ಸಾಮಾಜಿಕ, ಧಾರ್ಮಿಕ ವಿಘಟನೆಗಳು ಮನುಷ್ಯತ್ವಕ್ಕೆ ಮಾರಕ

| Published : Feb 27 2024, 01:35 AM IST

ಸಾಮಾಜಿಕ, ಧಾರ್ಮಿಕ ವಿಘಟನೆಗಳು ಮನುಷ್ಯತ್ವಕ್ಕೆ ಮಾರಕ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಅಧಿಕಾರ ಕಾರಣಕ್ಕಾಗಿ ನಡೆಯುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ವಿಘಟನೆಗಳು ಸಮಾಜಕ್ಕೆ ಮಾರಕವಾಗಿದ್ದು, ಮನುಷ್ಯ ಸಂವೇದನೆ ಮರೆಯಾಗುತ್ತಿದೆ ಎಂದು ಸಾಹಿತ್ಯ ವಿಮರ್ಶಕ ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.

ದೊಡ್ಡಬಳ್ಳಾಪುರ: ಅಧಿಕಾರ ಕಾರಣಕ್ಕಾಗಿ ನಡೆಯುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ವಿಘಟನೆಗಳು ಸಮಾಜಕ್ಕೆ ಮಾರಕವಾಗಿದ್ದು, ಮನುಷ್ಯ ಸಂವೇದನೆ ಮರೆಯಾಗುತ್ತಿದೆ ಎಂದು ಸಾಹಿತ್ಯ ವಿಮರ್ಶಕ ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.

ತಾಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಸಂಜೆ ನಡೆದ ತಾಲೂಕು13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಮಾತನಾಡಿ, ರಾಜಕೀಯ ಪಕ್ಷಗಳು ಧರ್ಮ, ಸಾಮಾಜಿಕ ಅಸಮಾನತೆಯನ್ನು ತಮ್ಮ ಅಸ್ತ್ರಗಳನ್ನಾಗಿ ಬಳಸುತ್ತಿದ್ದು, ವಿಘಟಿತ ಸಮಾಜವನ್ನೇ ಸ್ವಾರ್ಥದ ಬಂಡವಾಳವನ್ನಾಗಿಸಿಕೊಳ್ಳುತ್ತಿವೆ. ಇದನ್ನು ಅರಿತು ಹೊಣೆಯಾಧಾರಿತ ಪೌರತ್ವವನ್ನು ಪ್ರತಿಪಾದಿಸುವುದು ಪ್ರಜ್ಞಾವಂತರ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಸಮಸ್ಯೆಗಳ ಸ್ವರೂಪ ಬದಲು:

ಜಾಗತಿಕವಾಗಿ ಕಳೆದ ಮೂರು-ನಾಲ್ಕು ದಶಕಗಳಿಂದ ಇರುವ ಸಮಸ್ಯೆಗಳು ಹಾಗೆಯೇ ಉಳಿದಿವೆ. ಆದರೆ ಅವುಗಳ ಸ್ವರೂಪ ಮತ್ತು ವ್ಯಾಪ್ತಿ ಬದಲಾಗಿದೆ. ರೈತರ ಸಮಸ್ಯೆಗಳು, ಕಾರ್ಮಿಕರು, ದುಡಿಯುವ ವರ್ಗ ಎದುರಿಸುತ್ತಿರುವ ಸಮಸ್ಯೆಗಳು ಸಂದರ್ಭಾನುಸಾರ ಪಲ್ಲಟಗೊಂಡಿವೆ. ಸಮಸ್ಯೆಗಳ ಬಗ್ಗೆ ಬರೆದ ತಕ್ಷಣ ಯಾವುದೇ ವ್ಯಕ್ತಿ ಕವಿ ಆಗುವುದಿಲ್ಲ. ಕವಿತೆಗಳಲ್ಲಿ ಬರೀ ಸಮಸ್ಯೆಗಳೇ ಕಾಣುತ್ತಿದ್ದರೆ ಕವಿತ್ವ ಕಾಣೆಯಾಗುತ್ತದೆ ಎಂದರು.

ಅಭಿರುಚಿ-ಭಾಷಿಕ ಸಂವೇದನೆ:

ಈ ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ ಕಡಿಮೆ ಇದ್ದ ಕಾಲಘಟ್ಟದಲ್ಲಿ ಹೆಚ್ಚು ಹೆಚ್ಚು ಓದುಗರಿದ್ದರು. ಗ್ರಂಥಾಲಯಗಳಿದ್ದವು. ಆದರೆ ಇಂದು ಅಕ್ಷರಸ್ಥರ ಸಂಖ್ಯೆ ಹೆಚ್ಚಿದೆ. ಆದರೆ ಓದುಗರ ಸಂಖ್ಯೆ ಕ್ಷೀಣಗೊಳ್ಳುತ್ತಿದೆ. ಹೀಗಾಗಿ ಅಕ್ಷರ ಜ್ಞಾನ ಮತ್ತು ಅಭಿರುಚಿಯ ಬೆಳವಣಿಗೆಯ ನಡುವೆ ಒಂದು ತಾರ್ಕಿಕ ಸಂಬಂಧವಿದೆ. ಕಲೆಗಾಗಿ ಕಲೆ ಅಥವಾ ಕಲೆಗಾಗಿ ಬದುಕು ಎಂಬ ಪರಿಕಲ್ಪನೆಗಳಲ್ಲಿ ಬದುಕಿನ ಹುಡುಕಾಟಕ್ಕೆ ಹೆಚ್ಚಿನ ಮೌಲ್ಯವಿದೆ. ಭಾಷೆ ಒಂದು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತದೆ ಎಂದು ಹೇಳಿದರು.

ತವರಿನಲ್ಲಿ ದೊರೆತ ಮನ್ನಣೆ ಗಣನೀಯ:

ಸಮ್ಮೇಳನಾಧ್ಯಕ್ಷ ಟಿ.ಎಚ್.ಆಂಜನಪ್ಪ ಮಾತನಾಡಿ, ತಾವು ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ 4 ದಶಕಗಳಿಂದ ತೊಡಗಿಕೊಂಡು ಮಾಡಿರುವ ಮಹತ್ತರ ಕೆಲಸಗಳನ್ನು ಗುರ್ತಿಸುವ ಕೆಲಸ ತಮ್ಮ ತವರು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿರುವುದು ಸಂತಸ ತಂದಿದೆ. ತವರಿನಲ್ಲಿ ದೊರೆತ ಮನ್ನಣೆ ಗಣನೀಯ. ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಕಸಾಪ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಅಭಿರುಚಿ ಅಗಾಧ:

ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಾಹಿತ್ಯ, ಸಂಸ್ಕೃತಿಯ ಅಭಿರುಚಿ ಅಗಾಧವಾಗಿದ್ದು, ಸಾಹಿತ್ಯ ಸಮ್ಮೇಳನಕ್ಕೆ ಜನಪ್ರಿಯ ವೈದ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮನ್ನಣೆ ನೀಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಬಮೂಲ್ ಮಾಜಿ ನಿರ್ದೇಶಕ ಎಚ್.ಅಪ್ಪಯ್ಯಣ್ಣ, ಬೆಂ.ಗ್ರಾ. ಜಿಲ್ಲಾ ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಬೆಂ.ಗ್ರಾ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಬಾಶೆಟ್ಟಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕ ಆರ್.ನಾರಾಯಣಸ್ವಾಮಿ, ಮಾಳಯ್ಯ, ಕೊಡಿಗೇಹಳ್ಳಿ ಗ್ರಾಪಂ ಸದಸ್ಯೆ ನಾಗರತ್ನಮ್ಮ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್, ಕಸಾಪ ಪದಾಧಿಕಾರಿಗಳಾದ ಎ.ಜಯರಾಮ್, ವಿ.ಎಸ್.ಹೆಗಡೆ, ಉದಯ ಆರಾಧ್ಯ, ಸುರೇಶ್, ಗಿರೀಶ್‌ ಬರಗೂರು, ವೆಂಕಟರಾಜು, ದಾದಾಫೀರ್, ಶ್ರೀರಾಮಗೌಡ, ಸಫೀರ್ ಇತರರು ಉಪಸ್ಥಿತರಿದ್ದರು.26ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ, ವಿಮರ್ಶಕ ಎಂ.ಜಿ.ಚಂದ್ರಶೇಖರಯ್ಯ ಮತ್ತಿತರರಿದ್ದರು.