ಇಮ್ಮಡಿ ಶ್ರೀ ನೇತೃತ್ವದಲ್ಲಿ ಸಮಾಜ ಸಂಘಟನೆ

| Published : Feb 20 2024, 01:47 AM IST

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಭೋವಿ ಸಮಾಜ ಒಗ್ಗಟಾಗಿ ಇದೆ. ಇಮ್ಮಡಿ ಸಿದ್ದರಾಮಶ್ವರ ಶ್ರೀಗಳ ಆದೇಶವನ್ನು ಪಾಲಿಸುವುದರ ಮೂಲಕ ಸಮಾಜ ಅವರ ಒಟ್ಟಿಗೆ ಇದೆ

ಚಳ್ಳಕೆರೆ: ಕರ್ನಾಟಕ ರಾಜ್ಯದಲ್ಲಿ ಭೋವಿ ಸಮಾಜ ಒಗ್ಗಟಾಗಿ ಇದೆ. ಇಮ್ಮಡಿ ಸಿದ್ದರಾಮಶ್ವರ ಶ್ರೀಗಳ ಆದೇಶವನ್ನು ಪಾಲಿಸುವುದರ ಮೂಲಕ ಸಮಾಜ ಅವರ ಒಟ್ಟಿಗೆ ಇದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರ್ಲಗುಂಟೆ ರಾಮಪ್ಪ ತಿಳಿಸಿದರು.

ತಾಲೂಕಿನ ಕರಿಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ 852ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೋವಿ ಸಮಾಜ ಶ್ರೀಗಳ ಹಿಂದೆ ನಿಂತಿದೆ ಅವರ ಮಾರ್ಗದರ್ಶನದಂತೆ ನಡೆಯುತ್ತಿದೆ. ನಮ್ಮ ಸಮಾಜ ಶ್ರೀಗಳ ನೇತೃತ್ವದಲ್ಲಿ ಸುಸ್ಥಿರವಾಗಿದೆ. ಬಾಗಲಕೋಟೆಯಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಮುಂದೆ ಸಮಾಜ ಹಲವಾರು ಬೇಡಿಕೆಯನ್ನು ಇಟ್ಟಿತ್ತು. ಅದರಲ್ಲಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಸಿದ್ದರಾಮೇಶ್ವರ ಅಧ್ಯಯನ ಪೀಠವನ್ನು ಪ್ರಾರಂಭ ಮಾಡಲು ಸಿದ್ದರಾಮಯ್ಯರವರು ಸಮ್ಮತಿಸಿದ್ದಾರೆ. ಇಂದರಿಂದ ಸಮಾಜದ ಒಂದು ಬೇಡಿಕೆ ಈಡೇರಿದಂತೆ ಆಗಿದೆ ಎಂದರು.

ಲೋಕಸೇವಾ ಆಯೋಗಕ್ಕೆ ಬೋವಿ ಸಮಾಜದ ಸದಸ್ಯರನ್ನು ನೇಮಕ ಮಾಡುವುದು ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಮ್ಮ ಸಮುದಾಯದರಿಗೆ ಟಿಕೆಟ್ ನೀಡುವ ಬಗ್ಗೆ ಮುಖಂಡರು ಒಲವು ತೋರುತ್ತಿದ್ದಾರೆ. ಇದರ ಬಗ್ಗೆಯೂ ಸಹಾ ಮನವಿ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನಾ ಕರಿಕೆರೆ ಗ್ರಾಮದಲ್ಲಿ ಬೋವಿ ಸಮಾಜದ ಶ್ರೀಗಳನ್ನು ಹಾಗೂ ಸಮಾಜದ ಮುಖಂಡರನ್ನು ಪೂರ್ಣ ಕುಂಭದ ಸ್ವಾಗತದೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ಕರೆದೊಯ್ಯಲಾಯಿತು. ಚಳ್ಳಕೆರೆ ತಾಲೂಕು ಭೋವಿ ಸಮಾಜದ ಅಧ್ಯಕ್ಷ ಅಂಜನೇಯ, ನಿವೃತ್ತ ಪ್ರಾಂಶುಪಾಲ ಕನಕದಾಸ್ ಇದ್ದರು.