ಸಾರಾಂಶ
ಅಶೋಕ ಸೊರಟೂರ ಲಕ್ಷ್ಮೇಶ್ವರ
ರೈತರ ಜೀವನಾಡಿಯಾಗಿರುವ ಎತ್ತುಗಳ ಬೆಲೆ ಗಗನಮುಖಿಯಾಗಿದ್ದು, ಎತ್ತುಗಳು ಬೆಲೆ ಕೇಳಿ ಕೈಕೈ ಹಿಸುಕುತ್ತ ಎದೆ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ.ಮುಂಗಾರು ಹಂಗಾಮಿನ ಮಾಗಿ ಉಳುಮೆ ಮಾಡಲು ಹಾಗೂ ಬಿತ್ತನೆ ಮಾಡಲು ರೈತರಿಗೆ ಎತ್ತುಗಳು ಅವಶ್ಯಕವಾಗಿವೆ. ಎತ್ತುಗಳನ್ನು ಖರೀದಿಸಲು ಲಕ್ಷ್ಮೇಶ್ವರ ಜಾನುವಾರು ಸಂತೆಗೆ ಹೋದಾಗ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿರುವ ಎತ್ತುಗಳು ಬೆಲೆ ಕೇಳಿ ಕಂಗಾಲಾಗುತ್ತಿದ್ದಾರೆ. ಸುಮಾರು ₹70-80 ಸಾವಿರದಿಂದ ಆರಂಭವಾಗಿ ₹1.50 ಲಕ್ಷದವರೆಗೆ ಎತ್ತುಗಳ ಬೆಲೆ ಏರಿದೆ. ರೈತರು ಬೆಲೆ ಕೇಳಿ ಹೌಹಾರುತ್ತಿದ್ದಾರೆ. ಖರೀದಿಸಲೇ ಬೇಕಾದ ಒತ್ತಡದಲ್ಲೂ ಇದ್ದಾರೆ.
ಕೆಲ ರೈತರು ಜಾನುವಾರುಗಳನ್ನು ಹಿಂಗಾರು ಹಂಗಾಮು ಮುಗಿದ ನಂತರ ಮಾರಾಟ ಮಾಡಿ ಮುಂಗಾರು ಹಂಗಾಮಿನಲ್ಲಿ ಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ಎತ್ತು, ಆಕಳು, ಎಮ್ಮೆಯ ಬೆಲೆಗಳು ಕೈಗೆಟುಕದಂತಾಗಿವೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.ಒಕ್ಕುಲತನವು ಯಾಂತ್ರಿಕೃತವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಟ್ರ್ಯಾಕ್ಟರ್, ಟಿಲ್ಲರ್ ಗಳ ಸಹಾಯದಿಂದ ಉಳುಮೆ ಹಾಗೂ ಬಿತ್ತನೆ ಮಾಡಲು ಆರಂಭಿಸಿದ್ದರಿಂದ ಜಾನುವಾರುಗಳ ಅವಲಂಬನೆ ಕಡಿಮೆಯಾದಂತೆ ಕಂಡು ಬಂದರು ಜಾನುವಾರುಗಳು ಇಲ್ಲದೆ ರೈತನ ಬಾಳು ಅಪೂರ್ಣ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ರೈತರು ತಾವು ಬೆಳೆದ ಬೆಳೆಗಳ ನಡುವೆ ಇರುವ ಕಸ ತೆಗೆಯಲು ಎಡೆ ಹೊಡೆಯುವ ಕಾರ್ಯಕ್ಕೆ ಎತ್ತುಗಳು ಅವಶ್ಯವಾಗಿವೆ, ಅಲ್ಲದೆ ಎತ್ತುಗಳಿಂದ ಬಿತ್ತನೆ ಮಾಡಿದ ಪೈರುಗಳು ನಳನಳಿಸುತ್ತ ಹುಲುಸಾಗಿ ಬೆಳೆಯುತ್ತದೆ. ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡಿದ ಪೈರುಗಳ ನಾಟಿಗಳು ಸರಿಯಾಗಿ ಮೊಳಕೆಯೊಡೆಯದೆ ಆಳದಲ್ಲಿ ಬಿದ್ದು ನಾಶವಾಗುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.ಆದ್ದರಿಂದ ಎತ್ತುಗಳು ರೈತರು ಜೀವನಾಡಿಯಾಗಿವೆ ಹಾಗೂ ಎಷ್ಟೇ ಬೆಲೆ ಹೆಚ್ಚಾದರೂ ಕೊಳ್ಳುವುದನ್ನು ನಿಲ್ಲಿಸುವುದಿಲ್ಲ ಎಂಬ ಮಾತುಗಳು ಕೇಳಿ ಬಂದವು.
ದಲ್ಲಾಳಿಗಳ ಸುಲಿಗೆ:ಗ್ರಾಮೀಣ ಭಾಗದ ರೈತರು ತಮ್ಮ ಎತ್ತುಗಳನ್ನು ಮಾರಾಟ ಮಾಡಲು ಹಾಗೂ ಕೊಳ್ಳಲು ಆಗಮಿಸುತ್ತಾರೆ. ಆಗ ಮಧ್ಯಪ್ರವೇಶ ಮಾಡುವ ದಲ್ಲಾಳಿಗಳು ಇಬ್ಬರು ರೈತರ ನಡುವೆ ಕೊಂಡಿಯಾಗಿ ಕೆಲಸ ಮಾಡಿಕೊಡುತ್ತಾರೆ. ಆದರೆ ದಲ್ಲಾಳಿಗಳು ವಸ್ತ್ರದಲ್ಲಿ ಕೈ ಬೆರಳನ್ನು ಮುಟ್ಟಿ ದರ ನಿಗದಿ ಪಡಿಸುತ್ತಾರೆ. ಹಲವು ಬಾರಿ ರೈತರು ಅವರು ಹೇಳಿದ ಬೆಲೆ ಕೊಟ್ಟು ಕೊಳ್ಳುತ್ತಾರೆ. ಇಲ್ಲವಾದಲ್ಲಿ ಆ ರೈತರಿಗೆ ವ್ಯಾಪಾರ ವಹಿವಾಟು ನಡೆಯದಂತೆ ನೋಡಿಕೊಳ್ಳುವಷ್ಟು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತದೆ. ಈ ದಲ್ಲಾಳಿಗಳ ಪೀಡುಗನ್ನು ದೂರ ಮಾಡಿ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಗಟ್ಟಲು ಎಪಿಎಂಸಿ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಜಾನುವಾರುಗಳನ್ನು ಸಾಕುವುದರಿಂದ ಹೊಲಕ್ಕೆ ಬೇಕಾದ ಕೊಟ್ಟಿಗೆ ಗೊಬ್ಬರ ಜೊತೆಯಲ್ಲಿ ಕುಟುಂಬದ ಸಂರಕ್ಷಣೆಗಾಗಿ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮನೆಯಲ್ಲಿಯೇ ಸಿಗುತ್ತವೆ. ಅದೂ ಕಲಬೆರಕೆ ಇಲ್ಲದೆ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣಕ್ಕೆ ಜಾನುವಾರುಗಳ ಕೊಡುಗೆ ಅಮೂಲ್ಯವಾಗಿದೆ ಎಂದು ಪ್ರಗತಿ ಪರ ರೈತ ಮಂಜುನಾಥ ಬಟ್ಟೂರ ಹೇಳಿದರು.