ಕೃಷ್ಣರಿಂದ ಕಾಂಗ್ರೆಸ್ ಸಂಘಟನೆ ಜೊತೆಗೆ ಅಭಿವೃದ್ಧಿಗೂ ಕೊಡುಗೆ

| Published : Dec 11 2024, 12:46 AM IST

ಸಾರಾಂಶ

ಎಸ್‌.ಎಂ ಕೃಷ್ಣ ಅವರು ಕರ್ನಾಟಕದಲ್ಲಿ ಪ್ರಾರಂಭಿಸಿದ ಪಾಂಚಜನ್ಯ ಯಾತ್ರೆ ಅಂದಿನ ಕಾಂಗ್ರೆಸ್‌ಗೆ ಮರುಹುಟ್ಟು ಅಂತಲೇ ಹೇಳಲಾಗುತ್ತದೆ.

ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರರಾಜಕೀಯ ರಂಗದಲ್ಲಿ ಅಜಾತಶತ್ರು ಎಂದೇ ಹೆಸರು ಪಡೆದ ಮಾಜಿ ಮುಖ್ಯಮಂತ್ರಿ ಎಸ್ .ಎಂ.ಕೃಷ್ಣರವರು ರಾಮನಗರ ಜಿಲ್ಲೆಯನ್ನು ಒಳಗೊಂಡಿದ್ದ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಾಂಚಜನ್ಯ ಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದವರು.1999ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಎಸ್‌.ಎಂ ಕೃಷ್ಣ ಅವರು ಅಧಿಕಾರ ಸ್ವೀಕರಿಸಿದರು. ಅದೇ ವರ್ಷ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಸಹ ಇತ್ತು. ಆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವಲ್ಲಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಎಸ್‌.ಎಂ. ಕೃಷ್ಣ ಅವರು ಯಶಸ್ವಿಯಾಗಿದ್ದರು.3 ಕ್ಷೇತ್ರಗಳಲ್ಲಿ ಗೆಲುವು ತಂದುಕೊಟ್ಟ ಪಾಂಚಜನ್ಯ ಯಾತ್ರೆ:ಎಸ್‌.ಎಂ ಕೃಷ್ಣ ಅವರು ಕರ್ನಾಟಕದಲ್ಲಿ ಪ್ರಾರಂಭಿಸಿದ ಪಾಂಚಜನ್ಯ ಯಾತ್ರೆ ಅಂದಿನ ಕಾಂಗ್ರೆಸ್‌ಗೆ ಮರುಹುಟ್ಟು ಅಂತಲೇ ಹೇಳಲಾಗುತ್ತದೆ. ಈ ಯಾತ್ರೆಯ ಮೂಲಕ ಕೃಷ್ಣರವರು ರಾಮನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ತುಂಬಿದ್ದರು.ಈ ಪಾಂಚಜನ್ಯ ಯಾತ್ರೆ ಅಂದು ಪ್ರತಿ ಮನೆ ಮನೆ ತಲುಪಿತ್ತು. ಇದರ ಪರಿಣಾಮ 1999ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಸಿ.ಎಂ.ಲಿಂಗಪ್ಪ, ಸಾತನೂರು ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್, ಮಾಗಡಿ ಕ್ಷೇತ್ರದಲ್ಲಿ ಎಚ್.ಎಂ.ರೇವಣ್ಣ ಗೆಲುವು ಸಾಧಿಸಿದ್ದರು.ಕೃಷ್ಣರವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತರುವಾಯ ಡಿ.ಕೆ.ಶಿವಕುಮಾರ್ ನಗರಾಭಿವೃದ್ಧಿ ಮತ್ತು ಸಹಕಾರ ಖಾತೆ ಸಚಿವರಾದರು. ಸಿ.ಎಂ.ಲಿಂಗಪ್ಪ ಅವರನ್ನು ಜಲ ಮಂಡಳಿ ಹಾಗೂ ಕಾಂಗ್ರೆಸ್ ನಾಯಕರಾಗಿದ್ದ ಸೈಯದ್ ಜಿಯಾ ಉಲ್ಲಾ ಅವರನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್ ಐಸಿ ) ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.ರೇಷ್ಮೆನಗರಿಯ ಪ್ರಗತಿಗೂ ಕೊಡುಗೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದ ರಾಮನಗರ ಅಭಿವೃದ್ಧಿಯಿಂದ ಸಂಪೂರ್ಣವಾಗಿ ವಂಚಿತವಾಗಿತ್ತು. ಎಸ್ .ಎಂ. ಕೃಷ್ಣರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು - ಮೈಸೂರು ನಾಲ್ಕು ಪಥದ ಹೆದ್ದಾರಿ ನಿರ್ಮಿಸಿದ್ದೆ ತಡ ರಾಮನಗರವು ಬೆಂಗಳೂರಿಗೆ ಮತ್ತಷ್ಟು ಹತ್ತಿರವಾಯಿತು.ರಾಮನಗರ ಮತ್ತು ಬೆಂಗಳೂರು ನಡುವೆ ವಾಣಿಜ್ಯ ವಹಿವಾಟು ಹೆಚ್ಚಾಗಿ ರೇಷ್ಮೆನಗರಿಯು ಆರ್ಥಿಕವಾಗಿಯೂ ಬಲಗೊಳ್ಳಲು ಕಾರಣವಾಯಿತು. ಅಲ್ಲದೆ, ಇಲ್ಲಿನ ಮಹಿಳೆಯರಿಗೆ ಬೆಂಗಳೂರಿನ ಗಾರ್ಮೆಂಟ್ಸ್‌ಗಳಲ್ಲಿ ವಿಫುಲವಾದ ಉದ್ಯೋಗಾವಕಾಶಗಳು ದೊರಕಿತು.ಸಚಿವ ಸಂಪುಟ ಸಭೆ ನಡೆಸಿದ್ದ ಕೃಷ್ಣ:ಎಸ್. ಎಂ ಕೃಷ್ಣ ಅವರಿಗೂ ತಮ್ಮ ಆಡಳಿತ ಅವಧಿಯಲ್ಲಿ ಕಾವೇರಿ ಸಮಸ್ಯೆ ತಪ್ಪಿರಲಿಲ್ಲ. ಇದನ್ನು ಸಮರ್ಥವಾಗಿ ನಿಭಾಯಿಸಿದ್ದ ನಾಯಕ ತಮ್ಮ ಅಧಿಕಾರಾವಧಿಯಲ್ಲಿ ತಮಿಳುನಾಡಿಗೆ ನೀರು ಬಿಡದೆ 2002 ಅ.7ರಿಂದ ಅ.11ರ ವರೆಗೆ 6 ದಿನಗಳ ಕಾಲ ಬೆಂಗಳೂರಿನಿಂದ ಮಂಡ್ಯಕ್ಕೆ ಪಾದಯಾತ್ರೆ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದರು.1999 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಸ್.ಎಂ ಕೃಷ್ಣಗೆ ಸಾಲು ಸಾಲು ಸಂಕಷ್ಟಗಳು ಎದುರಾಗಿದ್ದವು. ಒಂದೆಡೆ ಸತತ ಮೂರು ವರ್ಷ ಬರ ಎದುರಿಸುತ್ತಿದ್ದರೆ, ಇತ್ತ ಕಾವೇರಿ ವಿವಾದದ ಕೂಡ ಭುಗಿಲೆದಿತ್ತು. 2002 ರಲ್ಲಿ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿ ಬರಗಾಲ ಸೃಷ್ಟಿಯಾಯಿತು. ತಮಿಳುನಾಡಿಗೆ ವಾಡಿಕೆಯಂತೆ ಕಾವೇರಿ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀರಿನ ಕೊರತೆಯಿಂದಾಗಿ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸಲಿಲ್ಲ. ಇದರಿಂದ ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್ ಕದತಟ್ಟಿತು.

ತಮಿಳುನಾಡು ಕೋರಿಕೆ ಪರಿಗಣಿಸಿದ ಸುಪ್ರೀಂ ಕೋರ್ಟ್‌ ಸಂಕಷ್ಟದ ಸಮಯದಲ್ಲಿಯೂ ಪ್ರತಿದಿನ 1.25 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿತ್ತು. ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ರಾಜ್ಯಾದ್ಯಂತ ವಿಶೇಷವಾಗಿ ಕಾವೇರಿ ಕೊಳ್ಳದ ಭಾಗದಲ್ಲಿ ತೀವ್ರ ಹೋರಾಟ, ಪ್ರತಿಭಟನೆಗಳು ನಡೆದು ಹಿಂಸಾಚಾರ ಶುರುವಾಯಿತು. ರಾಜ್ಯ ಬಂದ್‌ ಕೂಡ ನಡೆಯಿತು. ರೈತರ ಹೋರಾಟದ ನಡುವೆಯೇ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲು ರಾಜ್ಯ ಸರ್ಕಾರ ನೀರು ಬಿಟ್ಟಿತು. ನೀರು ಹರಿಸುವುದನ್ನು ಖಂಡಿಸಿ ಗುರುಸ್ವಾಮಿ ಎನ್ನುವ ರೈತ ಕಬಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿ, ರೈತರ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಆಗಿದ್ದ ಎಸ್‌. ಎಂ. ಕೃಷ್ಣ ಅವರು ತಕ್ಷಣವೇ ನೀರು ನಿಲ್ಲಿಸಿ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಘೋಷಿಸಿದ್ದರು.ಬಂಗಾರಪ್ಪರವರು ಸುಗ್ರೀವಾಜ್ಞೆ ಮೂಲಕ ಕಾವೇರಿ ನೀರು ಹರಿಸದಿರುವ ಗಟ್ಟಿ ನಿಲುವು ತಳೆದಿದ್ದಂತೆ ಎಸ್.ಎಂ ಕೃಷ್ಣ ಕೂಡ ಕಾವೇರಿ ವಿಚಾರದಲ್ಲಿ ಬದ್ಧತೆಯೊಂದಿಗೆ ಗಟ್ಟಿ ನಿಲುವು ತಳೆದಿದ್ದರು. ಅಲ್ಲದೆ, ಕೃಷ್ಣರವರ ಭೇಟಿ ಕಾರಣಕ್ಕಾಗಿ ರಾಮನಗರದ ಪ್ರವಾಸಿ ಮಂದಿರ ನವೀಕರಣಗೊಂಡಿತು.

------------------------10ಕೆಆರ್ ಎಂಎನ್ 9,10.ಜೆಪಿಜಿ9.ಕಾವೇರಿ ನದಿ ನೀರಿನ ವಿವಾದದ ವೇಳೆ ಎಸ್.ಎಂ.ಕೃಷ್ಣರವರು ಪಾದಯಾತ್ರೆ ಮೂಲಕ ರಾಮನಗರಕ್ಕೆ ಆಗಮಿಸಿದ ದೃಶ್ಯ.10.ಪಾದಯಾತ್ರೆಯಲ್ಲಿ ಆಗಮಿಸಿದ ಎಸ್.ಎಂ.ಕೃಷ್ಣರವರು ಮಾಯಗಾನಹಳ್ಳಿಯ ಪಿ.ನಾಗರಾಜು ಮನೆಯ ಆವರಣದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವ ಎಚ್.ಕೆ.ಪಾಟೀಲ್ , ಮಹದೇವ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿರುವುದು.----------------------