ನಿವೃತ್ತಿ ಬಳಿಕವೂ ಸಮಾಜ ಸೇವೆ ಶ್ಲಾಘನೀಯ: ಸತ್ಯನಾರಾಯಣ

| Published : Feb 25 2024, 01:52 AM IST

ನಿವೃತ್ತಿ ಬಳಿಕವೂ ಸಮಾಜ ಸೇವೆ ಶ್ಲಾಘನೀಯ: ಸತ್ಯನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾ ಮನೋಭಾವ ಹೊಂದಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗುವ ಯಾವುದೇ ಸಂಘ- ಸಂಸ್ಥೆಗಳಿಗೆ ಸಮಾಜ ಪುರಸ್ಕರಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ವಿಶ್ರಾಂತ ಜೀವನದಲ್ಲಿ ಇರಬೇಕಾದ ನೌಕರ ಸ್ನೇಹಿತರು ಸ್ಪಂದನ ಹೆಸರಿನ ಸಂಸ್ಥೆ ಕಟ್ಟಿ ಸಮಾಜಕ್ಕೆ ನೆರವಾಗುತ್ತಿರುವುದು ಅತ್ಯಂತ ಶ್ಲಾಘನೀಯ

ಸೊರಬ : ಸೇವಾ ಮನೋಭಾವ ಹೊಂದಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗುವ ಯಾವುದೇ ಸಂಘ- ಸಂಸ್ಥೆಗಳಿಗೆ ಸಮಾಜ ಪುರಸ್ಕರಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ವಿಶ್ರಾಂತ ಜೀವನದಲ್ಲಿ ಇರಬೇಕಾದ ನೌಕರ ಸ್ನೇಹಿತರು ಸ್ಪಂದನ ಹೆಸರಿನ ಸಂಸ್ಥೆ ಕಟ್ಟಿ ಸಮಾಜಕ್ಕೆ ನೆರವಾಗುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸತ್ಯನಾರಾಯಣ ಹೇಳಿದರು.

ಶುಕ್ರವಾರ ಪಟ್ಟಣದ ಮುರುಘಾ ಮಠದ ಆವರಣದಲ್ಲಿ ಸ್ಪಂದನ ಸಮಾಜ ಸೇವಾ ಸಂಸ್ಥೆ ವತಿಯಿಂದ ಶ್ರೀ ಚನ್ನವೀರ ದೇಶಿಕೇಂದ್ರ ಪ್ರೌಢಶಾಲೆ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ನಿವೃತ್ತ ಸೈನಿಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿತ್ತಿರುವವರಿಗೆ ನಿವೃತ್ತಿ ಸಹಜ. ಆದರೆ, ಸಮಾಜ ಸೇವೆಯ ಪ್ರವೃತ್ತಿಗೆ ಯಾವುದೇ ನಿವೃತ್ತಿ ಇಲ್ಲ. ಮಾಡುವ ಮನಸ್ಸು, ಮುನ್ನುಗ್ಗುವ ಹುಮ್ಮಸ್ಸು ಇದ್ದರೆ ಸಾಕು ಸಮಾಜಮುಖಿ ಚಟುವಟಿಕೆಗಳನ್ನು ಮಾಡಬೇಕು ಎನ್ನುವ ಧೈರ್ಯ ಬರುತ್ತದೆ. ಇದಕ್ಕೆ ಸ್ಪಂದನ ಸಮಾಜ ಸೇವಾ ಸಂಸ್ಥೆ ಉದಾಹರಣೆ. ಸ್ಪಂದನಕ್ಕೆ ಸಾರ್ವಜನಿಕರು ಮತ್ತು ಇತರೆ ಸಂಘ- ಸಂಸ್ಥೆಗಳು ಸ್ಪಂದಿಸಿ, ಸಹಕರಿಸಬೇಕು ಎಂದರು.

ಮುಖ್ಯಅತಿಥಿ, ಹಿರಿಯ ವೈದ್ಯ ಡಾ. ಎಂ.ಕೆ. ಭಟ್ ಮಾತನಾಡಿ, ಸಮಾಜ ಸೇವೆ ಮಾಡಬೇಕೆಂಬ ತುಡಿತ ಹೊಂದಿದವರಿಗೆ ನಿವೃತ್ತಿ ಎಂಬುದು ಇರುವುದಿಲ್ಲ. ವೈದ್ಯರಿಗೆ ರೋಗಿಗಳು ದೇವರಿದ್ದಂತೆ. ಆರೋಗ್ಯ ಎನ್ನುವುದು ಸಂಪತ್ತಿದ್ದಂತೆ. ರೋಗಿಯನ್ನು ಆರೋಗ್ಯವಂತರಾಗಿ ಮಾಡಿದರೆ ಸೇವೆ ಸಲ್ಲಿಸಿದ ಆತ್ಮಭಾವ ಬರುತ್ತದೆ. ಸಮಾಜದ ಉನ್ನತಿಗೆ ಸೇವೆ ಮಾಡುವ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.

ನಿವೃತ್ತ ಉಪನ್ಯಾಸಕ ಜಿ.ಬಂಗಾರಪ್ಪ ಸಾಮಾಜಿಕ ವ್ಯವಸ್ಥೆಯಲ್ಲಿ ಯುವತಿಯರ ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಸ್ಪಂದನ ಸೇವಾ ಸಂಸ್ಥೆ ಅಧ್ಯಕ್ಷ ಜಿ. ವಿಶ್ವನಾಥ್ ವಹಿಸಿದ್ದರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಗರಾಜ ಗೌಡ ಮತ್ತು ನಿವೃತ್ತ ಸೈನಿಕ ಮಲ್ಲಪ್ಪ ಗದ್ದಿಗೆ ಮತ್ತು ಎಸ್.ಎಸ್.ಎಲ್‌ಸಿ. ಹಾಗೂ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಕ್ರೀಡೆಯಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಲಿಂಗರಾಜ್ ಒಡೆಯರ್, ಎಸ್.ಡಿ.ಎಸ್.ಸಿ. ಶಾಲೆ ಮುಖ್ಯಶಿಕ್ಷಕಿ ಶೋಭಾರಾಣಿ, ಮಲ್ಲಪ್ಪ, ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಪತ್ರಕರ್ತರಾದ ನೋಪಿ ಶಂಕರ್, ರವಿ ಕಲ್ಲಂಬಿ, ಲಕ್ಷ್ಮಣಪ್ಪ, ವಿಜಯ್ ದಟ್ಟೇರ್ ಮೊದಲಾದವರು ಹಾಜರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಕೆ.ಆರ್. ಶಿವಾನಂದಪ್ಪ ಸ್ವಾಗತಿಸಿ, ಕೆ.ಮೋಹನ್‌ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.