ಗಗನಕ್ಕೇರಿದ ವೀಳ್ಯದೆಲೆಯ ಬೆಲೆ, ಗ್ರಾಹಕರು ಕಂಗಾಲು

| Published : May 29 2024, 12:53 AM IST

ಸಾರಾಂಶ

ಕೊಳ್ಳುವ ಗ್ರಾಹಕರು ಜೇಬು ಮುಟ್ಟಿ ನೋಡಿಕೊಳ್ಳುವಂತಾಗಿದೆ

ಅಶೋಕ ಡಿ, ಸೊರಟೂರ ಲಕ್ಷ್ಮೇಶ್ವರ

ಈ ವರ್ಷ ವೀಳ್ಯದೆಲೆಯ ಬೆಲೆಯು ಗಗನಮುಖಿಯಾಗಿದ್ದು, ರೈತರ ಮುಖದಲ್ಲಿ ಹರ್ಷ ಉಕ್ಕುವಂತೆ ಮಾಡಿದ್ದರೂ ಗ್ರಾಹಕರು ಜೇಬು ಸುಡುತ್ತಿರುವುದಂತೂ ಸುಳ್ಳಲ್ಲ.

ಕಳೆದ ವರ್ಷ ಮಳೆಯ ಕೊರೆತೆಯಿಂದ ವೀಳ್ಯದೆಲೆಯ ಬೆಲೆಯು ಗಗನಮುಖಿಯಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ, ಅದರ ಜತೆ ಅತಿಯಾದ ಬಿಸಿಲು ಕೂಡಾ ವೀಳ್ಯದೆಲೆಯ ಬೆಲೆ ಏರುತ್ತಿರುವುದಕ್ಕೆ ಕಾರಣವಾಗಿದೆ, ಹವಾಮಾನ ವೈಪರಿತ್ಯ, ನೀರಿನ ಕೊರತೆ ಹಿನ್ನೆಲೆಯಲ್ಲಿ ರೈತರು ವೀಳ್ಯದೆಲೆಯ ಬೆಳೆ ಪ್ರಮಾಣ ಕಡಿತಗೊಳಿಸಿದ್ದಾರೆ.

ವೀಳ್ಯದೆಲೆಯ ಬೆಲೆಯು ನೂರಕ್ಕೆ ₹೧೮೦ ರಿಂದ ₹೨೦೦ ಆಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ. ಪ್ರತಿ ವಾರ ಒಂದು ಅಂಡಿಗೆ ವೀಳ್ಯದೆಲೆಯ ಬೆಲೆಯು ₹೫ ಸಾವಿರದಿಂದ ₹೬ ಸಾವಿರ ಇರುತ್ತಿತ್ತು. ಆದರೆ ಈ ವರ್ಷ ೧೨ ರಿಂದ ₹೧೫ ಸಾವಿರ ವರೆಗೆ ಹೋಗಿದ್ದರಿಂದ ರೈತರ ಮೊಗದಲ್ಲಿ ಹರ್ಷ ಉಕ್ಕುವಂತೆ ಮಾಡಿದೆ. ಕೊಳ್ಳುವ ಗ್ರಾಹಕರು ಜೇಬು ಮುಟ್ಟಿ ನೋಡಿಕೊಳ್ಳುವಂತಾಗಿದೆ ಎನ್ನುತ್ತಾರೆ ನಾಗರಾಜ ಚಿಂಚಲಿ.

ವಿಳ್ಯದೆಲೆಯ ಬೆಲೆಯು ಕಳೆದ ವರ್ಷ ಪ್ರತಿ ನೂರಕ್ಕೆ ₹80 ರಿಂದ ₹100 ವರೆಗೆ ಇತ್ತು, ಈ ವರ್ಷ ಅದರ ಬೆಲೆ ದುಪ್ಪಟ್ಟಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಚಳಿಗಾಲದಲ್ಲಿ ಎಲೆಗಳ ಚಿಗುರು ಸರಿಯಾಗಿ ಒಡೆಯದೆ ಎಲೆಗಳು ಉತ್ತಮವಾಗಿ ಬರುವುದಿಲ್ಲ. ಹೀಗಾಗಿ ತೋಟದಲ್ಲಿ ವಿಳ್ಯದೆಲೆಯ ಬಳ್ಳಿಗಳು ಸರಿಯಾಗಿ ಹಬ್ಬುತ್ತಿಲ್ಲದಿರುವುದರಿಂದ ಎಲೆಗಳು ಉತ್ತಮವಾಗಿ ಬರುತ್ತಿಲ್ಲ. ಸವಣೂರ, ರಾಣಿಬೆನ್ನೂರ, ಹರಿಹರ ಮತ್ತು ದಾವಣಗೆರೆ ಭಾಗದಲ್ಲಿನ ಎಲೆ ಬಳ್ಳಿಯ ತೋಟಗಳು ಬಹುತೇಕ ಒಣಗಿ ಹೋಗುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಸವಣೂರಿನ ವಿಳ್ಯದೆಲೆಯ ವ್ಯಾಪಾರಿ ಜಾಕೀರ್ ಹುಸೇನ ಮಲ್ಲೋರಿ

ವೀಳ್ಯದೆಲೆಯ ಬೆಳೆಯಲ್ಲಿ ವಿಪರೀತ ಏರಿಕೆ ಕಂಡು ಬಂದಿರುವುದರಿಂದ ಪಾನ್ ಶಾಪ್‌ಗಳಲ್ಲಿ ಎಲೆಗಳನ್ನು ಮಾರುವುದು ಕಠಿಣವಾಗಿದೆ, ₹ ೫ಗೆ ೩ ಎಲೆಗಳನ್ನು ಕೊಟ್ಟರೆ ನಷ್ಟವಾಗುತ್ತದೆ. ೨ ಎಲೆಗಳನ್ನು ಕೊಟ್ಟರೆ ಗ್ರಾಹಕರು ಕಿರಿಕಿರಿ ಮಾಡುತ್ತಾರೆ ಎಂದು ಪಾನ್ ಶಾಪ್ ಮಾಲೀಕ ಅಫ್ಜಲ್ ರಿತ್ತಿ ತಿಳಿಸಿದ್ದಾರೆ.