ವಿವಿಧ ಜಾತಿ ಮತ್ತು ಸಮುದಾಯದವರು ಒಂದೇ ವೇದಿಕೆಯಲ್ಲಿ ಮದುವೆಯಾಗುವುದರಿಂದ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಮೂಡುತ್ತದೆ ಎಂದು ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ಶಿಗ್ಗಾಂವಿ: ವಿವಿಧ ಜಾತಿ ಮತ್ತು ಸಮುದಾಯದವರು ಒಂದೇ ವೇದಿಕೆಯಲ್ಲಿ ಮದುವೆಯಾಗುವುದರಿಂದ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಮೂಡುತ್ತದೆ ಎಂದು ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಹಿರೇಮಠದಲ್ಲಿ ಹಮ್ಮಿಕೊಂಡ ೧೭ನೇ ವರ್ಷದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕಾರ ಬದ್ಧ ಮದುವೆಗಳು ಸಾಮೂಹಿಕ ವಿವಾಹಗಳಲ್ಲಿ ಸಾಧ್ಯವಿದ್ದು, ಹರಗುರು ಚರಮೂರ್ತಿಗಳ ಆಶೀರ್ವಾದ ಸಿಗಲು ಸಾದ್ಯವಾಗುತ್ತದೆ, ದುಂದುವೆಚ್ಚ ಎಂದರೆ ದುರಾಚಾರ. ಅದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಮದುವೆ ಮಾಡಿಕೊಂಡು ಸಾಲ ಮಾಡಿಕೊಳ್ಳುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ದುಂದುವೆಚ್ಚವಿಲ್ಲದೇ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಬೇಕು ಎಂದರು.ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ, ಗೌರವಪೂರ್ವಕ ಬದುಕಿಗಿಂತ ವಿಚ್ಛೇದನಗಳು ಹೆಚ್ಚಾಗಿರುವುದು ಬಹಳಷ್ಟು ಖೇದಕರ ಎಂದು ವಿಷಾದಿಸಿದ ಶ್ರೀಗಳು, ನಮ್ಮ ಧರ್ಮ ಮತ್ತು ಸಂಸ್ಕೃತಿ ಅರ್ಥದ ಮೇಲೆ ಜೀವನ ನಡೆಸಬೇಕು, ಇದು ನಮ್ಮ ಬದುಕಾಗಬೇಕು, ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಸರಳವಾಗಿ ವಿವಾಹ ಕಾರ್ಯಕ್ರಮಗಳು ನೆರವೇರಬೇಕು ಎಂದರು.ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮೇಲು, ಕೀಳು ಎಂಬುದು ಇಲ್ಲ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮಾಡುವ ವಿವಾಹಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣವರ ಮಾತನಾಡಿ, ಸತತ ೧೭ ವರ್ಷಗಳಿಂದ ಈ ಸಾಮೂಹಿಕ ವಿವಾಹ ಮಾಡಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಶಿವಾನಂದ ಮ್ಯಾಗೇರಿ ಮಾತನಾಡಿ, ೧೭ ವರ್ಷಗಳ ಯಶಸ್ವಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಅಗತ್ಯವಾಗಿದ್ದು, ಹೀಗಾಗಿ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು.ಗಂಜೀಗಟ್ಟಿ ಶಿವಲಿಂಗೇಶ್ವರ ಶಿವಾಚಾರ್ಯರು, ಅಸೂಟಿಯ ರೇವಣಶಿದ್ದೇಶ್ವರ ಮಹಾಸ್ವಾಮಿಗಳು, ಹಿರೆಂಬೇಂಡಿಗೇರಿ ಹಿರೇಮಠದ ವಿಶ್ವೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಾಮೂಹಿಕ ವಿವಾಹದಲ್ಲಿ ೧೦ ಜೋಡಿಗಳು ನವದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಮೌಲಾಸಾಬ್ ತಹಶೀಲ್ದಾರ ಹಾಗೂ ಶಿವಾನಂದ ಮ್ಯಾಗೇರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ಗುರುನಾಥ ಅಂಚಟಗೇರಿ, ಮೃತ್ಯಂಜಯ ವಡೆಯರಮಠ, ಅರ್ಜುನ ಹಂಚಿನಮನಿ, ಮಂಜುನಾಥ ಕಾರಡಗಿ, ಮಹೇಶ ಹಿರೇಮಠ, ಎಂ.ಎಚ್. ಪಠಾಣ್, ಫಕೀರಪ್ಪ ಸಂಗಣ್ಣವರ, ಧರಯಪ್ಪಗೌಡ್ರ ಪಾಟೀಲ, ವಿಶ್ವನಾಥ ಹರಕುಣಿ, ರಮೇಶ ಸಾತಣ್ಣವರ, ಫಯಾಜ್ ಸವಣೂರ ಸೇರಿದಂತೆ ಹಿರೆಬೆಂಡಿಗೇರಿ ಗ್ರಾಮದ ಮುಖಂಡರು ಹಾಗೂ ಸಾಮೂಹಿಕ ವಿವಾಹಕ್ಕೆ ಆಗಮಿಸಿದ ಸಾರ್ವಜನಿಕರು ಇದ್ದರು.