ಸಾರಾಂಶ
- ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ. ಸಾಮಾಜಿಕ ನ್ಯಾಯ ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರ ವಾಗಿರುವ ತತ್ವವಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಶಾಂತಿನಗರ (ಪುರಿಭಟ್ಟಿ), ಓಂ ಶಕ್ತಿ ಸಮುದಾಯ ಭವನದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವದಾದ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೊಗ, ಶಿಕ್ಷಣ, ವಲಸೆ, ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿವೆ. ಇಂಥ ಸಮಸ್ಯೆಗಳನ್ನು ತೊಡೆದು ಹಾಕುವ ಪ್ರಯತ್ನವಾಗಬೇಕಿದೆ. ಸಾಮಾಜಿಕ ಅಸಮಾನತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಸಲುವಾಗಿ ಪ್ರತಿ ವರ್ಷ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜೀವನಕ್ಕೆ ಅವಶ್ಯವಾದ ಕಾನೂನುಗಳ ಅರಿವು ಪ್ರತಿ ಯೊಬ್ಬರಿಗೂ ಇರಬೇಕು ಎನ್ನುವ ಉದ್ದೇಶದಿಂದ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವದಲ್ಲೇ ಶ್ರೇಷ್ಠವಾದ ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಪ್ರತಿಯೊಬ್ಬರೂ ಸಂವಿಧಾನ ಓದಿ ತಮಗಿರುವ ಹಕ್ಕುಗಳ ಬಗ್ಗೆ ತಿಳಿಯಬೇಕು. ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳೊಂದಿಗೆ ದೇಶದ ಮಹಾನ್ ನಾಯಕರನ್ನು ಅನುಸರಿಸಬೇಕು. ಸಂವಿಧಾನದಲ್ಲಿ ನೀಡಲಾಗಿರುವ ಸಾಮಾಜಿಕ ನ್ಯಾಯದಿಂದ ಸಮಾಜದಲ್ಲಿ ಸಮಾನತೆಯಿದೆ. ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಅರಿತು ಇತರರಿಗೂ ಅರಿವು ಮೂಡಿಸಬೇಕು ಎಂದು ಹೇಳಿದರು.ವಕೀಲ ಆರ್. ರಮೇಶ್ ಕಾನೂನು ಸಾಕ್ಷರತ ಬಗ್ಗೆ ಉಪನ್ಯಾಸ ನೀಡಿ. ಜಗತ್ತಿನೆಲ್ಲೆಡೆ ಲಿಂಗ ತಾರತಮ್ಯ, ಜನಾಂಗೀಯ ಸಂಘರ್ಷ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಅನಕ್ಷರತೆ, ವಲಸೆಯಂತಹ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿವೆ. ಈ ಸಮಸ್ಯೆಗಳನ್ನು ತೊಡೆದು ಹಾಕುವ ಪ್ರಯತ್ನ ಮಾಡಬೇಕಿದೆ. ಸಾಮಾಜಿಕ ಅಸಮಾನತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಜೊತೆಗೆ ಸಾಮಾಜಿಕ ನ್ಯಾಯವೆಂದರೆ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ಹಿಂದುಳಿದವರು, ಬಡವರು, ದುರ್ಬಲರು, ಅಲ್ಪಸಂಖ್ಯಾತರು, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟ ಅಸಹಾಯಕರನ್ನು ರಾಜಕೀಯವಾಗಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸುವುದಾಗಿದೆ. ಲಿಂಗ, ವಯಸ್ಸು, ಜನಾಂಗ, ಜನಾಂಗೀಯತೆ, ಧರ್ಮ, ಸಂಸ್ಕೃತಿ ಅಥವಾ ಅಂಗವೈಕಲ್ಯಗಳನ್ನು ಎದುರಿಸುತ್ತಿದ್ದಾರೆ.ಮೂಲಭೂತ ಅಡೆತಡೆಗಳನ್ನು ತೆಗೆದುಹಾಕಲು ಸಾಮಾಜಿಕ ನ್ಯಾಯದ ತತ್ವಗಳನ್ನು ಎತ್ತಿಹಿಡಿಯುವುದು ಅವಶ್ಯಕ. ಸಾಮಾಜಿಕ ಅಭಿವೃದ್ಧಿಗಳು ಸಾಮಾಜಿಕ ನ್ಯಾಯ, ಒಗ್ಗಟ್ಟು, ಸಾಮರಸ್ಯ ಮತ್ತು ದೇಶಗಳ ಒಳಗೆ ಮತ್ತು ದೇಶಗಳ ನಡುವೆ ಸಮಾನತೆಯನ್ನು ಗುರಿಯಾಗಿರಿಸಿಕೊಂಡಿವೆ. ಸಾಮಾಜಿಕ ನ್ಯಾಯ, ಸಮಾನತೆ ಎಲ್ಲಾ ಸಮಾಜಗಳ ಮೂಲಭೂತ ಮೌಲ್ಯ ರೂಪಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್, ನಗರ ಸಭೆ ಉಪಾಧ್ಯಕ್ಷೆ ಅನುಮಧುಕರ್, ನಗರಸಭೆ ವ್ಯವಸ್ಥಾಪಕ ರವಿ, ನಗರಸಭೆ ನಾಮ ನಿರ್ದೇಶಿತ ಸದಸ್ಯ ತಬ್‌ರ್‍ಹೀಸ್ ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.