ಅನಿಷ್ಟ ಜೀತ ಪದ್ಧತಿ ಶಿಕ್ಷಾರ್ಹ ಅಪರಾಧ: ಡೀಸಿ ರವೀಂದ್ರ

| Published : Feb 12 2025, 12:34 AM IST

ಸಾರಾಂಶ

ವಿಜಿಲೆನ್ಸ್ ಕಮಿಟಿಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಬಹಳ ಮುಖ್ಯ. ಜಿಲ್ಲಾದ್ಯಂತ ಆಕಸ್ಮಿಕ ದಾಳಿಗಳನ್ನು ಕೈಗೊಂಡು, ಪ್ರಕರಣಗಳನ್ನು ದಾಖಲಿಸಿ ಸಕ್ಷಮ ಪ್ರಾಧಿಕಾರಗಳಿಂದ ಸೂಕ್ತ ಪರಿಹಾರ ಕ್ರಮಗಳನ್ನು ಒದಗಿಸುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೀತ ಪದ್ಧತಿ ಪ್ರಕರಣವನ್ನು ಶೂನ್ಯಕ್ಕೆ ತರುಬಹುದು. ಆ ನಿಟ್ಟಿನಲ್ಲಿ ಕಂಕಣ ಬದ್ಧವಾಗಿ ಕಾರ್ಯ ನಿರ್ವಹಿಸೋಣ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜೀತ ಪದ್ಧತಿ ಶಿಕ್ಷಾರ್ಹ ಅಪರಾಧ ಎಂಬುದನ್ನು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇಂದಿಗೂ ಸಹ ಅಗತ್ಯವಿದೆ. ಏಕೆಂದರೆ ಈ ಅನಿಷ್ಠ ಪದ್ಧತಿ ಇನ್ನೂ ಜೀವಂತವಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ರವರ ಸಂಯುಕ್ತಾಶ್ರಯದಲ್ಲಿ, ಮಂಗಳವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ನಡೆದ, ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀತ ಪದ್ಧತಿಯು ಇಂದಿಗೂ ಜೀವಂತವಿರುವ ಒಂದು ಅನಿಷ್ಠ ಪದ್ಧತಿಯಾಗಿದೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಬೆಳಗಾವಿ. ಬಾಗಲಕೋಟೆ, ರಾಮನಗರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಜೀತ ಪದ್ಧತಿಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಬಾಲ ಕಾರ್ಮಿಕರಾಗಿ ಕೆಲಸ ಮಾಡುವವರು ಮುಂದೆ ಜೀತಗಾರರಾಗಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ರಾಜ್ಯದಲ್ಲಿ ಜೀತಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸರ್ಕಾರ ಹಲವಾರು ಯುಕ್ತ ಕ್ರಮಗಳನ್ನು ಕೈಗೊಂಡು ಕಾನೂನುಗಳನ್ನು ಜಾರಿಗೆ ತಂದಿದೆ. ಈ ಪದ್ಧತಿಯ ನಿವಾರಣೆಯು ಕೇವಲ ಒಂದು ಇಲಾಖೆಯ ಜವಾಬ್ದಾರಿಯಾಗಿರದೆ ಎಲ್ಲಾ ಇಲಾಖೆಗಳ ಹೊಣೆಯಾಗಿರುತ್ತದೆ. ಜೀತ ಪದ್ಧತಿಗೆ ಸಿಲುಕಿದ ವ್ಯಕ್ತಿಯನ್ನು ಗುರುತಿಸಿ ಅಂತಹವರಿಗೆ ಸರ್ಕಾರದ ಪುನರ್ವಸತಿ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಈ ಕಾರ್ಯಕ್ಕೆ ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕೃಷಿ, ರೇಷ್ಮೆ, ತೋಟಗಾರಿಕೆ ತಾಕುಗಳಲ್ಲಿ, ಕಟ್ಟಡ ಕಾಮಗಾರಿ, ಬೋರ್ ವೆಲ್ ಕೊರೆಯುವ ಘಟಕಗಳಲ್ಲಿ, ನಗರ ಪ್ರದೇಶದ ಸಣ್ಣ ಕೈಗಾರಿಕೆಗಳು, ಜವಳಿ, ಸಾಮಿಲ್ ಗಳು, ಹೊಟೇಲ್, ಕಲ್ಲು ಕ್ವಾರಿ. ಮಾಂಸ ಸಂಸ್ಕರಣಾ ಘಟಕಗಳು, ಇಟ್ಟಿಗೆ ಕಾರ್ಖಾನೆ ಸೇರಿದಂತೆ ಹಲವು ವಲಯಗಳಲ್ಲಿ ಜೀತ ಕಾರ್ಮಿಕರು ಕಂಡುಬರುತ್ತಿದ್ದಾರೆ. ಅದರಲ್ಲೂ ವಲಸೆ ಜೀತ ಕಾರ್ಮಿಕರು ಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಾಣಸಿಗುತ್ತಿವೆ. ಇಂತಹ ಘಟನೆಗಳು ಕಂಡು ಬಂದಾಗ ಕಾನೂನಿನಡಿ ಅವರಿಗೆ ಸೂಕ್ತ ರಕ್ಷಣೆ ಕೊಡುವುದು ಹಾಗೂ ಇಂತಹ ಪದ್ಧತಿಗೆ ಕಾರಣರಾದ ಮುಖ್ಯಸ್ಥರು, ಮಾಲೀಕರು ಹಾಗೂ ಸಂಬಂಧಪಟ್ಟ ಎಲ್ಲರ ಮೇಲೆ ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಿದಾಗ ಈ ಪದ್ದತಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಲಿದೆ. ಈ ಕಾರ್ಯವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜರುಗಿಸುವಂತೆ ನಾನು ಈ ಮೂಲಕ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.

ವಿಜಿಲೆನ್ಸ್ ಕಮಿಟಿಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಬಹಳ ಮುಖ್ಯ. ಜಿಲ್ಲಾದ್ಯಂತ ಆಕಸ್ಮಿಕ ದಾಳಿಗಳನ್ನು ಕೈಗೊಂಡು, ಪ್ರಕರಣಗಳನ್ನು ದಾಖಲಿಸಿ ಸಕ್ಷಮ ಪ್ರಾಧಿಕಾರಗಳಿಂದ ಸೂಕ್ತ ಪರಿಹಾರ ಕ್ರಮಗಳನ್ನು ಒದಗಿಸುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೀತ ಪದ್ಧತಿ ಪ್ರಕರಣವನ್ನು ಶೂನ್ಯಕ್ಕೆ ತರುಬಹುದು. ಆ ನಿಟ್ಟಿನಲ್ಲಿ ಕಂಕಣ ಬದ್ಧವಾಗಿ ಕಾರ್ಯ ನಿರ್ವಹಿಸೋಣ ಎಂದು ಕರೆ ನೀಡಿದರು.

ಮಹಿಳಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಿರ್ಮಲ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ರವರು ಜೀತ ಪದ್ಧತಿ ನಿರ್ಮೂಲನೆಯ ಯುಕ್ತ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ಜೀತ ಪದ್ಧತಿ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಪೊಲೀಸ್ ಉಪಾಧೀಕ್ಷಕ ಎಸ್.ಶಿವಕುಮಾರ್, ಚಿಂತಾಮಣಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಮುರಳಿ, ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಮಹಿಳಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಿರ್ಮಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್, ರಾಜ್ಯ ಮಹಿಳಾ ಘಟಕದ ಜೀವಿಕ ಸಂಚಾಲಕಿ ರತ್ನಮ್ಮ, ರೂಟ್ಸ್ ಫಾರ್ ಫ್ರೀಡಂ ಸಂಸ್ಥೆಯ ರವೀಂದ್ರ, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒಗಳು , ಜೀತ ವಿಮುಕ್ತಿಗಾಗಿ ಶ್ರಮಿಸುತ್ತಿರುವ ವಿವಿಧ ಸರ್ಕಾರೇತರ ಸಂಸ್ಥೆಗಳ ಸದಸ್ಯರು ಹಾಗೂ ಪದಾಧಿಕಾರಿಗಳು ಇದ್ದರು.