ಸಾರಾಂಶ
ಹಿಂದು ಸೇವಾ ಪ್ರತಿಷ್ಠಾನದ ನಿರ್ದೇಶಕ ಸುರೇಶ್ ದಿಕ್ಸೂಚಿ ಭಾಷಣ ಮಾಡಿ, ಆಧುನಿಕತೆ ಹೆಸರಿನಲ್ಲಿ ಸಮಾಜದ ಮೌಲ್ಯ ಕುಸಿಯುತ್ತಿದೆ. ಎಲ್ಲಿಯವರೆಗೂ ನಾವು ಬಲಗೊಳ್ಳುವುದಿಲ್ಲವೋ ಅಲ್ಲಿಯ ವರೆಗೂ ಸಮಾಜ ಉನ್ನತಿ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮೈಸೂರು
ಸಮಾಜಸೇವೆ ಪವಿತ್ರವಾದ ಕೆಲಸ ಎಂದು ಬಸವಮಾರ್ಗ ವ್ಯಸನಮುಕ್ತ ಮತ್ತು ಪುರ್ನವಸತಿ ಕೇಂದ್ರದ ಸಂಸ್ಥಾಪಕ ಎಸ್. ಬಸವರಾಜು ಹೇಳಿದರು.ನೆಲೆ ಫೌಂಡೇಷನ್ ನ ರಜತ ಮಹೋತ್ಸವ ಅಂಗವಾಗಿ ನಗರದ ಕೃಷ್ಣಮೂರ್ತಿಪುರಂನ ಶ್ರೀರಾಮ ಸೇವಾ ಅರಸು ಮಂಡಳಿಯಲ್ಲಿ ಭಾನುವಾರ ಆಯೋಜಿಸಿದ್ದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯುವ ಮಕ್ಕಳಿಗೆ ಉತ್ತಮ ಪರಿಸರ, ಕಲಿಕಾ ವಾತಾವರಣ ನಿರ್ಮಾಣ ಮಾಡಿಕೊಟ್ಟರೆ ಅವರು ಸಮಾಜದಲ್ಲಿ ಆರೋಗ್ಯವಂತ ವ್ಯಕ್ತಿಗಳಾಗಿ ಬೆಳೆದು ದೇಶಕ್ಕೆ ಆಸ್ತಿಯಾಗುತ್ತಾರೆ. ಜತೆಗೆ ಅವರಿಗೆ ಬಾಲ್ಯದಿಂದಲೇ ಸಂಸ್ಕಾರ ಹಾಗೂ ಜೀವನದ ಮೌಲ್ಯ ಕಲಿಸಿಕೊಡಬೇಕಾಗುತ್ತದೆ. ಮನುಷ್ಯನಿಗೆ ವಿದ್ಯೆ ಇಲ್ಲದಿದ್ದರೂ ಬದಕಬಹುದು. ಆದರೆ ಸಂಸ್ಕಾರ ಇಲ್ಲದಿದ್ದರೆ ಬದುಕಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಕೃರ ನೀಡಿ ಅವರನ್ನು ಪಾಲನೆ-ಪೋಷಣೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಹಿಂದು ಸೇವಾ ಪ್ರತಿಷ್ಠಾನದ ನಿರ್ದೇಶಕ ಸುರೇಶ್ ದಿಕ್ಸೂಚಿ ಭಾಷಣ ಮಾಡಿ, ಆಧುನಿಕತೆ ಹೆಸರಿನಲ್ಲಿ ಸಮಾಜದ ಮೌಲ್ಯ ಕುಸಿಯುತ್ತಿದೆ. ಎಲ್ಲಿಯವರೆಗೂ ನಾವು ಬಲಗೊಳ್ಳುವುದಿಲ್ಲವೋ ಅಲ್ಲಿಯ ವರೆಗೂ ಸಮಾಜ ಉನ್ನತಿ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಕ್ಷಣಾಧಿಕಾರಿ ಯೋಗೇಶ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ. ಗೋಪಿನಾಥ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಹದೇವ ಕೋಟೆ, ನೆಲೆ ಫೌಂಡೇಷನ್ ಮುಖ್ಯಸ್ಥ ಶಿವಕುಮಾರ್, ಮಕ್ಕಳ ತಜ್ಞ ಡಾ. ವಾಮನ್ ರಾವ್ ಬಾಪಟ್, ನೆಲೆ ಫೌಂಡೇನ್ ಪದಾಧಿಕಾರಿಗಳಾದ ಸಿ.ವಿ. ಕೇಶವಮೂರ್ತಿ, ರಾಮಣ್ಣ. ಪಿ.ಜೆ. ರಾಘವೇಂದ್ರ ಮೊದಲಾದವರು ಇದ್ದರು.