ಸರ್ಕಾರದ ಗ್ಯಾರಂಟಿ ಮೂಲಕ ಸಾಮಾಜಿಕ ಸಮಾನತೆ

| Published : Jan 27 2024, 01:16 AM IST

ಸಾರಾಂಶ

ದೇಶದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆ ನಿಯಂತ್ರಿಸುವಲ್ಲಿ ಅಥವಾ ತೊಡೆದು ಹಾಕುವಲ್ಲಿ ನಾವೆಲ್ಲರೂ ಭೇದ -ಭಾವ ಮರೆತು ಒಂದಾಗಿ ಹೋರಾಡಬೇಕಾದ ಅವಶ್ಯಕತೆ ಹೆಚ್ಚಾಗಿದೆ. ದೇಶಕ್ಕೆ ಇಂದು ಒಗ್ಗಟ್ಟಿನ ಅಗತ್ಯವಿದೆ. ಒದಗಿ ಬರುವ ಹೊಸ ಹೊಸ ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕಾಗಿದೆ

ಧಾರವಾಡ: ಐದೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಸಾಮಾಜಿಕ ಸಮಾನತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇತರರಿಗೆ ಮಾದರಿ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿಯ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತವು ಶುಕ್ರವಾರ ಆಯೋಜಿಸಿದ್ದ 75 ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟಪಿತ ಮಹಾತ್ಮ ಗಾಂಧಿಜೀ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಅವರು, ಸಿಎಂ ಸಿದ್ಧರಾಮಯ್ಯ ಎಲ್ಲ ಐದು ಜನಪರ ಯೋಜನೆಗಳಾದ ಶಕ್ತಿ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಜಾರಿಗೊಳಿಸಿ ರಾಜ್ಯದ ಜನತೆಗೆ ತಲುಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಯುವ ನಿಧಿ ಯೋಜನೆಗೆ ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಸುಮಾರು 2,580 ಜನ ಅಭ್ಯರ್ಥಿಗಳು ನೋಂದಾಯಿತರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಹೊಸ ಟೆಲಿ ಐಸಿಯು ಹಬ್‌ನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಜಿಪಂ ವತಿಯಿಂದ 2023-24ನೇ ಸಾಲಿನಲ್ಲಿ ಈವರೆಗೂ ₹695 ಕೋಟಿ ವೆಚ್ಚ ಮಾಡಲಾಗಿದೆ. ಜಿಲ್ಲೆಯಾದ್ಯಂತ ಪ್ರತಿ ತಾಲೂಕಿಗೆ ಒಂದು ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಒದಗಿಸಲಾಗಿದೆ. ಸಾರ್ವಜನಿಕರು 1962 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ, ಪಶು ಸಂಜೀವಿನಿ ಆ್ಯಂಬುಲೆನ್ಸ್‌ ಸೇವೆ ಪಡೆಯಬಹುದು ಎಂದ ಅವರು, ಮಳೆಯ ಕೊರತೆಯಿಂದ ಜಿಲ್ಲೆಯ ಎಲ್ಲ ಎಂಟು ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಕುಡಿವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ದೇಶದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆ ನಿಯಂತ್ರಿಸುವಲ್ಲಿ ಅಥವಾ ತೊಡೆದು ಹಾಕುವಲ್ಲಿ ನಾವೆಲ್ಲರೂ ಭೇದ -ಭಾವ ಮರೆತು ಒಂದಾಗಿ ಹೋರಾಡಬೇಕಾದ ಅವಶ್ಯಕತೆ ಹೆಚ್ಚಾಗಿದೆ. ದೇಶಕ್ಕೆ ಇಂದು ಒಗ್ಗಟ್ಟಿನ ಅಗತ್ಯವಿದೆ. ಒದಗಿ ಬರುವ ಹೊಸ ಹೊಸ ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಅನಕ್ಷರತೆ, ಅಜ್ಞಾನ, ಅನಾರೋಗ್ಯ, ಬಡತನ, ನಿರುದ್ಯೋಗವೆಂಬ ಶತ್ರುಗಳನ್ನು ಹೋಗಲಾಡಿಸಲು ನಾವೆಲ್ಲರೂ ಪಣ ತೊಡೋಣ. ಭಾರತವನ್ನು ಜಗತ್ತಿನ ಅತ್ಯಂತ ಪ್ರಬುದ್ದ, ಪ್ರಗತಿಪರ, ಭದ್ರ, ಬಲಿಷ್ಟ ರಾಷ್ಟ್ರವನ್ನಾಗಿ ರೂಪಿಸಲು ನಾವೆಲ್ಲ ಒಂದಾಗಿ ಪ್ರಯತ್ನಿಸೋಣ ಎಂದರು.

ಸಾಮೂಹಿಕ ವಾಚನ: ಇಂದಿನ ಗಣರಾಜ್ಯೋತ್ಸವದಲ್ಲಿ ಭಾರತ ಸಂವಿಧಾನದ ಶ್ರೇಷ್ಟತೆ ಸಾರುವ ಸಂವಿಧಾನ ಪೀಠಿಕೆಯ ಸಾಮೂಹಿಕ ವಾಚನ ಜರುಗಿತು. ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಬಕಷ್ ಅತಿಥಿಗಳಿಗೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಬೋಧಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಗುರುಸಿದ್ದಯ್ಯ ಹಿರೇಮಠ, ಸಂಜಯಕುಮಾರ ಬಿರಾದಾರ, ಹನುಮಂತಪ್ಪ ಹರಿಜನ, ನವೀನ ಕುಲಕರ್ಣಿ, ಮಹಾಂತೇಶ ವೀರಾಪೂರ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮಿಲನ ಭಟ್, ಮಲ್ಲಪ್ಪ ಪೂಜಾರ, ಪ್ರಭಾವತಿ ಲಂಗೋಟಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಕಾಶ ಮಲ್ಲಿಗವಾಡ, ಯೋಗ ಕ್ಷೇತ್ರದಲ್ಲಿ ಅಭಿಷೇಕ ಪಲ್ಲೇದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಶಾಲಾ ಶಿಕ್ಷಣ ಇಲಾಖೆಯ ವಿವಿಧ ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ನಿಮಿತ್ತ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸಾಮೂಹಿಕ ನೃತ್ಯ, ದೇಶ ಭಕ್ತಿಗೀತೆ, ಗಾಯನ ಮತ್ತು ಛದ್ಮವೇಷದಾರಿಗಳಾಗಿ ವಿವಿಧ ಕಾರ್ಯಕ್ರಮ ಪ್ರದರ್ಶಿಸಿದರು.

ಪ್ರಭಾರ ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ., ಪೊಲೀಸ್ ಆಯುಕ್ತೆ ರೇಣುಕಾ ಸುಕಮಾರ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಡಿಪಿಐ ಎಸ್.ಎಸ್. ಕೆಳದಿಮಠ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿದ್ದರು.

ಆಕರ್ಷಕ ಪಥ ಸಂಚಲನ: ಗಣರಾಜ್ಯೋತ್ಸವದಲ್ಲಿ ವಿವಿಧ ಇಲಾಖೆ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಶಿಸ್ತುಬದ್ದವಾಗಿ ಪಥಸಂಚಲನ ಮಾಡುವದರೊಂದಿಗೆ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿ ಗಮನ ಸೆಳೆದರು.

ಆರ್.ಪಿ.ಐ ಮಾರುತಿ ಹೆಗಡೆ ಪರೇಡ ಕಮಾಂಡರ್ ಆಗಿ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಆರ್.ಎಸ್. ಗುಡೇನಟ್ಟಿ ಸೆಕೆಂಡ್ ಇನ್ ಕಮಾಂಡರ್ ಆಗಿ ಪಥ ಸಂಚಲನದ ನೇತೃತ್ವ ವಹಿಸಿದ್ದರು. ಜಿಲ್ಲಾ ಪೊಲೀಸ್ ಬ್ಯಾಂಡ್ ನೇತೃತ್ವ ವಹಿಸಿದ್ದ ವೈ.ಎಫ್. ಭಜಂತ್ರಿ ತಂಡವು ಆಕರ್ಷಕ ಮತ್ತು ಸುಶ್ರಾವ್ಯವಾದ ಸಂಗೀತವನ್ನು ಬ್ಯಾಂಡ್ ಮೂಲಕ ನುಡಿಸಿತು. ವಿವಿಧ ಪಡೆಗಳ ನೇತೃತ್ವ ವಹಿಸಿದ ಮುಖಂಡರು ಪಥ ಸಂಚಲನ ಮುನ್ನಡೆಸಿದರು.