ಕುಷ್ಟಗಿ ತಾಲೂಕಿನ ಹನುಮಸಾಗರ, ಹನಮನಾಳ, ಯರಗೇರಾ, ಕುಂಬಳಾವತಿ, ಶಾಖಾಪೂರು, ಬೆನಕನಾಳ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ವೀಳ್ಯದೆಲೆಯ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಹವಾಮಾನ ವೈಪರಿತ್ಯದಿಂದಾಗಿ ಮಂಜು ಮತ್ತು ಬಿಸಿಲಿನ ತೀವ್ರತೆಯಿಂದ ವೀಳ್ಯದೆಲೆ ಇಳುವರಿ ಕುಂಠಿತವಾಗಿದ್ದು, ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದ್ದರೆ, ಗ್ರಾಹಕರಿಗೆ ಬಾಯಿ ಸುಡುವಂತೆ ಮಾಡಿದೆ.

ಮದುವೆ, ಗೃಹಪ್ರವೇಶ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಶುಭ ಕಾರ್ಯಗಳಿಗೆ ಅತ್ಯವಶ್ಯವಾಗಿ ಬೇಕಾಗಿರುವ ವೀಳ್ಯದೆಲೆಯ ಬೆಲೆಯು ಬಂಗಾರದ ಬೆಲೆಯಂತೆ ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದು, ಖರೀದಿಸುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ತಾಲೂಕಿನಾದ್ಯಂತ ಅಂದಾಜು 200ಎಕರೆಯ ಪ್ರದೇಶದಲ್ಲಿ ಕೆಲ ರೈತರು ಮಾತ್ರ ವೀಳ್ಯದೆಲೆ ಕೃಷಿಯಲ್ಲಿ ತೊಡಗಿಕೊಂಡಿದ್ದು, ಬೇಡಿಕೆಗೆ ತಕ್ಕಷ್ಟು ಸ್ಥಳೀಯವಾಗಿ ಬೆಳೆಯದ ಕಾರಣ ಅನ್ಯ ಜಿಲ್ಲೆ, ರಾಜ್ಯಗಳಿಂದ ಇಲ್ಲಿನ ವ್ಯಾಪಾರಸ್ಥರು ಆಮದು ಮಾಡಿಕೊಳ್ಳುತ್ತಿರುವದು ಅನಿವಾರ್ಯವಾಗಿದೆ.

ಕುಷ್ಟಗಿ ತಾಲೂಕಿನ ಹನುಮಸಾಗರ, ಹನಮನಾಳ, ಯರಗೇರಾ, ಕುಂಬಳಾವತಿ, ಶಾಖಾಪೂರು, ಬೆನಕನಾಳ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ವೀಳ್ಯದೆಲೆಯ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಈ ವೀಳ್ಯದೆಲೆಯು ಬಹು ಔಷಧಿ ಗುಣವುಳ್ಳ, ಪ್ರತಿ ದಿನ ಜನಸಾಮಾನ್ಯರಿಗೆ ನಿತ್ಯ ಜೀವನದಲ್ಲಿ ಬೇಕಾಗಿರುವ ಪ್ರಮುಖ ವಸ್ತು. ಧಾರ್ಮಿಕ ಪೂಜೆ, ಮದುವೆ ಮುಂಜಿ ಸೇರಿದಂತೆ ಪ್ರತಿಯೊಂದು ಶುಭ ಸಮಾರಂಭಗಳಿಗೆ ವೀಳ್ಯದೆಲೆ ಕಡ್ಡಾಯವಾಗಿ ಬೇಕಾಗುತ್ತದೆ. ಇಂತಹ ವೀಳ್ಯದೆಲೆ ಸುಮಾರು ಎರಡು ವಾರಗಳಿಂದ ಬೆಲೆ ಏರಿಕೆ ಕಾಣುತ್ತಾ ಬಂದಿದ್ದು ಸದ್ಯ 200 ಎಲೆಯ ಒಂದು ಕಟ್ಟಿಗೆ ₹ 180ರ ಗಡಿ ದಾಟಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದರೆ, ರೈತರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

ದರ ಹೆಚ್ಚಾಗಲು ಕಾರಣ: ವೀಳ್ಯದೆಲೆ ದರ ಹೆಚ್ಚಾಗಲು ಹವಾಮಾನ ವೈಪರೀತ್ಯ ಕಾರಣ ಎನ್ನಲಾಗಿದೆ. ವೀಳ್ಯದೆಲೆ ತೋಟಗಳಲ್ಲಿ ಚಳಿಗೆ ಬಳ್ಳಿಗಳು ಎಲೆ ಕಟ್ಟುತ್ತಿಲ್ಲ, ಎಲ್ಲೆಡೆ ಮದುವೆ, ಗೃಹಪ್ರವೇಶ, ಜಾತ್ರೆಯಂತಹ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ವೀಳ್ಯದೆಲೆ ದರ ಹೆಚ್ಚಾಗಿದೆ. ಯುಗಾದಿ ನಂತರದಲ್ಲಿ ಹೊಸ ಚಿಗುರು ಬರಲು ಪ್ರಾರಂಭವಾಗಿ ಇಳುವರಿ ಹೆಚ್ಚಾಗುತ್ತದೆ. ತದ ನಂತರ ದರ ಇಳಿಕೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಇಳುವರಿಗೆ 2ವರ್ಷ: ರೈತರು ಹೆಚ್ಚಿನ ಪ್ರಮಾಣದಲ್ಲಿ ವೀಳ್ಯದೆಲೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ಹೊಸದಾಗಿ ವೀಳ್ಯದೆಲೆ ಬಳ್ಳಿ ನಾಟಿ ಮಾಡಿದ ನಂತರ ಎಲೆ ಕಟಾವಿಗೆ ಸಿಗಲು ಕನಿಷ್ಠ ಎರಡು ವರ್ಷವಾದರೂ ಬೇಕಾಗುತ್ತದೆ.

ಬೆಲೆ ಏರಿಕೆಯಾಗುತ್ತಿರುವುದು ರೈತರಿಗೆ ಸಂತಸ ತಂದಿದೆ. ಆದರೆ ದೊಡ್ಡ ವ್ಯಾಪಾರಸ್ಥರಿಗೆ ಒಂದೆರಡು ಬಂಡಲ್‌ಗೂ ಸಾವಿರಾರು ಬಂಡವಾಳ ಹಾಕುವ ಅನಿವಾರ್ಯತೆ ಎದುರಾಗಿದ್ದು, ಸಣ್ಣ ವ್ಯಾಪಾರಸ್ಥರು ಖರೀದಿಸಿ ಅವುಗಳನ್ನು ಬಿಡಿ ಬಿಡಿಯಾಗಿ ಗ್ರಾಹಕರಿಗೆ ಮಾರಾಟ ಮಾಡಿ ಹಾಕಿದ ಬಂಡವಾಳ ಹಿಂತೆಗೆಯುವ ಸವಾಲು ಎದುರಾಗಿದೆ.

ಕುಷ್ಟಗಿ ತಾಲೂಕಿನಾದ್ಯಂತ 200 ಎಕರೆ ಪ್ರದೇಶದಲ್ಲಿ ರೈತರು ವೀಳ್ಯದೆಲೆ ಬೆಳೆದಿದ್ದು, ಬೇಸಿಗೆ ಆರಂಭವಾಗುವ ಹಿನ್ನೆಲೆಯಲ್ಲಿ ವೀಳ್ಯದೆಲೆಯ ದರ ಏರಿಕೆ ಕಾಣುತ್ತಿದ್ದು, ವೀಳ್ಯದೆಲೆ ಬೆಳೆದ ಬೆಳೆಗಾರರಿಗೆ ಸಂತಸ ತಂದಿದೆ. ಒಂದು ಬಂಡಲ್ ಅಂಬಾಡಿ ಎಲೆಗೆ ₹ 4 ಸಾವಿರ ಹಾಗೂ ಒಂದು ಬಂಡಲ್ ಕರಿ ಎಲೆಗೆ ₹ 6 ಸಾವಿರಕ್ಕೂ ಅಧಿಕ ದರವಿದ್ದು ಒಂದು ಎಲೆಗೆ ₹ 1 ಬೀಳಲಿದೆ ಎಂದು ಕುಷ್ಟಗಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶಿವಯೋಗಪ್ಪ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ವೀಳ್ಯದೆಲೆ ಬೆಳೆಗೆ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವೀಳ್ಯದೆಲೆಯ ಇಳುವರಿ ಕುಂಠಿತವಾಗಿದ್ದು, ಅನಿವಾರ್ಯವಾಗಿ ದರ ಏರಿಕೆ ಕಂಡಿದೆ ಎಂದು ವೀಳ್ಯದೆಲೆ ಬೆಳೆದ ರೈತ ದ್ಯಾಮಣ್ಣ ಶಾಖಾಪೂರ ತಿಳಿಸಿದ್ದಾರೆ.

ವೀಳ್ಯದೆಲೆಯು ಶುಭ ಸಮಾರಂಭಗಳಿಗೆ ಅಗತ್ಯವಾಗಿ ಬೇಕಾಗಿರುವ ವಸ್ತುವಾಗಿದೆ, ಇದರ ಜತೆಗೆ ದೈನಂದಿನ ಬದುಕಿನಲ್ಲಿ ವೀಳ್ಯದೆಲೆ ಅವಶ್ಯಕವಾಗಿದ್ದು ಬೇಸಿಗೆ ಕಾಲ ಬಂದಿದ್ದು ಇಳುವರಿ ಕುಂಠಿತವಾಗಿದ್ದು ದರ ಏರಿಕೆಯಾದರೂ ಖರೀದಿಸುವುದು ಅನಿವಾರ್ಯವಾಗಿದೆ ಎಂದು ಕುಷ್ಟಗಿ ನಿವಾಸಿ ಮಹಾದೇವಿ ತಿಳಿಸಿದ್ದಾರೆ.