ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಹಾಗೂ ಅಂಕೋಲಾ ತಾಲೂಕಿನ ಬೆಳಸೆ ಗ್ರಾಮಗಳಲ್ಲಿ ‘ಸ್ಮಾರ್ಟ್ ವಿಲೇಜ್’ ಪೈಲಟ್ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೆಎಸ್ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಕೆ ಸೈಲ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಗ್ರಾಮೀಣ ಉತ್ಪನ್ನಗಳಿಗೆ ಸಂಘಟಿತ ಮಾರುಕಟ್ಟೆ ಪ್ರವೇಶ ಕಲ್ಪಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಗುರಿ ಹೊಂದಲಾಗಿದೆ.

ಪೈಲಟ್ ಕಾರ್ಯಕ್ರಮದ ಅಡಿಯಲ್ಲಿ ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳು, ಮೀನುಗಾರಿಕೆ, ಪರಂಪರಾಗತ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಆಧಾರಿತ ಉದ್ಯಮಗಳನ್ನು ಗುರುತಿಸಿ ಸಮಗ್ರ ಬೆಂಬಲ ನೀಡಲಾಗುತ್ತದೆ. ಮಹಿಳೆಯರು ಮತ್ತು ಯುವಕರ ಸಬಲೀಕರಣದೊಂದಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು ನೀಡಲಾಗುತ್ತದೆ.

`ಸಂಪತ್ತಿ'''''''' ಕಾರ್ಯಕ್ರಮದ ಅಡಿಯಲ್ಲಿ ತರಬೇತಿ, ಮಾರ್ಗದರ್ಶನ, ಬ್ರಾಂಡಿಂಗ್, ಪ್ಯಾಕೇಜಿಂಗ್ ಹಾಗೂ ಮಾರುಕಟ್ಟೆ ಸಂಪರ್ಕದ ಸಮಗ್ರ ಸಹಾಯ ಒದಗಿಸಲಾಗುತ್ತದೆ. 12 ವಾರಗಳ ಅವಧಿಯಲ್ಲಿ ಮೂಲ ಸಮೀಕ್ಷೆ, ಉದ್ಯಮ ಗುರುತಿಸುವಿಕೆ, ಸಾಮರ್ಥ್ಯ ವೃದ್ಧಿ, ಡಿಜಿಟಲ್ ಸಬಲೀಕರಣ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯಲಿದೆ. ಗ್ರಾಮ ಪಂಚಾಯಿತಿಗಳು ಮತ್ತು ಸಂಬಂಧಿತ ಇಲಾಖೆಗಳ ಸಮನ್ವಯದ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ.

ಬೇಳೂರು ಮತ್ತು ಬೆಳಸೆ ಗ್ರಾಮಗಳಲ್ಲಿ ಆರಂಭವಾಗುತ್ತಿರುವ ಈ ಪೈಲಟ್ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಗೆ ಮಾತ್ರವಲ್ಲ, ರಾಜ್ಯದ ಇತರ ಗ್ರಾಮಗಳಿಗೆ ಮಾದರಿಯಾಗಿ ವಿಸ್ತರಿಸಬಹುದಾದ ಯೋಜನೆಯಾಗಲಿದೆ ಎಂದು ಶಾಸಕ ಸೈಲ್ ತಿಳಿಸಿದ್ದಾರೆ. ಅಲ್ಲದೇ ಈ ಯೋಜನೆಯಿಂದ 30ರಿಂದ 50ರ ವರೆಗೆ ಗ್ರಾಮಮಟ್ಟದ ಸ್ಥಿರ ಉದ್ಯಮಗಳು ರೂಪುಗೊಂಡು, ಕುಟುಂಬಗಳ ಆದಾಯದಲ್ಲಿ ಹೆಚ್ಚಳವಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.