ಸಾರಾಂಶ
ಹಾವೇರಿ: ಬೀದಿ ದೀಪ, ನೀರು, ಚರಂಡಿ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಶಿವಲಿಂಗ ನಗರದ ಕುಂಬಾರಗುಂಡಿ ಕೊಳಗೇರಿ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು.ಕಳೆದ ಏಳೆಂಟು ದಶಕಗಳಿಂದ ಕುಂಬಾರಿಕೆ ಮಾಡುತ್ತ ಬಂದಿದ್ದೇವೆ. ಕುಲ ಕಸುಬಿನ ಜೊತೆಗೆ ವೃದ್ಧರನ್ನು ಮತ್ತು ಮಕ್ಕಳನ್ನು ಸಾಕುವುದು ದುಸ್ತರವಾಗಿದೆ. ಸಮರ್ಪಕ ವೈದ್ಯಕೀಯ ಚಿಕಿತ್ಸೆ, ಮಕ್ಕಳಿಗೆ ನಿರೀಕ್ಷಿತ ಶಿಕ್ಷಣ ಸೌಲಭ್ಯ ಸಿಗುತ್ತಿಲ್ಲ. ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ರುದ್ರಪ್ಪ ಲಮಾಣಿ, ನಿಮ್ಮ ಬೇಡಿಕೆಯನ್ನು ಗಮನಿಸಿರುವೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವೆ. ಚುನಾವಣಾ ಸಂದರ್ಭದಲ್ಲಿ ತಮಗೆ ನೀಡಿರುವ ಭರವಸೆಯನ್ನು ಉಳಿಸಿಕೊಳ್ಳುವೆ. ತಮ್ಮ ಭಾವನೆಗಳನ್ನು ಗೌರವಿಸುವುದು ನನ್ನ ಕರ್ತವ್ಯ ಎಂದು ಭರವಸೆ ನೀಡಿದರು.ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕುಂಬಾರಗುಂಡಿ ನಿವಾಸಿಗಳಾದ ಆರ್.ಎಚ್. ಕುಂಬಾರ, ಸುರೇಶ ಕುಂಬಾರ, ಗುರುರಾಜ ಕುಂಬಾರ, ಹನುಮಂತಪ್ಪ ಕುಂಬಾರ, ಸುಭಾಷ ಕುಂಬಾರ, ತಿಮ್ಮಣ್ಣ ಕುಂಬಾರ, ಫಕ್ಕೀರಪ್ಪ ಕುಂಬಾರ, ಸುಮಾ ಕುಂಬಾರ, ನಾಗವ್ವ ಕುಂಬಾರ, ಲಕ್ಷ್ಮಕ್ಕ ಕುಂಬಾರ, ರೇಣುಕಾ ಕುಂಬಾರ, ಮಂಜುಳಾ ಕುಂಬಾರ, ವೀಣಾ ಕುಂಬಾರ ಇತರರು ಇದ್ದರು.