ಸಾಹಿತ್ಯವು ಸಮುದಾಯದಲ್ಲಿ ನಿರಂತರವಾಗಿದ್ದರೆ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ

| Published : May 10 2024, 01:32 AM IST

ಸಾಹಿತ್ಯವು ಸಮುದಾಯದಲ್ಲಿ ನಿರಂತರವಾಗಿದ್ದರೆ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲಾತೀತವಾಗಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಗಳು ಸಮುದಾಯದಲ್ಲಿ ನಿತ್ಯ ನಿರಂತರ ಜೀವಂತಿಕೆಯನ್ನು ಪಡೆದುಕೊಂಡರೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹಾವೇರಿ: ಕಾಲಾತೀತವಾಗಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆಗಳು ಸಮುದಾಯದಲ್ಲಿ ನಿತ್ಯ ನಿರಂತರ ಜೀವಂತಿಕೆಯನ್ನು ಪಡೆದುಕೊಂಡರೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ಆಕ್ಸಫರ್ಡ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ ಆಧುನಿಕ ವಚನಕಾರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಂಗಾಧರ ನಂದಿ ಹಾಗೂ ನಾಡರತ್ನ ಪ್ರಶಸ್ತಿ ವಿಜೇತ ಸಂಕಮ್ಮ ಸಂಕಣ್ಣನವರ ಅವರ ವಚನಗಳ ಚಿಂತನ-ಮಂಥನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಸಂಗೀತ ಕಲೆ ಮತ್ತು ಕಾವ್ಯ ಜನರ ಹೃದಯ ಸಿಂಹಾಸನದಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಅದರ ರಸಸ್ವಾದದ ಮೂಲಕ ನಮ್ಮ ಮನಸ್ಸು ಬುದ್ಧಿ ವಿವೇಕಗಳನ್ನು ಜಾಗೃತವಾಗಿಟ್ಟುಕೊಳ್ಳಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಡಾ. ಪ್ರಶಾಂತಕುಮಾರ ಬೆನ್ನೂರ, ಆಧುನಿಕ ಬದುಕಿನಲ್ಲಿ ಸಂಸ್ಕೃತಿ ಸಂಸ್ಕಾರಗಳು ಮನುಷ್ಯನಿಂದ ದೂರವಾಗುತ್ತಿವೆ. ಆಧುನಿಕ ಭಾರತ ಸುಸಂಸ್ಕೃತ ಭಾರತವಾಗಲು ಸಾಹಿತ್ಯ ಸಾಂಸ್ಕೃತಿಕ ಚಿಂತನೆಗಳು ನಡೆದು ಜನರ ಮೇಲೆ ಪ್ರಭಾವ ಬೀರಬೇಕು. ವಚನ ಸಾಹಿತ್ಯ ಸರಳ ಸಮೃದ್ಧ ಸಾತ್ವಿಕ ಸಂದೇಶವುಳ್ಳ ಗಟ್ಟಿ ಸಾಹಿತ್ಯ ಎಂದರು. ಗಂಗಾಧರ ನಂದಿ ಅವರ ಕುರಿತು ಮಾತನಾಡಿದ ಸಾಹಿತಿ ಹನುಮಂತಗೌಡ ಗೊಲ್ಲರ, ದಾರ್ಶನಿಕರ ವೈಚಾರಿಕ ಚಿಂತನೆಗಳು ಜನಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರಿ ಸತ್ಯದ ಸಂದೇಶಗಳನ್ನು ನೀಡಬೇಕು. ಗಂಗಾಧರ ನಂದಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಪಾದರಸದಂತೆ ಸಂಚರಿಸಿ ಬರೆದು, ಬರೆಸಿ ಬದುಕಿದ ಸಾಹಿತಿ ಎಂದರು.ಸಾಹಿತಿ ಸಂಕಮ್ಮ ಸಂಕಣ್ಣನವರ ಅವರ ವಚನಗಳ ಕುರಿತು ಮಾತನಾಡಿದ ಸಾಹಿತಿ ಜೀವರಾಜ ಛತ್ರದ, ಕನ್ನಡದ ಕಾಳಜಿಯೊಂದಿಗೆ ಬರಹಗಾರರಾಗಿ, ಪರಂಪರೆ ಸಂಸ್ಕೃತಿಯ ಕಟ್ಟಾಳುವಾಗಿ ಬರಹದಂತೆ ಬದುಕಿದ ಸಂಕಮ್ಮ ಸಂಕಣ್ಣನವರ ಮಾದರಿ ಸಾಹಿತಿ ಎಂದರು. ಶಸಾಪ ನಗರ ಘಟಕದ ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಆಶಯ ನುಡಿ ನುಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ, ಪ್ರಾಚಾರ್ಯ ವೀರೇಶ ಹಿತ್ತಲಮನಿ, ಚಂದ್ರಶೇಖರ ವಡ್ಡು, ಸಂಕಮ್ಮ ಸಂಕಣ್ಣನವರ, ಸುಲೋಚನಾ ನಂದಿ, ಡಾ. ರವೀಂದ್ರ ನಂದಿ, ಚಂದ್ರಶೇಖರ ಮಾಳಗಿ, ಶೇಖರ ಭಜಂತ್ರಿ, ಅಕ್ಕಮಹಾದೇವಿ ಹಾನಗಲ್, ಟಿ. ಶ್ರೀನಿವಾಸ, ರೇಣುಕಾ ಗುಡಿಮನಿ, ಟಿ.ಎಸ್. ಮೇಘನಾ ಇದ್ದರು. ಪ್ರಾಚಾರ್ಯ ವೀರೇಶ ಹಿತ್ತಲಮನಿ ಸ್ವಾಗತಿಸಿದರು. ಬೀಬಿಹಿಯಾಕ ವಂದಿಸಿದರು.