ಧಾರವಾಡ
ವೀರಶೈವ ಸಿದ್ಧಾಂತ, ಷಟಸ್ಥಳ, ಪಂಚಾಚಾರ್ಯ, ಅಷ್ಟಾವರಣಗಳೆಲ್ಲವೂ ಇತ್ತೀಚೆಗೆ ಬಂದಿದ್ದು ಎನ್ನುವ ಗೊಡ್ಡು ವಾದಕ್ಕಿಂತ ಜಗದ್ಗುರು ರೇಣುಕಾ ಭಗವತ್ಪಾದರು ಸಮಾಜದ ಒಳಿತಿಗೆ ಏನು ಬೋಧಿಸಿದ್ದಾರೆ? ಆ ಬೋಧನೆ ಅನುಸರಿಸಿ ಜೀವನ ಶುದ್ಧಿ ಮಾಡಿಕೊಳ್ಳುವತ್ತ ಚಿಂತನೆ ಮಾಡಬೇಕಿದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯರು ಹೇಳಿದರು.ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಪ್ರಸ್ತುತ ನಮ್ಮ ಸಮಾಜ, ಜಾತಿ ಎನ್ನುವ ಭಾವನೆಯಿಂದ ಸಮಾಜ ವಿಘಟನೆ ಆಗುವುದನ್ನು ನೋಡುತ್ತಿದ್ದೇವೆ. ರೇಣುಕಾಚಾರ್ಯರು ಸಮಾಜ ಒಗ್ಗೂಡಿಸಲು ಸೂಜಿ ತರಹ ಕೆಲಸ ಮಾಡಿದ್ದಾರೆಯೇ ವಿನಃ ಸಮಾಜ ವಿಘಟಿಸುವ ಕತ್ತರಿ ಕಾರ್ಯ ಮಾಡಿಲ್ಲ. ಇದನ್ನು ಸಮಾಜವು ಸೂಕ್ಷ್ಮವಾಗಿ ಗಮನಿಸಬೇಕು. ಇದೇ ಪರಂಪರೆಯನ್ನು ಸದ್ಯ ಪಂಚಪೀಠಗಳು ಸಹ ಮಾಡಿಕೊಂಡು ಬರುತ್ತಿವೆ ಎಂದರು.
ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹುಡಾ ಅಧ್ಯಕ್ಷ ಶಾಕೀರ ಸನದಿ, ಆಧುನಿಕ ಜಗತ್ತಿನಲ್ಲಿ ನಮ್ಮ ಪರಂಪರೆಯ ಹಾದಿಯನ್ನು ನಾವು ಮರೆಯುತ್ತಿದ್ದೇವೆ. ಜೊತೆಗೆ ಮಕ್ಕಳಿಗೂ ಧರ್ಮ, ಪರಂಪರೆ ಹಾಗೂ ಪದ್ಧತಿಗಳಿಂದ ದೂರ ಮಾಡುತ್ತಿದ್ದೇವೆ ಎನಿಸುತ್ತಿದೆ. ಇದರಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಈ ಹಿನ್ನೆಲೆಯಲ್ಲಿ ನೂರಾರು ವರ್ಷಗಳ ಹಿಂದೆಯೇ ಸಾಮಾಜಿಕ, ಸಮಾನತೆಯ ಮೌಲ್ಯ ಬಿತ್ತಿದ ರೇಣುಕಾಚಾರ್ಯರಂತಹ ಮಹಾತ್ಮರ ಜಯಂತಿ ಮೂಲಕ ಪರಂಪರೆಯ ನೋಟವನ್ನು ಕಾಣಬೇಕಿದೆ ಎಂದರು.ಸಮಾಜದ ಮುಖಂಡ ಬಂಗಾರೇಶ ಹಿರೇಮಠ, ಇಡೀ ಮಾನವ ಸಮಾಜಕ್ಕೆ ವೀರಶೈವ ಸಮಾಜದ ಕೊಡುಗೆ ಸಾಕಷ್ಟಿದೆ. ಆದರೆ, ಸಮಾಜ ಮಾತ್ರ ಬಡವಾಗಿ ಉಳಿದಿದೆ. ಸಂಘಟನೆ ಕೊರತೆಯಿಂದ ಸಮಾಜದ ಜನರು ಹಿಂದುಳಿದಿದ್ದು ಇನ್ನಾದರೂ ಸಂಘಟನಾತ್ಮಕವಾಗಿ ಬೆಳೆಯಬೇಕಿದೆ ಎಂದು ಕರೆ ನೀಡಿದರು.ದಾವಣಗೆರೆಯ ವಿಶ್ರಾಂತ ಪ್ರಾಂಶುಪಾಲ ಡಾ. ಎಂ. ಶಿವಶಂಕರಯ್ಯ, ವೀರಶೈವ-ರೇಣುಕಾಚಾರ್ಯರ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸಾಧನೆಗೈದ ಸಮಾಜದ ನಾಲ್ವರು ಗಣ್ಯರನ್ನು ಸನ್ಮಾನಿಸಲಾಯಿತು.28ರಂದು ರೇಣುಕ ಜಯಂತಿ:ರೇಣುಕಾಚಾರ್ಯ ಜಯಂತಿ ಸಮಿತಿ ಅಧ್ಯಕ್ಷರಾದ ಸರೋಜಾ ಪಾಟೀಲ, ವೀರಶೈವ ಸಮಾಜ, ಪರಂಪರೆ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಸರ್ಕಾರದ ಈ ಜಯಂತಿ ಅಲ್ಲದೇ ಸಮಾಜದಿಂದಲೂ ಪ್ರತ್ಯೇಕವಾಗಿ ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಮಾ. 28ರಂದು ಕಾಶಿ ಜಗದ್ಗುರುಗಳ ಸಮ್ಮುಖದಲ್ಲಿ ದೊಡ್ಡ ಪ್ರಮಾಣದಲ್ಲಿ ರೇಣುಕಾಚಾರ್ಯ ಜಯಂತಿ ಮಾಡುತ್ತಿದ್ದು, ಸಮಾಜದ ಜನರು ಹೆಗಲು ಕೊಡಬೇಕೆಂದು ಮನವಿ ಮಾಡಿದರು.
ಕರ್ನಾಟಕ ಜಂಗಮ ಯುವ ವೇದಿಕೆ ಅಧ್ಯಕ್ಷ ಮಂಜುನಾಥ ಹಿರೇಮಠ, ಕಾರ್ಯದರ್ಶಿ ಬಸವರಾಜ ಕುರಹಟ್ಟಿಮಠ, ಮಂಜುನಾಥ ಹೂಗಾರ, ಶಶಿಕಲಾ ಶಾಸ್ತ್ರಿಮಠ, ರೇಣುಕಾ ಲಿಂಬಣ್ಣದೇವರಮಠ ವೇದಿಕೆ ಮೇಲಿದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಜಗದ್ಗುರು ರೇಣುಕಾಚಾರ್ಯರು ಬೋಧನೆ ಮಾಡಿರುವ ಸಿದ್ಧಾಂತ ಕೇವಲ ಒಂದು ಜಾತಿ-ಜನಾಂಗಕ್ಕೆ ಸೀಮಿತವಲ್ಲ. ಇಡೀ ಮನುಕುಲ ಉತ್ತಮ ಹಾದಿಯಲ್ಲಿ ನಡೆಯುವ ಶಿವ ಸಿದ್ಧಾಂತ ಬೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜ ಅವರು ಬೋಧಿಸಿದ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಿ.ಶಾಂತಲಿಂಗ ಶಿವಾಚಾರ್ಯರು, ಅಮ್ಮಿನಬಾವಿ