ಮಹಾನ್ ಮಾನವತಾವಾದಿ ಶ್ರೀ ಬಸವಣ್ಣನವರ ಬಗ್ಗೆ ಅವಮಾನಕರವಾಗಿ, ಹಗುರವಾಗಿ ಮಾತನಾಡಿರುವುದು, ಬಸವ ಮಂಟಪ ಕೃತಿಯಲ್ಲೂ ಕೇವಲವಾಗಿ ಬರೆದಿದ್ದಾರೆಂದು ಆರೋಪಿಸಿ ಬಸವಪರ ಸಂಘಟನೆಗಳು, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಸಂಘ-ಸಂಸ್ಥೆಗಳು ನಗರದಲ್ಲಿ ಲೇಖಕ ರವಿ ಹಂಜ್ ಭಾವಚಿತ್ರಕ್ಕೆ ಚಪ್ಪಲಿಯೇಟು ಕೊಟ್ಟು, ಅಣಕು ಶವ ಸುಡುವ ಮೂಲಕ ಪ್ರತಿಭಟಿಸಿದವು.
- ಬಸವಣ್ಣನಿಗೆ ಅಪಚಾರ: ಬೀದಿಗಿಳಿದ ಬಸವಾನುಯಾಯಿಗಳು । ಕಠಿಣ ಕ್ರಮಕ್ಕೆ ಒತ್ತಾಯ- - -
ಕನ್ನಡಪ್ರಭ ವಾರ್ತೆ ದಾವಣಗೆರೆಮಹಾನ್ ಮಾನವತಾವಾದಿ ಶ್ರೀ ಬಸವಣ್ಣನವರ ಬಗ್ಗೆ ಅವಮಾನಕರವಾಗಿ, ಹಗುರವಾಗಿ ಮಾತನಾಡಿರುವುದು, ಬಸವ ಮಂಟಪ ಕೃತಿಯಲ್ಲೂ ಕೇವಲವಾಗಿ ಬರೆದಿದ್ದಾರೆಂದು ಆರೋಪಿಸಿ ಬಸವಪರ ಸಂಘಟನೆಗಳು, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಸಂಘ-ಸಂಸ್ಥೆಗಳು ನಗರದಲ್ಲಿ ಲೇಖಕ ರವಿ ಹಂಜ್ ಭಾವಚಿತ್ರಕ್ಕೆ ಚಪ್ಪಲಿಯೇಟು ಕೊಟ್ಟು, ಅಣಕು ಶವ ಸುಡುವ ಮೂಲಕ ಪ್ರತಿಭಟಿಸಿದವು.
ನಗರದ ಶ್ರೀ ಜಯದೇವ ವೃತ್ತದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ, ಬಸವ ಬಳಗ, ರಾಷ್ಟ್ರೀಯ ಬಸವ ಸೇನೆ, ಬಸವ ಕೇಂದ್ರ, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಹಿರಿಯರು, ಮಹಿಳೆಯರು, ಯುವಕ-ಯುವತಿಯರು, ಮಕ್ಕಳು, ವಿವಿಧ ಸಮುದಾಯದವರು ಒಟ್ಟಾಗಿ ಲೇಖಕ ರವಿ ಹಂಜ್ ಪ್ರತಿಕೃತಿ ದಹಿಸಿ, ರವಿ ಹಂಜ್ ಭಾವಚಿತ್ರಕ್ಕೆ ಚಪ್ಪಲಿಯೇಟು ಹಾಕಿ ಧಿಕ್ಕಾರದ ಘೋಷಣೆ ಕೂಗಿದರು.ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ಈ ವೇಳೆ ಮಾತನಾಡಿ, ಸ್ವಘೋಷಿತ ಲೇಖಕ ರವಿ ಹಂಜ್ (ರವಿ ಹಂಜಿ ಮಠ) ಈಚೆಗೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಸಂಪಾದಕತ್ವದ ವಿಶ್ವವಾಣಿ ಟಿವಿ ಸ್ಪೆಷನ್ನಲ್ಲಿ 0.17 ನಿಮಿಷದಿಂದ 0.49 ನಿಮಿಷದವರೆಗೆ ವ್ಯಕ್ತಪಡಿಸಿದ ವಿಚಾರಗಳು, ಶರಣರು ರಚಿಸಿದ ವಚನಗಳಲ್ಲಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬುದಾಗಿದೆ. ಇಂಥ ಬಸವಣ್ಣನವರಂತಹ ಮೇರು ವ್ಯಕ್ತಿತ್ವದ ಬಗ್ಗೆ ರವಿ ಹಂಜ್ (ರವಿ ಹಂಜಿ ಮಠ) ಹಗುರವಾಗಿ ಮಾತನಾಡಿದ್ದು ಅಕ್ಷಮ್ಯ ಎಂದರು.
ಬಸವಣ್ಣನವರು ನೀವು ಐತಿಹಾಸಿಕವಾಗಿ ನೋಡಿದಾಗ ಬಸವಣ್ಣನವರು ಬಿಜ್ಜಳ ರಾಜನ ಖಜಾನೆಯನ್ನು ಬಳಸಿ, ಜಂಗಮರಿಗೆ ದಾಸೋಹಕ್ಕೆ ಬಳಸಿದ್ದಾರೆ. ಕಳ ಬೇಡ ಅನ್ನೋದಕ್ಕೆ ವೈರುಧ್ಯ. ಅದು ಕೊಲ ಬೇಡ ಅಂತಾರೆ, ಬಿಜ್ಜಳನಿಗೆ ಕೊಲ್ಲಿಸಿದ್ದಾರೆ ಎಂಬುದಾಗಿ ರವಿ ಹಂಜ್ ಹೇಳಿಕೆ ನೀಡಿದ್ದಾರೆ. ಈ ರೀತಿಯ ಅನುಚಿತ, ಅಪ್ರಸ್ತುತ ಹೇಳಿಕೆ, ತೀರ್ಮಾನಗಳನ್ನು ಕೊಡುವ ಮೂಲಕ ಸಾಂಸ್ಕೃತಿಕ ನಾಯಕ, ವಿಶ್ವಗುರು, ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನವರ ಬಗ್ಗೆ ತೀವ್ರ ಅವಹೇಳನ ಮಾಡಿದ್ದನ್ನು ನಾವ್ಯಾರೂ ಕ್ಷಮಿಸುವುದಿಲ್ಲ ಎಂದು ಹೇಳಿದರು.ಸರ್ವ ಬಸವ ಭಕ್ತರಿಗೂ ಇಂತಹ ಹೇಳಿಕೆ, ಪುಸ್ತಕವು ಮಾನಸಿಕ ಘಾಸಿ ಮಾಡಿದೆ. ಇಂತಹ ಸಂದರ್ಶನ ಹಾಗೂ ಬಸವ ಮಂಟಪ ಪುಸ್ತಕವನ್ನು ಸಂಪೂರ್ಣ ನಿಷೇಧಿಸಬೇಕು. ವಿಶ್ವವಾಣಿ ಚಾನಲ್ನ ವ್ಯವಸ್ಥಾಪಕರು, ಮುಖ್ಯಸ್ಥರನ್ನು ಹಾಗೂ ಸುಳ್ಳು ವ್ಯಕ್ತಪಡಿಸಿರುವ ರವಿ ಹಂಜ್ ಅವರ ಆಕ್ಷೇಪಾರ್ಹ ವಿಷಯಗಳನ್ನು ತೆಗೆಸಿ, ತಕ್ಷಣ ಆ ಎಲ್ಲರಿಂದಲೂ ಕ್ಷಮೆ ಕೇಳಿಸಲಿ. ಮುಂದಿನ ದಿನಗಳಲ್ಲಿ ಯಾವುದೇ ಬಸವಾದಿ ಶರಣರ ವಚನ, ವಚನ ಸಾಹಿತ್ಯವನ್ನು ತಿರುಚುವ, ಅವುಗಳಿಗೆ ಧಕ್ಕೆಯುಂಟು ಮಾಡುವುದನ್ನು ಯಾರಾದರೂ ಮಾಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೀರಶೈವ ಲಿಂಗಾಯತ ಸಮಾಜದ ಯುವ ಮುಖಂಡ ಶಿವನಗೌಡ ಟಿ. ಪಾಟೀಲ ಮಾತನಾಡಿ, ಇಡೀ ವಿಶ್ವಕ್ಕೆ, ಸಮಸ್ತ ಮಾನವ ಕುಲಕ್ಕೆ ಸರ್ವಕಾಲಕ್ಕೂ ದಾರಿದೀಪ ಆಗುವಂತಹ ಸಂದೇಶ ನೀಡಿರುವ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿರುವ, ವಿವಾದಿತ ಪುಸ್ತಕ ಬಸವ ಮಂಟಪ ಬರೆದ ಲೇಖಕ ರವಿ ಹಂಜ್ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾವು ದೂರು ನೀಡಿದ್ದೇವೆ. ಇಂತಹ ಬಸವ ದ್ರೋಹಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಬಸವ ಮಂಟಪ ಪುಸ್ತಕವನ್ನು ನಿಷೇಧಿಸಿ, ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.ಬಸವಾನುಯಾಯಿಗಳಾದ ಬಸಾಪುರ ಶಶಿಧರ, ಈಶ್ವರಪ್ಪ, ಕುಸುಮಾ ಲೋಕೇಶ, ಪೂರ್ಣಿಮಾ, ಜಿ.ಎಂ.ಕುಮಾರ, ಸಿದ್ದೇಶ, ನಿರ್ಮಲಾ ಶಿವಕುಮಾರ, ರಾಜಶೇಖರ, ಹಿರೇಮಠ, ಭುವನೇಶ್ವರಿ ತಾಯಿ, ಅಮರಕಲಾ ಹಿರೇಮಠ, ಅನ್ನಪೂರ್ಣ, ವಿಭೂತಿ ಬಸವಾನಂದ ಸ್ವಾಮಿ, ಟಿಂಕರ್ ಮಂಜಣ್ಣ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿದ್ದರು.
ಇದಕ್ಕೂ ಮುನ್ನ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ, ರವಿ ಹಂಜ್ ವಿರುದ್ಧ ಸರ್ಕಾರ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲೆಂದು ಒತ್ತಾಯಿಸಲಾಯಿತು.- - -
-21ಕೆಡಿವಿಜಿ12: ದಾವಣಗೆರೆ ಶ್ರೀ ಜಯದೇವ ವೃತ್ತದಲ್ಲಿ ಲೇಖಕ ರವಿ ಹಂಜ್ ಭಾವಚಿತ್ರ, ಅಣಕು ಶವ ಸುಟ್ಟು ಬಸವಾನುಯಾಯಿಗಳು ಪ್ರತಿಭಟಿಸಿದರು.