ಸ್ಮಾರ್ಟ್‌ಸಿಟಿ ಕಳಪೆ ಕಾಮಗಾರಿ: ನ್ಯಾಯಾಂಗ ತನಿಖೆ ನಡೆಸಿ: ಕೆ.ಬಿ.ಪ್ರಸನ್ನಕುಮಾರ್‌

| Published : May 22 2024, 12:53 AM IST

ಸ್ಮಾರ್ಟ್‌ಸಿಟಿ ಕಳಪೆ ಕಾಮಗಾರಿ: ನ್ಯಾಯಾಂಗ ತನಿಖೆ ನಡೆಸಿ: ಕೆ.ಬಿ.ಪ್ರಸನ್ನಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳಪೆ ಚರಂಡಿ ನಿರ್ಮಾಣದಿಂದಾಗಿ ಮಳೆಯ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಿಂದಾಗಿ ಎಲ್ಲಿ ನೋಡಿದರೂ ರಸ್ತೆಯಲ್ಲಿ ನೀರು ನಿಂತಿದೆ. ಕಳಪೆ ಕಾಮಗಾರಿಗಳ ಬಗ್ಗೆ ನಾಗರಿಕ ಸಮಿತಿ ಹಾಗೂ ಇನ್ನಿತರ ಸಂಘಟನೆಗಳು ಹೋರಾಟ ನಡೆಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದಲ್ಲಿ ಒಂದೇ ಮಳೆಗೆ ರಸ್ತೆಗಳು ಕರೆಯಾಗಿದ್ದವು. ಸಾವಿರಾರು ಕೋಟಿ ರುಪಾಯಿ ವೆಚ್ಚ ಮಾಡಿ ಸ್ಮಾರ್ಟ್‌ಸಿಟಿ ಮಾಡಿದರೂ ಅವ್ಯವಸ್ಥೆಗೆ ಪರಿಹಾರ ಸಿಕ್ಕಿಲ್ಲ. ಇದು ಸ್ಮಾರ್ಟ್‌ಸಿಟಿ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ, ಸ್ಮಾರ್ಟ್‌ಸಿಟಿ ಕಳಪೆ ಕಾಮಗಾರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರವು ಸ್ಮಾರ್ಟ್‍ಸಿಟಿಗೆ ಒಳಪಟ್ಟಾಗ ಶಿವಮೊಗ್ಗ ನಗರ ಪೂಲ್‌ ಸ್ಮಾರ್ಟ್‌ಸಿಟಿಯಾಗಿ ಬದಲಾಗುತ್ತದೆ ಎಂದು ಇಲ್ಲಿನ ಜನ ಖುಷಿಪಟ್ಟಿದ್ದರು. ಆದರೆ, ಆ ಆಶಾ ಭಾವನೆ ಈಗ ಹುಸಿಯಾಗಿದೆ ಎಂದು ದೂರಿದರು.

ಯಾವುದೇ ಕ್ರಮ ಕೈಗೊಂಡಿಲ್ಲ:

ಕಳಪೆ ಚರಂಡಿ ನಿರ್ಮಾಣದಿಂದಾಗಿ ಮಳೆಯ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಿಂದಾಗಿ ಎಲ್ಲಿ ನೋಡಿದರೂ ರಸ್ತೆಯಲ್ಲಿ ನೀರು ನಿಂತಿದೆ. ಕಳಪೆ ಕಾಮಗಾರಿಗಳ ಬಗ್ಗೆ ನಾಗರಿಕ ಸಮಿತಿ ಹಾಗೂ ಇನ್ನಿತರ ಸಂಘಟನೆಗಳು ಹೋರಾಟ ನಡೆಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ಕಳಪೆ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದರೆ, ಇತ್ತ ಗುತ್ತಿಗೆದಾರ ಪೊಲೀಸ್ ಠಾಣೆಗೆ ದೂರು ನೀಡಿ ಆ ವ್ಯಕ್ತಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದಾರೆ. ಮನೆ ಹಾಗೂ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಕಡತಗಳನ್ನು ಪರಿಶೀಲಿಸಿ ಎಲ್ಲಿ ಕಳಪೆಯಾಗಿದೆಯೂ ಆ ಕಾಮಗಾರಿಯನ್ನು ಹೊಸದಾಗಿ ಮಾಡಲು ಆದೇಶಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್‍ಸಿಂಗ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ತ್ಯಾಗರಾಜ್, ಎಚ್.ಎಂ.ಸಂಗಯ್ಯ, ನರಸಿಂಹ ಗಂಧದಮನೆ, ಕೃಷ್ಣ, ಸಂಜಯ್ ಕಶ್ಯಪ್, ವಿನಯ್ ಇನ್ನಿತರರಿದ್ದರು.

ಕಾಮಗಾರಿಗಳ ಬಣ್ಣ ಬಯಲು

ಸುಮಾರು 960 ಕೋಟಿ ರು. ಅನುದಾನದಲ್ಲಿ ಸ್ಮಾಟ್‍ಸಿಟಿ ನಿರ್ಮಾಣವಾಗಿದ್ದು, ರಸ್ತೆ, ಚರಂಡಿ, ಪಾರ್ಕ್ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ಈ ಹಣ ಬಳಸಲಾಗಿದೆ. ಆದರೆ, ಸೋಮವಾರ ಸಂಜೆ ಸುರಿದ ಮಳೆ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಣ್ಣ ಬಯಲು ಮಾಡಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಹಾನಿಯಾಗಿರುವುದಕ್ಕೆ ಜಿಲ್ಲಾಡಳಿತ ಪರಿಹಾರ ನೀಡಬೇಕು.

ಕೆ.ಬಿ.ಪ್ರಸನ್ನಕುಮಾರ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ