ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಲ್ಲಿ ಪೊಲೀಸ್ ಉಪ ಅಧೀಕ್ಷಕರಾಗಿ ಸೇವೆ ಸಲ್ಲಿಸಿ, ಬೆಂಗಳೂರಿಗೆ ವರ್ಗಾವಣೆ ಆಗಿರುವ ಆರ್.ವಿ.ಗಂಗಾಧರಪ್ಪ ಅವರಿಗೆ ಕುಶಾಲನಗರ ಪ್ರಜ್ಞಾವಂತ ನಾಗರಿಕ ವೇದಿಕೆ ಆಶ್ರಯದಲ್ಲಿ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ ಅಶೋಕ್ ಸಂಗಪ್ಪ ಆಲೂರ ಉದ್ಘಾಟಿಸಿದರು.
ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ವಿ.ವಿ.ಯ ಕುಲಪತಿ ಪ್ರೊ ಅಶೋಕ್ ಸಂಗಪ್ಪ ಆಲೂರ, ಸರ್ಕಾರಿ ಸೇವೆಯಲ್ಲಿ ಅಧಿಕಾರಿಗಳು ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಪರ ಕೆಲಸ ಮಾಡಿದವರನ್ನು ಸಮಾಜ ಸದಾ ಸ್ಮರಿಸುತ್ತದೆ. ಇದಕ್ಕೆ ಜ್ಬಲಂತ ಉದಾಹರಣೆ ಡಿವೈಎಸ್ಪಿ ಗಂಗಾಧರಪ್ಪ ಅವರ ಸೇವಾ ತತ್ಪರತೆ ಹಾಗೂ ಕರ್ತವ್ಯ ನಿಷ್ಠೆಯೇ ಸಭೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆ ಎಂದರು.ಡಿವೈಎಸ್ಪಿ ಗಂಗಾಧರಪ್ಪ ಅವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪರಿಣಾಮ ಕುಶಾಲನಗರದ ಜನತೆ ಒಗ್ಗೂಡಿ ನಾಗರಿಕ ಸನ್ಮಾನ ಮಾಡುತ್ತಿರುವುದೇ ಅವರ ಕರ್ತವ್ಯ ನಿಷ್ಠೆಯ ದ್ಯೋತಕವಾಗಿದೆ ಎಂದು ಬಣ್ಣಿಸಿದರು.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ನಾಗರಿಕರು ಕೂಡ ಅಗತ್ಯ ಎಂದು ಡಾ ಅಶೋಕ ಆಲೂರ ಹೇಳಿದರು.ಜನಸ್ನೇಹಿ ಅಧಿಕಾರಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ವಿ.ಪಿ.ಶಶಿಧರ್, ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕ, ದಕ್ಷ ಹಾಗೂ ಜನಸ್ನೇಹಿ ಅಧಿಕಾರಿಯಾಗಿ ಅಧಿಕಾರಿ ವೃಂದಕ್ಕೆ ಮಾದರಿಯಾಗಿರುವ ಡಿವೈಎಸ್ಪಿ ಗಂಗಾಧರಪ್ಪ ಅವರು ಜನಸ್ನೇಹಿ ಅಧಿಕಾರಿಯಾಗಿ ಜನಮಾನಸದಲ್ಲಿ ಸದಾ ಹಸಿರಾಗಿ ಉಳಿಯುತ್ತಾರೆ ಎಂದರು.
ಸರ್ಕಾರದ ಕಟ್ಟುಪಾಡುಗಳೊಂದಿಗೆ ಕಾನೂನು ಪರಿಪಾಲಿಸುವ ಮೂಲಕ ಸಮಾಜದ ದುಷ್ಟ ಶಕ್ತಿಗಳ ದಮನಕ್ಕೆ ಕಾರಣವಾಗಿ ಶ್ರಮಿಸುವ ಇಂತಹ ಅಧಿಕಾರಗಳ ಸೇವೆಯು ಇಂದಿನ ಅಗತ್ಯವಾಗಿದೆ ಎಂದರು.ಜನರ ಪ್ರೀತಿಗೆ ಪಾತ್ರರಾಗಿದ್ದಾರೆ: ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಇವತ್ತಿನ ರಾಜಕೀಯ ಪರಿಸ್ಥಿತಿ ಹಾಗೂ ಕೆಲಸದ ಒತ್ತಡದ ನಡುವೆ ಡಿವೈಎಸ್ಪಿ ಗಂಗಾಧರಪ್ಪ ಅವರು ಜನಸ್ನೇಹಿ ಅಧಿಕಾರಿಯಾಗಿ ಕುಶಾಲನಗರ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಕುಶಾಲನಗರ ರೈತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಇಂತಹ ಅಧಿಕಾರಿಗಳ ಕರ್ತವ್ಯ ನಿಷ್ಠೆಯು ಇತರೆ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಗಂಗಾಧರಪ್ಪ, ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದು ಮನಃಪೂರ್ವಕವಾಗಿ ಕೆಲಸ ತೃಪ್ತಿ ತಂದಿದೆ, ಇಲ್ಲಿನ ಜನರ ಶಿಸ್ತು, ಪ್ರೀತಿ- ವಿಶ್ವಾಸ ಕ್ಕೆ ತಾವು ಸದಾ ಚಿರಋಣಿಯಾಗಿರುತ್ತೇನೆ ಎಂದರು.
ಕಾನೂನು ಪರಿಪಾಲನೆ ಸಂದರ್ಭದಲ್ಲಿ ನಾಗರಿಕರನ್ನು ವಿಶ್ವಾಸಕ್ಕೆ ಪಡೆದರೆ ಎಂತಹ ಜಟಿಲ ಸಮಸ್ಯೆಗಳನ್ನು ಕೂಡ ಸುಲಭವಾಗಿ ಪರಿಹರಿಸಲು ಸಾಧ್ಯ ಎಂದು ಗಂಗಾಧರಪ್ಪ ಹೇಳಿದರು.ಇದೇ ವೇಳೆ ಡಿವೈಎಸ್ಪಿ ಗಂಗಾಧರಪ್ಪ ಮತ್ತು ಅವರ ಪತ್ನಿ ಪ್ರಿಯಾಂಕ ಅವರನ್ನು ಪ್ರಜ್ಞಾವಂತ ನಾಗರಿಕ ವೇದಿಕೆ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ತಾಲೂಕು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸತೀಶ್, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಚ್.ನಜೀರ್ ಅಹ್ಮದ್,ನಗರ ಚೇಂಬರ್ ಆಫ್ ಕಾಮರ್ಸ್ ನ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿದರು.
ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್, ಎ.ಪಿ.ಸಿ.ಎಂ.ಎಸ್.ನ ಉಪಾಧ್ಯಕ್ಷ ದೊಡ್ಡಯ್ಯ, ವಿವಿಧ ಸಂಘಟನೆಗಳ ಪ್ರಮುಖರು, ನಾಗರಿಕರು ಇದ್ದರು.ಕೆ.ಎಸ್.ಮೂರ್ತಿ ಸ್ವಾಗತಿಸಿದರು. ಉಪನ್ಯಾಸಕ ಜಮೀಲ್ ಅಹ್ಮದ್, ಶಿಕ್ಷಕಿ ಗಾಯತ್ರಿ ನಿರ್ವಹಿಸಿದರು. ಟಿ.ಜಿ.ಪ್ರೇಮಕುಮಾರ್ ವಂದಿಸಿದರು.