ಶಿಕ್ಷಣದ ಮೌಲ್ಯದಿಂದ ಸಮಾಜೋದ್ಧಾರ: ಶಾಸಕ

| Published : Sep 06 2024, 01:13 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯಾದ್ಯಂತ ಇಂದು ಶಿಕ್ಷಕರ ದಿನಾಚರಣೆ ಸಾಂಗವಾಗಿ ಜರುಗಿತು. ಇದೇ ವೇಳೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿಕ್ಷಣದ ಮೌಲ್ಯದಿಂದಲೇ ಸಮಾಜದ ಉದ್ಧಾರ ಸಾಧ್ಯವಾಗಿದ್ದು, ಮೌಲ್ಯಾಧಾರಿತ ಶಿಕ್ಷಣಕ್ಕೆ ಇನ್ನಷ್ಟು ಶಕ್ತಿ ತುಂಬಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿ.ಪಂ., ಉಪ ನಿರ್ದೇಶಕರ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರದ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಅವರು ಬ್ರಿಟಿಷರು ಸೇರಿದಂತೆ ಯಾರೇ ಆಗಲಿ ಭಾರತೀಯ ಪರಂಪರೆಯನ್ನು ಅಧ್ಯಯನ ಮಾಡದೇ ನಮ್ಮ ದೇಶವನ್ನು ಟೀಕಿಸಬೇಡಿ ಎಂದು ಉತ್ತರ ನೀಡಿದವರು.

ಪ್ರಸ್ತುತ ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣಕ್ಕೆ ಇನ್ನಷ್ಟು ಶಕ್ತಿ ನೀಡಬೇಕು. ಶಿಕ್ಷಕರ ಉತ್ತಮ ಸಾಧನೆಗಾಗಿ ಇಂದು ಪ್ರಶಸ್ತಿ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಲಾಗಿದೆ. ಎಲ್ಲ ಶಿಕ್ಷಕರು ಅತ್ಯುತ್ತಮ ಕೆಲಸ ಮಾಡಿದ್ದು, ಪ್ರಶಸ್ತಿ ಪ್ರದಾನ ಒಂದು ಸಾಂಕೇತಿಕ ಮಾತ್ರ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಇಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ದಿನ. ಮಹಾನ್ ವ್ಯಕ್ತಿಗಳನ್ನು ರೂಪಿಸುವ ಅವಕಾಶ ಶಿಕ್ಷಕರಿಗೆ ಇದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಡೀ ದೇಶವನ್ನು ಸಂರಕ್ಷಿಸುವ, ಸಭ್ಯ ಸಮಾಜ ನಿರ್ಮಿಸುವಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಶಕ್ತಿ ಶಿಕ್ಷಕರಲ್ಲಿ ಇದೆ. ನಮ್ಮ ಸಂಸ್ಕೃತಿಯನ್ನು, ಸಂಸ್ಕಾರವನ್ನು ಹಾಗೂ ಮಕ್ಕಳು ಏನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಶಿಕ್ಷಕರು ಮನವರಿಕೆ ಮಾಡಿಕೊಡಬೇಕು ಎಂದರಲ್ಲೆ, ಬದುಕು ಕಟ್ಟಿಕೊಡುವ ಶಕ್ತಿ ಗುರುಗಳಿಗೆ ಇರುತ್ತದೆ. ಶಿಕ್ಷಕರು ಕರ್ತವ್ಯ ಕೇವಲ ಶಾಲೆಯಲ್ಲಿ ಮಾತ್ರ ಇರುವುದಿಲ್ಲ. ಪೂರ್ವ ತಯಾರಿ ಮಾಡಿಕೊಂಡೇ ತರಗತಿಗೆ ಹೋಗಬೇಕೆಂದು ಕಿವಿಮಾತು ಹೇಳಿದ ಅವರು ಕೇವಲ ಅಕ್ಷರ ಕಲಿಸಿದರೆ ಸಾಲದು ವಿನಯ, ವಿದ್ಯೆ, ದಯೆ, ಸಭ್ಯತೆ, ಸಜ್ಜನಿಕೆ, ಪ್ರಾಮಾಣಿಕತೆ, ತ್ಯಾಗದಂತಹ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳಲ್ಲಿ ವಿವೇಕ ಬಿತ್ತಬೇಕ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ರಾಜಕೀಯಕ್ಕೆ ಪಾದಾರ್ಪಣೆ ಮಾಡಿರು ವುದು ಹೆಮ್ಮೆ ಎನಿಸುತ್ತಿದೆ. ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿರಬೇಕು. ಶಿಕ್ಷಕ ವೃತ್ತಿ ಎಲ್ಲರ ಜೀವನ ಬೆಳೆಸುವ ಶ್ರೇಷ್ಠ ವೃತ್ತಿ. ನಮ್ಮ ವೃತ್ತಿಯನ್ನು ನಾವು ಪ್ರೀತಿಸಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರನ್ನು ನಾವು ಸ್ಮರಿಸಲೇ ಬೇಕು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ನಾವುಗಳು ಸದನದಲ್ಲಿ ಶಿಕ್ಷಣ ವ್ಯವಸ್ಥೆ, ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ. ನಮ್ಮ ಆಡಳಿತ ಸಾಮಾನ್ಯ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ನೀಡಿದಲ್ಲಿ ಭವಿಷ್ಯ ಉತ್ತಮವಾಗಿರುತ್ತದೆ. ಪ್ರಸ್ತುತ ಶಿಕ್ಷಕರು ವಿದ್ಯಾರ್ಥಿಗಳಸನ್ನು ಭಾವನಾತ್ಮಕವಾಗಿ ಜೋಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಸತ್ಯದೆಡೆ, ಬೆಳಕಿನೆಡೆ, ಅಮರತ್ವದ ಕಡೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿ ಗುರುಗಳಿಗಿದೆ. ಪಾಠ ಮಾಡುವ ಶಿಕ್ಷಕರ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ಸಲಹೆಗಳನ್ನು ನೀಡಿದರು.

ವಿಧಾನ ಪರಿಷತ್ ಶಾಸಕರಾದ ಎಸ್.ಎಲ್ ಭೋಜೇಗೌಡ ಮಾತನಾಡಿ, ಪ್ರಶಸ್ತಿಗಳ ಗುಣಮಟ್ಟ ಕಾಪಾಡಬೇಕು. ಪ್ರಶಸ್ತಿ ಆಯ್ಕೆ ಮಾನದಂಡಗಳನ್ನು ಅನುಸರಿಸಿ ಪ್ರಶಸ್ತಿಗಳನ್ನು ನೀಡಬೇಕು. ಹಾಗೂ ಪ್ರಶಸ್ತಿಯ ಮೌಲ್ಯ ಉಳಿಸುವ ಕೆಲಸ ಮಾಡಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಉತ್ತಮ ಶಿಕ್ಷಕ ಪ್ರಶಸ್ತಿ ಮಾನದಂಡಗಳಲ್ಲಿ ಕೆಲವು ಬದಲಾವಣೆ ಆಗಬೇಕು. ಶಿಕ್ಷಕರ ಸಾಧನೆಯ ಡಾಂಕ್ಯುಮೆAಟರಿ ಮಾಡಿ ತೋರಿಸಿದಲ್ಲಿ ಅದು ಇತರರಿಗೆ ಮಾದರಿ ಆಗುತ್ತದೆ ಎಂದು ಹೇಳಿದರು.

ಇದೇ ವೇಳೆ 2024-25 ನೇ ಸಾಲಿನಲ್ಲಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ 21 ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಡಿಡಿಪಿಐ ಮಂಜುನಾಥ್, ಬಿಇಒ ರಮೇಶ್, ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.ಶಿಕ್ಷಕರ ಸೇವೆ ಸದಾ ಸ್ಮರಣೀಯ: ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ: ಅಕ್ಷರ ಕಲಿಸಿ ನಾಡಿನ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಸೇವೆ ಸದಾಕಾಲ ಸ್ಮರಣೀಯವಾದದ್ದು ಎಂದು ಅಭಿಪ್ರಾಯಪಟ್ಟರು.ಪಟ್ಟಣದ ನಗರಸಭೆ ರಂಗಮಂದಿರದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನಗರಸಭೆ ಹಾಗೂ ಶಿಕ್ಷಕರ ದಿನಾಚರಣೆ ಅನುಷ್ಠಾನ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ರೂಪಿಸುವ ಶ್ರೇಷ್ಠ ವ್ಯಕ್ತಿತ್ವ ಶಿಕ್ಷಕರದ್ದು ಎಂದು ಹೇಳಿದರು.ತಾಲ್ಲೂಕಿ ನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಕೊಠಡಿ ಕೊರತೆ, ಶಿಕ್ಷಕರ ಕೊರತೆ, ಕೆಲವು ಮೂಲ ಸೌಲಭ್ಯಗಳ ಕೊರತೆ ನಡುವೆಯೂ ಎಸ್.ಎಸ್.ಎಲ್.ಸಿ.ಯಲ್ಲಿ ೨೪ ಶಾಲೆಗಳಲ್ಲಿ ಶೇ.೧೦೦ ಫಲಿತಾಂಶ ಬಂದಿರುವುದು ಶಿಕ್ಷಕರ ಅವಿರತ ಪ್ರಯತ್ನದ ಫಲವಾಗಿದೆ. ನಮ್ಮ ತಾಲ್ಲೂಕು ಎಸ್.ಎಸ್.ಎಲ್.ಸಿಯಲ್ಲಿ ಕಳೆದ ಬಾರಿ ಶೇ.೯೪.೯೦ ಫಲಿತಾಂಶ ಪಡೆದಿದೆ. ಈ ವರ್ಷ ಶೇ.೧೦೦ ಫಲಿತಾಂಶ ತಲುಪಲು ಶಿಕ್ಷಕರು ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಯತೀಶ್ ಮಾತನಾಡಿ, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರುಪೂರ್ಣಿಮೆ ಹೆಸರಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಮಗೆ ಪಾಠ ಕಲಿಸಿದ ಗುರುವಿಗೆ ನಾವು ಸದಾ ಕೃತಜ್ಞರಾಗಿರಬೇಕು. ಗುರು ಎಂಬ ಪದದ ಶಕ್ತಿಯೆ ಅಂತಹದ್ದಾಗಿದ್ದು, ಎಲ್ಲವನ್ನೂ ಮೀರಿದ ಶಕ್ತಿಯೆ ಗುರುವಾಗಿರುತ್ತಾನೆ. ಶಿಕ್ಷಕರ ದಿನವನ್ನು ಆಚರಿಸುವ ಮೂಲಕ ಶಿಕ್ಷಕರ ಸೇವಾ ಕಾರ್ಯ ಸ್ಮರಿಸಿಕೊಳ್ಳಲು ಇದೊಂದು ಅವಕಾಶ ಎಂದರು.ಇಂದಿರಾಗಾಂಧಿ ಕಾಲೇಜಿನ ಉಪನ್ಯಾಸಕಿ ಡಾ.ವಸುಮತಿ ಗೌಡ ವಿಶೇಷ ಉಪನ್ಯಾಸ ನೀಡಿದರು. ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ಟಿ. ನಾಯಕ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್, ವಿವಿಧ ಶಿಕ್ಷಕ ಸಂಘಟನೆಯ ಲಕ್ಷ್ಮಣ್‌ ನಾಯ್ಕ್‌ ಪ್ರೇಮಕುಮಾರಿ, ಮಹಾಬಲೇಶ್ವರ ಜಿ., ಪ್ರಭು ಇ.ಎನ್., ಸುಬ್ರಹ್ಮಣ್ಯ ಟಿ.ಪಿ., ವಿಕ್ಟೋರಿಯಾ ಫುಟಾರ್ಡೋ, ಕವಿರಾಜ್, ಪಾರ್ವತಿ ಇನ್ನಿತರರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅನ್ನಪೂರ್ಣ ವಂದಿಸಿದರು.ಶಿಕ್ಷಕರನ್ನು ಗೌರವದಿಂದ ಕಾಣುವ ಪರಿಪಾಠವಿರಲಿ: ಬಿ.ಕೆ.ಮೋಹನ್‌ ಕಿವಿಮಾತು

ಭದ್ರಾವತಿ: ಸಮಾಜ ಪರಿವರ್ತನೆಯಾಗಬೇಕಾದರೆ ಪ್ರತಿಯೊಬ್ಬರೂ ಶೈಕ್ಷಣಿಕ ಪ್ರಗತಿ ಹೊಂದಬೇಕು. ಅಂತಹ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿರುವ ಶಿಕ್ಷಕರು ದೇವರ ಸಮಾನರಾಗಿದ್ದು, ಅವರನ್ನು ಗೌರವದಿಂದ ಕಾಣುವ ಪರಿಪಾಠ ಬೆಳಸಿಕೊಳ್ಳಬೇಕೆಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ತರೀಕೆರೆ ರಸ್ತೆಯ ದೈವಜ್ಞ ಸಭಾಭವನದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಶಿಕ್ಷಕ ವೃತ್ತಿ ನಿರ್ವಹಿಸುತ್ತಿರುವವರು ಪುಣ್ಯವಂತರು. ಶಿಕ್ಷಣ ಪಡೆದುಕೊಳ್ಳುವ ದಿನಗಳಲ್ಲಿ ದಾರಿ ತಪ್ಪಿದರೆ ಜೀವನದಲ್ಲಿ ಅವರ ಬದುಕಿನ ದಾರಿಯೂ ಬದಲಾಗುತ್ತದೆ. ಅದಕ್ಕೆ ಎಂದಿಗೂ ಅವಕಾಶ ಮಾಡಿಕೊಡಬಾರದು. ಶಿಕ್ಷಕರು ನಮ್ಮೆಲ್ಲರಿಗೂ ಮಾರ್ಗ ದರ್ಶಕರು, ಮುಂದಿನ ಭವಿಷ್ಯದ ಪ್ರಜೆಗಳನ್ನು ರೂಪಿಸುವವರು. ಶಿಕ್ಷಕರಿಗೆ ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷ ಎಂ.ಮಣಿ ಎ.ಎನ್.ಎಸ್., ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಹೊತ್ತಿರುವ ಶಿಕ್ಷಕರ ಪಾತ್ರ ಬಹು ದೊಡ್ಡದು. ಸರ್ವಪಲ್ಲಿ ರಾಧಾ ಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟಿದೆ. ಅವರ ನೆನಪಿನಲ್ಲಿ ಶಿಕ್ಷಕರ ದಿನಾಚರಣೆ ರಾಜ್ಯಾಧ್ಯಂತ ನಡೆಯುತ್ತಿರುವುದು ಶಿಕ್ಷಕರ ವೃತ್ತಿಗೆ ತಂದ ಗೌರವವಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಿ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತರಾದ ೫೫ ಜನ ಶಿಕ್ಷಕರನ್ನು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರುಗಳಾದ ಕೆ.ಸುದೀಪ್ ಕುಮಾರ್, ಬಿ.ಎಂ ಮಂಜುನಾಥ್, ಚನ್ನಪ್ಪ, ಬಿ.ಆರ್.ಸಿ ವಿ.ಎಚ್ ಪಂಚಾಕ್ಷರಿ, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಶಿವ ಕುಮಾರ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸಿ.ಡಿ.ಮಂಜುನಾಥ್, ಉಮಾ, ಚಂದ್ರಶೇಖರ್, ಪೃಥ್ವಿರಾಜ್, ಹನುಮಂತು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಕ್ಲಾಸ್‌ ತೆಗೆದುಕೊಂಡ ಶಿಕ್ಷಕರು!ತೀರ್ಥಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರದ ವೃಂದ ಮತ್ತು ನೇಮಕಾತಿ ನಿಯಮದ ಅನ್ವಯ ಹಿಂಬಡ್ತಿ ನೀಡಿರುವ ಸರ್ಕಾರದ ನಿಲುವನ್ನು ಖಂಡಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರು ಗುರುವಾರ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ ಶಾಲೆಯನ್ನು ನಡೆಸಿದ್ದಾರೆ .

ಈ ಕುರಿತಂತೆ ಪತ್ರಿಕ ಹೇಳಿಕೆ ನೀಡಿರುವ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಎನ್. ಕೆ.ಜಯಂತಿ, ಬಿಎಡ್ ಪದವಿಯೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು 25-30 ವರ್ಷಗಳ ಸೇವಾ ಹಿರಿತನ ವಿದ್ದರೂ ಯಾವುದೇ ರೀತಿಯ ಮುಂಬಡ್ತಿಯನ್ನು ನೀಡದೆ 2017 ರಿಂದ ಅನ್ವಯವಾದ ವೃಂದ ಮತ್ತು ನೇಮಕಾತಿ ನಿಯಮದಡಿ ಪೂರ್ವನ್ವಯ ಆಗುವಂತೆ ಹಿಂಬಡ್ತಿ ನೀಡಿರುವುದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.ಸೇವಾ ಜೇಷ್ಠತೆ ಹಾಗೂ ಉನ್ನತ ವಿದ್ಯಾಭ್ಯಾಸವನ್ನು ಪರಿಗಣನೆಗೆ ತೆಗೆದುಕೊಳ್ಳದೆ ವರ್ಗಾವಣೆಯಲ್ಲೂ ಸ್ಥಳಾವಕಾಶ ಸಿಗದ ಶಿಕ್ಷಕರು ಮನನೊಂದಿದ್ದಾರೆ. ಆದರೆ, ಇಲಾಖೆಯು ಹಿಂಬಡ್ತಿ ನೀಡಿದ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಶಿಕ್ಷಕರಿಂದ ಪಾಠ ಬೋಧನೆ ಕ್ರೀಡಾಕೂಟ ಪ್ರತಿಭಾ ಕಾರಜಿ ಹಾಗೂ ಇತರೆ ಇಲಾಖೆ ಕಾರ್ಯಗಳನ್ನು ಮಾಡಿಸುತ್ತಿದೆ ಎಂದು ದೂರಿದ್ದಾರೆ .2017ರ ವೃಂದ ಮತ್ತು ನೇಮಕಾತಿ ನಿಯಮಧನ್ವಯ ಆರು ಮತ್ತು 7ನೇ ತರಗತಿಗೆ ಜಿಪಿಟಿ ಶಿಕ್ಷಕರೆಂದು ಹೊಸ ನೇಮಕಾತಿ ಮಾಡಿರುವುದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಡಿದ ಅನ್ಯಾಯವಾಗಿದೆ.

ಆದ ಕಾರಣ ತಾಲೂಕು ಆಡಳಿತ ವತಿಯಿಂದ ನಡೆಸಿರುವ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ ತರಗತಿಗಳನ್ನು ನಡೆಸುವ ಮೂಲಕ ಕರ್ತವ್ಯ ನಿರ್ವಹಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.