ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಭಾಗ್ಯನಗರದಲ್ಲಿ ಅಮಾನವೀಯ ಪದ್ಧತಿಯೊಂದು ಅನಾವರಣವಾಗಿದೆ. ಅಂತರ್ಜಾತಿಯಲ್ಲಿ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಸಮಾಜದಿಂದಲೇ ಬಹಿಷ್ಕಾರ ಹಾಕಲಾಗಿದ್ದು, ಇತ್ಯರ್ಥಪಡಿಸಲು ಲಕ್ಷ ರುಪಾಯಿ ದಂಡ ಬೇಡಿಕೆ ಇಟ್ಟಿರುವ ವಿಕೃತ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಈಗಾಗಲೇ ನಾಲ್ಕಾರು ಪ್ರಕರಣಗಳು ನಡೆದಿವೆಯಾದರೂ ಬೆಳಕಿಗೆ ಬಂದಿರಲಿಲ್ಲ. ಈಗ ವರ್ಷದ ಹಿಂದೆ ಮದುವೆಯಾಗಿರುವ ಶಂಕ್ರಪ್ಪ ಬೇವಿನಹಳ್ಳಿ ಎಂಬ ಕುಟುಂಬಕ್ಕೆ ಹಾಕಿರುವ ಬಹಿಷ್ಕಾರ ಪ್ರಕರಣ ಬೆಳಕಿಗೆ ಬಂದಿದೆ.
ಶಂಕರಪ್ಪ ಅವರ ಮಗ ಮತ್ತೊಂದು ಜಾತಿಯ ಯುವತಿಯೊಂದಿಗೆ ಮದುವೆಯಾಗಿದ್ದಾರೆ. ಮದುವೆಯಾದ ಪತಿ, ಪತ್ನಿ ಅನ್ಯೋನ್ಯವಾಗಿದ್ದಾರೆ. ಎರಡೂ ಕುಟುಂಬದವರಲ್ಲಿ ಯಾವುದೇ ಸಮಸ್ಯೆಯಾಗಿಲ್ಲ.
ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಆದರೆ, ಶಂಕ್ರಪ್ಪ ಅವರ ಸಮಾಜದವರು ಈಗ ಅವರನ್ನು ಒಂದೂವರೆ ವರ್ಷದಿಂದ ಸಮಾಜದಿಂದ ಹೊರಗೆ ಇಟ್ಟಿದ್ದಾರೆ. ಅವರನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆಯುವಂತಿಲ್ಲ; ಅವರ ಮನೆ ಕಾರ್ಯಕ್ರಮಕ್ಕೆ ಸಮಾಜದ ಯಾರೂ ಸಹ ಹೋಗುವಂತಿಲ್ಲ.
ಹೀಗಾಗಿ, ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಅಚ್ಚರಿ ಎಂದರೆ ಈ ಕುರಿತು ಶಂಕ್ರಪ್ಪ ದೂರು ನೀಡಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ಸಹ ಸಮಾಜದವರನ್ನು ಕರೆಸಿ, ಇತ್ಯರ್ಥ ಮಾಡಿಕೊಳ್ಳುವ ಸಲಹೆ ನೀಡಿದ್ದಾರೆ. ದೂರು ಸಹ ಸ್ವೀಕಾರ ಮಾಡಿಲ್ಲ.
₹1 ಲಕ್ಷ ಬೇಡಿಕೆ: ಅಂತರ್ಜಾತಿ ಮದುವೆಯಾಗಿದ್ದಕ್ಕೆ ಆ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವುದಲ್ಲದೆ, ಇತ್ಯರ್ಥ ಮಾಡಲು ₹1 ಲಕ್ಷ ದಂಡದ ಬೇಡಿಕೆ ಇಟ್ಟಿದ್ದಾರೆ. ಲಕ್ಷ ರುಪಾಯಿಯನ್ನು ಕಡಿಮೆ ಮಾಡುವ ಪ್ರಯತ್ನ ನಡೆದು, ಈಗ ₹50 ಸಾವಿರ ಕೇಳಿದ್ದಾರೆ.
ಅಷ್ಟು ಕೊಡಲು ಆಗುವುದಿಲ್ಲ ಎಂದಾಗ ಬುಧವಾರ ನಡೆದ ರಾಜೀ ಪಂಚಾಯಿತಿಯಲ್ಲಿ ₹21 ಸಾವಿರ ರುಪಾಯಿಯನ್ನಾದರೂ ಕೊಡಲೇಬೇಕು ಎಂದು ಪಟ್ಟುಹಿಡಿದಿದ್ದಾರೆ. ದಂಡ ಪಾವತಿ ಮಾಡದೇ ಸಮಸ್ಯೆ ಇತ್ಯರ್ಥ ಅಸಾಧ್ಯ ಎಂದಿದ್ದಾರೆ ಎಂದು ಶಂಕ್ರಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.