ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇಂದು ಶ್ರಮ ಪಡುವುದು ಅಗತ್ಯವಾಗಿದೆ. ಸಾಮಾಜಿಕ ಮಾಧ್ಯಮಗಳು ವರವೋ? ಶಾಪವೋ ಎನ್ನುವುದು ನಾವು ಬಳಸುವ ರೀತಿಯಲ್ಲಿದೆ.
ಲಕ್ಷ್ಮೇಶ್ವರ: ಸಾಮಾಜಿಕ ಮಾಧ್ಯಮಗಳನ್ನು ಸರಿಯಾಗಿ ಉಪಯೋಗ ಮಾಡಿಕೊಂಡರೆ ವರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೇ ಹೋದಲ್ಲಿ ಶಾಪವಾಗುತ್ತದೆ ಎಂದು ವಿಜಯಪುರ ಮಹಿಳಾ ವಿವಿ ವಿಶ್ರಾಂತ ಹಂಗಾಮಿ ಕುಲಪತಿ ಡಾ. ಓಂಕಾರ ಕಾಕಡೆ ತಿಳಿಸಿದರು.
ಶುಕ್ರವಾರ ಸಮೀಪದ ಶಿಗ್ಲಿಯ ಜಿ.ಎಸ್.ಎಸ್. ಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮುದ್ದುಮಕ್ಕಳ ಮುಖದಲ್ಲಿ ವಿಜ್ಞಾನಿಗಳು, ಬಾಹ್ಯಾಕಾಶ ವಿಜ್ಞಾನಿಗಳು, ರೈತರು, ವಿವಿಧ ಬಗೆಯ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಸಂತೋಷದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇಂದು ಶ್ರಮ ಪಡುವುದು ಅಗತ್ಯವಾಗಿದೆ. ಸಾಮಾಜಿಕ ಮಾಧ್ಯಮಗಳು ವರವೋ? ಶಾಪವೋ ಎನ್ನುವುದು ನಾವು ಬಳಸುವ ರೀತಿಯಲ್ಲಿದೆ. ನಾವು ಒಳ್ಳೆಯದಕ್ಕೆ ಬಳಸಿದರೆ ವರವಾಗುತ್ತದೆ. ಇಲ್ಲವಾದಲ್ಲಿ ಅದು ಶಾಪವಾಗುತ್ತದೆ. ಓದುವುದನ್ನು ಬಿಟ್ಟು ರೀಲ್ಸ್ ನೋಡಿದರೆ ಮೊಬೈಲ್ ಅಪಾಯಕಾರಿಯಾಗುತ್ತದೆ ಎಂದರು.
ಯುಕೆಜಿ ಮತ್ತು ಎಲ್‌ಕೆಜಿ ಓದುವ ಮಕ್ಕಳು ಮೊಬೈಲ್‌ನಲ್ಲಿ ಕಾಲ ಹರಣ ಮಾಡುತ್ತಿದ್ದಾರೆ ಎನ್ನುವುದು ಅಪಾಯದ ಮುನ್ಸೂಚನೆ ನೀಡುತ್ತದೆ. ಮೊಬೈಲ್ ಬಳಕೆಯು ಅಭ್ಯಾಸದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಬಳಕೆಯನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದರು.ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತರುವುದು ಶಿಕ್ಷಕರು ಮತ್ತು ಪಾಲಕರು ಜವಾಬ್ದಾರಿಯಾಗಿದೆ. ಅವರಲ್ಲಿನ ಆಸಕ್ತಿಯ ವಿಷಯದ ಅರಿತು ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದಲ್ಲಿ ಯಶಸ್ಸು ಕಾಣುತ್ತೇವೆ. ಸಂಸ್ಕಾರ, ಸಂಪ್ರದಾಯ ಕಲಿಸುವುದು ಅಗತ್ಯ. ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸುವುದು ಅಗತ್ಯ. ಸಾಮಾಜಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವುದು ಉತ್ತಮ ಎಂದರು.
ಈ ವೇಳೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ರಾಜರತ್ನಾ ಹುಲಗೂರ, ರಂಜನ್ ಪಾಟೀಲ, ಶಿವಾನಂದ ಮೂಲಿಮನಿ, ಪ್ರಭಣ್ಣ ಪವಾಡದ, ನಿರ್ಮಲಾ ಅರಳಿ, ಜ್ಯೋತಿ ಗಾಯಕವಾಡ, ಅಕ್ಷರ ದಾಸೋಹದ ಅಧಿಕಾರಿ ಎಚ್.ಎಸ್. ರಾಮನಗೌಡರ, ಮುಖ್ಯಶಿಕ್ಷಕ ಎಲ್.ಎಸ್. ಅರಳಹಳ್ಳಿ, ಗೌರಮ್ಮ ಮರಡಿ, ಶಿಕ್ಷಕರು ಬಿ.ಚಂದ್ರಪ್ಪ. ವಿ. ಅಶೋಕ, ಗೀತಾ ಕೊಳ್ಳಿ, ಆರ್.ಎಸ್. ಕೆಂಚಪ್ಪನವರ, ಎನ್.ಎಸ್. ವಿರಕ್ತಮಠ, ಪ್ರವೀಣ ಹುಲಗೂರ ಇದ್ದರು.