ಶರಣರ ಜಯಂತಿ ಬದುಕು ಸಾಗಿಸುವ ಸಂದೇಶ ಸಾರಲಿ: ಪ್ರೊ.ಆರ್.ಕೆ ಹುಡುಗಿ

| Published : May 29 2024, 12:53 AM IST

ಸಾರಾಂಶ

ಶರಣರ ಜಯಂತಿ ಆಚರಣೆಯಲ್ಲಿ ಧ್ವನಿವರ್ಧಕ ಬಳಸಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸುವುದು, ವೇದಿಕೆ ಮೇಲೆ ಶಾಲು ಹೊದಿಸಿ ಸನ್ಮಾನಿಸುವ ಸಂಪ್ರದಾಯ ಬಸವಣ್ಣರ ಸಂಸ್ಕೃತಿ ಅಲ್ಲ.

ಕನ್ನಡಪ್ರಭ ವಾರ್ತೆ ಹುಲಸೂರ

ಬಸವಣ್ಣನವರ ಜಯಂತಿ ಆಚರಣೆಯು ಜನರಲ್ಲಿ ವೈಚಾರಿಕತೆ, ಸರಳತೆ ಮತ್ತು ಕಾಯಕ ಬದುಕು ಸಾಗಿಸುವ ಸಂದೇಶಗಳು ಸಾರುವಂತೆ ಆಚರಿಸುವ ಪರಿಪಾಠ ಬೆಳೆದು ಬರಬೇಕೆಂದು ಕಲಬುರಗಿ ಹಿರಿಯ ಚಿಂತಕರಾದ ಪ್ರೊ.ಆರ್.ಕೆ.ಹುಡುಗಿ ತಿಳಿಸಿದರು.

ಅವರು ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದ ಆವರಣದಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ 981 ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಶರಣರ ಜಯಂತಿ ಆಚರಣೆಯಲ್ಲಿ ಧ್ವನಿವರ್ಧಕ ಬಳಸಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸುವುದು, ವೇದಿಕೆ ಮೇಲೆ ಶಾಲು ಹೊದಿಸಿ ಸನ್ಮಾನಿಸುವ ಸಂಪ್ರದಾಯ ಬಸವಣ್ಣರ ಸಂಸ್ಕೃತಿ ಅಲ್ಲ.

ಬಸವಣ್ಣನವರು ಸಾಂಸ್ಕೃತಿಕ ನಾಯಕ ಅಂದ ಮೇಲೆ ನಾಡಿನ ಜನತೆಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಮುಂದಿನ ದಿನಗಳಲ್ಲಿ ನಾವು ಜಯಂತಿ ಆಚರಣೆ ರೂಡಿಸಿಕೊಳ್ಳಬೇಕು ಎಂದ ಅವರು, ಚಿಕ್ಕಮಕ್ಕಳಿಗೆ ವಚನ ಸಾಹಿತ್ಯ ಓದುವ ಹವ್ಯಾಸ ಬೇಳಸಿ ಅವರಿಗೆ ವಚನಗಳ ಭಾವಾರ್ಥ ತಿಳಿಸಿ ಅದರಂತೆ ಬದುಕು ಸಾಗಿಸುವ ಸಂದೇಶ ತಿಳಿಸಬೇಕು ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾ ಸಭೆ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವಣ್ಣ ಗುಡಿ ಗುಂಡಾರ ಕಟ್ಟಲಿಲ್ಲ ಸಮಾನ ಮನಸ್ಕರ ಮನಸ್ಸು ಕಟ್ಟುವ ಕೆಲಸ ಮಾಡುವ ಮೂಲಕ 770 ಶರಣರನ್ನು ಒಂದೆಡೆ ಸೇರಿಸಿ ಅನುಭವ ಮಂಟಪ ಕಟ್ಟಿ ಉತ್ತಮ ಸಮಾಜ ನಿರ್ಮಾಣ ಮಾಡುವ ಮೂಲಕ ಶೈಕ್ಷಣಿಕ, ಕಾಯಕ, ದಾಸೋಹ ತತ್ವ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದರು ಎಂದರು.

ಆಕಾಶ ಖಂಡಾಳೆ ಪ್ರಾಸ್ತಾವಿಕ ಮಾತನಾಡಿದರು. ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀ ಆಶೀರ್ವಚನ ನೀಡಿದರು. ಶಿವಾನಂದ ಹೈಬತಪೂರೆ, ಭಾಲ್ಕಿ ಗುರುಬಸವ ಪಟ್ಟದೇವರು, ಆರಕ್ಷಕ ಉಪನಿರೀಕ್ಷಕ ನಾಗೇಂದ್ರ ಕನಮೂಸೆ ಮಾತನಾಡಿದರು.

ಬೆಳಗ್ಗೆ 10ಗಂಟೆಗೆ ಅಲ್ಲಮ ಪ್ರಭು ಶೂನ್ಯ ಪೀಠದಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಸವೇಶ್ವರ ವೃತ್ತದವರೆಗೆ ಬೈಕ್ ರ್‍ಯಾಲಿ ಹಾಗೂ ಸಾಯಂಕಾಲ ಬಸವಣ್ಣನವರ ಭಾವ ಚಿತ್ರದ ಮೆರವಣಿಗೆ ನಡೆಯಿತು .

ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಲಾತೂರ ಜಿಪಂ ಅಧ್ಯಕ್ಷ ನಾಗೇಶ್ ಜೋಗಣೆ, ಬಸವಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕುಡೆ, ಮಲ್ಲಿಕಾರ್ಜುನ ಧಬಾಲೆ, ಸುಧೀರ್ ಕಾಡಾದಿ, ಶಾಲುಬಾಯಿ ಬನಸುಡೆ, ಧನರಾಜ ತಾಂಬೂಳೆ, ಶ್ರೀದೇವಿ ನಿಡೋದೆ, ಜಾಗತಿಕ ಲಿಂಗಾಯತ ಮಹಾ ಸಭೆಯ ತಾಲ್ಲೂಕು ಅಧ್ಯಕ್ಷ ಪ್ರವೀಣ್ ಕಾಡಾದಿ, ಬಸವ ಜಯಂತಿ ಉತ್ಸವ ಸಮಿತಿ ಸದಸ್ಯರು ಸೇರಿ ಬಸವಣ್ಣರ ಅನುಯಾಯಿಗಳು ಪಾಲ್ಗೊಂಡಿದ್ದರು.

ರಾಜಕುಮಾರ ತೊಂಡಾರೆ ಸ್ವಾಗತಿಸಿ, ದೀಪಕ್ ಠಮಕೆ ನಿರೂಪಿಸಿ, ರಾಜಕುಮಾರ ಹೋನ್ನಾಡೆ ವಂದಿಸಿದರು.