ಆಧುನಿಕ ಸಮಾಜದ ನಿರ್ಮಾಣಕ್ಕೆ ತಕ್ಕಂತೆ ಸಮಾಜ ವಿಜ್ಞಾನದ ಪಠ್ಯಕ್ರಮ ಬದಲಾಗಬೇಕು. ಹೊಸ ರೀತಿಯ ಪ್ರಸಕ್ತ ಸಾಮಾಜಿಕ ವಿಷಯಗಳನ್ನು ಒಳಗೊಂಡ ಸಮಾಜಶಾಸ್ತ್ರವನ್ನು ಇಂದಿನ ವಿದ್ಯಾರ್ಥಿಗಳಿಗೆ ಬೋಧಿಸುವ ಅಗತ್ಯವಿದೆ.
18ನೇ ಸಮಾಜಶಾಸ್ತ್ರ ಸಮ್ಮೇಳನದ ಸಮಾರೋಪದಲ್ಲಿ ಹಂಪಿ ವಿವಿ ಸಮಾಜಶಾಸ್ತ್ರ ವಿಷಯದ ಪ್ರಾಧ್ಯಾಪಕ
ಕನ್ನಡಪ್ರಭ ವಾರ್ತೆ ಧಾರವಾಡಆಧುನಿಕ ಸಮಾಜದ ನಿರ್ಮಾಣಕ್ಕೆ ತಕ್ಕಂತೆ ಸಮಾಜ ವಿಜ್ಞಾನದ ಪಠ್ಯಕ್ರಮ ಬದಲಾಗಬೇಕು. ಹೊಸ ರೀತಿಯ ಪ್ರಸಕ್ತ ಸಾಮಾಜಿಕ ವಿಷಯಗಳನ್ನು ಒಳಗೊಂಡ ಸಮಾಜಶಾಸ್ತ್ರವನ್ನು ಇಂದಿನ ವಿದ್ಯಾರ್ಥಿಗಳಿಗೆ ಬೋಧಿಸುವ ಅಗತ್ಯವಿದೆ ಎಂದು ಹಂಪಿ ವಿವಿ ಸಮಾಜಶಾಸ್ತ್ರ ವಿಷಯದ ಪ್ರಾಧ್ಯಾಪಕ ಡಾ. ಮೇತ್ರಿ ಕಾಮಣ್ಣಾ ಹೇಳಿದರು.
ರ್ನಾಟಕ ಸಮಾಜಶಾಸ್ತ್ರ ಸಂಘವು ಕವಿವಿ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಭಾನುವಾರ ನಡೆದ 18ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಸಮಾಜ ವಿಜ್ಞಾನದ ಮಹತ್ವವನ್ನು ಯುವಜನರಿಗೆ ತಿಳಿಸುವ ಅಗತ್ಯವಿದೆ. ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಒಳಗೊಳ್ಳಬೇಕು. ತಳಸಮುದಾಯಗಳ ಕುರಿತು ಅಧ್ಯಯನ ಮಾಡುವಲ್ಲಿ ಸಮಾಜಶಾಸ್ತ್ರ ಪ್ರಮುಖ ವಿಷಯ. ಜತೆಗೆ ಸಾಮಾಜಿಕ ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡುವುದು ಬಹಳ ಅಗತ್ಯವಾಗಿದೆ ಎಂದರು.ಸಮಾರೋಪ ಭಾಷಣ ಮಾಡಿದ ಶಿವಮೊಗ್ಗದ ಕುವೆಂಪು ವಿವಿ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ರಾಮೇಗೌಡ, ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆಯುವ ಸಂಶೋಧನೆಗಳು ಬರೀ ಸಂಶೋಧನೆಗೆ ಮಾತ್ರ ಸೀಮಿತವಾಗದೇ ಜನಸಾಮಾನ್ಯರಿಗೆ ತಲುಪಬೇಕು. ವಿವಿಯ ಸಾಕಷ್ಟು ಉತ್ತಮ ಸಾಮಾಜಿಕ ಸಂಶೋಧನೆಗಳು ಅಲ್ಲಿಯೇ ಉಳಿಯುತ್ತಿದ್ದು, ಜನಸಾಮಾನ್ಯರ ಬಳಿಗೆ ಹೋಗುತ್ತಿಲ್ಲ. ಈ ಹಿನ್ನೆಲೆ ವಿವಿಗಳು ಚಿಂತನೆ ನಡೆಸಲಿ ಎಂಬ ಸಲಹೆ ನೀಡಿದರು.
ಕವಿವಿ ಪರೀಕ್ಷಾಂಗ ಕುಲಸಚಿವ ಎ.ಎಂ. ಕಡಕೋಳ, ಕೊಳಗೇರಿ ಜನರಿಗೆ ಹಕ್ಕುಗಳನ್ನು, ಸಾಮಾಜಿಕ ಆರ್ಥಿಕ ಸವಲತ್ತುಗಳನ್ನು ನೀಡುವಲ್ಲಿ ಸರ್ಕಾರಗಳು ಗಮನಹರಿಸಬೇಕು. ಅವರು ಸಹ ಘನತೆಯ ಬದಕು ಕಟ್ಟಿಕೊಡಲು ಎಲ್ಲರ ಜವಾಬ್ದಾರಿ ಆಗಿದೆ. ಸಮ್ಮೇಳನದಲ್ಲಿ ನಡೆದ ಚರ್ಚೆ ವಿಚಾರಗಳು ಕೇವಲ ವಿಚಾರಸಂಕಿರಣಕ್ಕೆ ಸೀಮಿತ ಆಗಬಾರದು ಎಂದರು.ಕವಿವಿ ಕುಲಸಚಿವ ಡಾ. ಅರವಿಂದ ಕರಬಸಣ್ಣಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದಲ್ಲಿ ಸಮಾಜಶಾಸ್ತ್ರಜ್ಞರು 400 ಪ್ರಬಂಧ ಮಂಡನೆ ಮಾಡಿದರು. 500 ಜನ ಪ್ರಾಧ್ಯಾಪಕರು, ಸಂಶೋಧಕರು, ಚಿಂತಕರು, ವಿದ್ಯಾರ್ಥಿಗಳಿದ್ದರು. ಕರ್ನಾಟಕದ ಸಮಾಜಶಾಸ್ತ್ರ ಮತ್ತು ಸಮಾಜಶಾಸ್ತ್ರ: ದೃಷ್ಟಿಕೋನಗಳು, ಸವಾಲುಗಳು ಮತ್ತು ಭವಿಷ್ಯದ ದಿಕ್ಕುಗಳು ವಿಷಯದ ಕುರಿತು ಸಮಾಜಶಾಸ್ತ್ರಜ್ಞರು ಚರ್ಚಿಸಿದರು. ಪ್ರೊ. ಸಿ. ಪಾರ್ವತಮ್ಮ ಸ್ಮಾರಕ ದತ್ತಿ ವಿಶೇಷ ಉಪನ್ಯಾಸ ಮತ್ತು ಡಾ. ಕೆ. ಈಶ್ವರನ್ ಸ್ಮಾರಕ ದತ್ತಿ ಉಪನ್ಯಾಸಗಳು ಜರುಗಿದವು.
ಡಾ. ಶಾಂತಾ ಅಷ್ಟಗಿ, ಡಾ. ಸುಭಾಷ ನಾಟೀಕಾರ, ಶೌಕತ್ ಅಜೀಮ್, ಡಾ. ಧ್ರುವ ಜ್ಯೋತಿ, ಡಾ. ಹನುಮಗೌಡ ಸಿ., ಪ್ರೊ. ಜಯಶ್ರೀ. ಎಸ್., ಡಾ. ರವಿ ದಳವಾಯಿ ಇದ್ದರು.