗೆ ಸಾಲ ನೀಡಿದ ದೇಶವಾಗಿದೆ. ಸಮರ್ಥ ಭಾರತಕ್ಕಾಗಿ ಮೋದಿ ಗೆಲ್ಲಿಸಬೇಕಿದೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಹತ್ತಡಿ ಜಾಗವನ್ನೂ ನೀಡದೇ ಪಾರ್ಥಿವ ಶರೀರವನ್ನು ಮುಂಬೈಗೆ ಕಳುಹಿಸಿದ್ದು, ಅಂಬೇಡ್ಕರ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಆಗಿದೆ. ದಲಿತರಿಗೆ ಶೇ. ೩ರಿಂದ ಶೇ. ೭ಕ್ಕೆ ಮೀಸಲಾತಿ ಏರಿಸಿದ್ದು, ಎಸ್ಸಿ ಮೀಸಲಾತಿ ಶೇ. ೧೫ಕ್ಕೆ ಹೆಚ್ಚಳ ಮಾಡಿರುವುದು ನಮ್ಮ ಪಕ್ಷವಾಗಿದೆ ಎಂದರು.

ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿದರು.