ಮಂಗಳೂರು ರಸ್ತೆಯಲ್ಲಿ ನಮಾಜ್: ಎಸ್‌ಡಿಪಿಐ ಸಮರ್ಥನೆ

| Published : May 29 2024, 12:53 AM IST

ಸಾರಾಂಶ

ಮಸೀದಿಯಲ್ಲಿ ನಮಾಜ್ ಮಾಡುವುದಕ್ಕೆ ನಾಲ್ಕೈದು ಮಂದಿಗೆ ಸ್ಥಳ ಇರಲಿಲ್ಲ, ಅದಕ್ಕೆ ರಸ್ತೆಯಲ್ಲಿ ಎರಡು ನಿಮಿಷ ನಮಾಜ್ ಮಾಡಿ ಎದ್ದು ಹೋಗಿದ್ದಾರೆ. ಕಾನೂನು ವಿರುದ್ಧವಾಗಿ ನಮಾಜ್ ನಡೆದಿದ್ದರೆ ಅದನ್ನು ನೋಡಿಕೊಳ್ಳಲು ಪೊಲೀಸ್ ಇಲಾಖೆ ಇದೆ ಎಂದು ಎಸ್‌ಡಿಪಿಐ ವಕ್ತಾರ ರಿಯಾಜ್ ಕಡಂಬು ಸಮರ್ಥಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಗಣೇಶೋತ್ಸವ ಸಂದರ್ಭದಲ್ಲಿ ಇಡೀ ರಸ್ತೆಯನ್ನು ಬಂದ್ ಮಾಡಿ ಮೆರವಣಿಗೆ ಮಾಡುತ್ತಾರೆ, ರಸ್ತೆಯಲ್ಲಿ ಬೇರೆಬೇರೆ ಕಾರ್ಯಕ್ರಮಗಳು ನಡೆಯುತ್ತವೆ, ಅದರಂತೆ ಮಂಗಳೂರಿನಲ್ಲಿ ನಮಾಜ್ ನಡೆದಿದೆ. ಅದು ಆಯಾ ಧರ್ಮದ ಆಚರಣೆ, ಅದನ್ನು ಗೌರವಿಸಬೇಕು ಎಂದು ಎಸ್‌ಡಿಪಿಐ ವಕ್ತಾರ ರಿಯಾಜ್ ಕಡಂಬು ಸಮರ್ಥಿಸಿಕೊಂಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಮಾತ್ರವಲ್ಲ ನಮ್ಮ ದೇಶ ವೈವಿಧ್ಯತೆಯನ್ನು ಹೊಂದಿದೆ. ಯಾವುದೋ ಕಾಲದಿಂದ ನಡೆದು ಬಂದ ಧಾರ್ಮಿಕ ಆಚರಣೆಗಳಿವೆ. ಅವುಗಳನ್ನು ವಿರೋಧಿಸಿ ಕೋಮುಗಲಭೆ ಸೃಷ್ಟಿ ಮಾಡಬಾರದು ಎಂದರು.

ರಸ್ತೆಯಲ್ಲಿ ನಮಾಜ್ ನಡೆಸುವುದನ್ನು ತಡೆಯುವುದಾಗಿ ಶರಣ್ ಪಂಪ್‌ವೆಲ್ ಹೇಳಿಕೆ ನೀಡಿದ್ದಾರೆ. ತಾಕತ್ತಿದ್ದರೆ ಶರಣ್ ಪಂಪ್‌ವೆಲ್ ಅದನ್ನು ಮಾಡಿ ನೋಡಲಿ ಎಂದು ಕಡಂಬು ಸವಾಲು ಹಾಕಿದರು.

ಮಸೀದಿಯಲ್ಲಿ ನಮಾಜ್ ಮಾಡುವುದಕ್ಕೆ ನಾಲ್ಕೈದು ಮಂದಿಗೆ ಸ್ಥಳ ಇರಲಿಲ್ಲ, ಅದಕ್ಕೆ ರಸ್ತೆಯಲ್ಲಿ ಎರಡು ನಿಮಿಷ ನಮಾಜ್ ಮಾಡಿ ಎದ್ದು ಹೋಗಿದ್ದಾರೆ. ಕಾನೂನು ವಿರುದ್ಧವಾಗಿ ನಮಾಜ್ ನಡೆದಿದ್ದರೆ ಅದನ್ನು ನೋಡಿಕೊಳ್ಳಲು ಪೊಲೀಸ್ ಇಲಾಖೆ ಇದೆ, ಬಜರಂಗದಳದವರು ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದರೆ ನಾವು ಕೈ ಕಟ್ಟಿ ಕುಳಿತಿಲ್ಲ ಎಂದೂ ಎಚ್ಚರಿಕೆ ನೀಡಿದರು.