ಸಾರಾಂಶ
ಯಳಂದೂರು ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದುಗ್ಗಹಟ್ಟಿ ಧೀಮಂತ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಸುತ್ತೂರು ಶ್ರೀ, ಸಿದ್ದಗಂಗಾ ಶ್ರೀ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಪಿ.ವೀರಭದ್ರಪ್ಪ ಸೇರಿದಂತೆ ಅನೇಕರು ಇದ್ದರು.
ಕನ್ನಡಪ್ರಭ ವಾರ್ತೆ ಯಳಂದೂರು
ಸಮಾಜದಲ್ಲಿ ಬೇರೆಯವರಿಗೆ ತೊಂದರೆ ಕೊಡದೆ ಬದುಕುವುದನ್ನು ಕಲಿತರೆ ಅದೇ ನಾವು ಸಮಾಜಕ್ಕೆ ಕೊಡುವ ದೊಡ್ಡ ಸೇವೆಯಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ದುಗ್ಗಹಟ್ಟಿ ಪಿ.ವೀರಭದ್ರಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ದುಗ್ಗಹಟ್ಟಿ ಧೀಮಂತ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಜೀವನ ಪವಿತ್ರವಾಗಿದೆ. ಇಲ್ಲಿ ಇರುವಷ್ಟು ದಿನ ಉತ್ತಮ ಕೆಲಸಗಳನ್ನು ಮಾಡಬೇಕು. ಸಮಾಜಕ್ಕೆ ಸೇವೆ ಮಾಡುವುದು ಜೀವನದ ಮುಖ್ಯ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ದುಗಹಟ್ಟಿ ಪಿ. ವೀರಭದ್ರಪ್ಪ ರಾಜಕೀಯಕ್ಕೆ ಧುಮುಕಿ ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಬಿಳಿಗಿರಿರಂಗನ ಬೆಟ್ಟದ ರಸ್ತೆ ಮಾಡಿ ಉಳಿಕೆ ಹಣವನ್ನು ಸರ್ಕಾರಕ್ಕೆ ೧೯೬೧ ರಲ್ಲೇ ವಾಪಸ್ ನೀಡಿದ್ದರು. ನಂತರ ರಾಜಕೀಯ ಬಿಟ್ಟು ಬಂದು ಅನೇಕ ಸಮಾಜಪರ ಕೆಲಸಗಳು, ದೇಗುಲಗಳು, ಗದ್ದುಗೆಗಳ ಜೀರ್ಣೋದ್ಧಾರ, ಗ್ರಂಥಾಲಯ ಸ್ಥಾಪನೆ, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ. ಇವರ ಸೇವೆಯ ಕುರಿತು ಬೆಳಕು ಚೆಲ್ಲುವ, ಇದರೊಂದಿಗೆ ತಾಲೂಕಿನ ಇತಿಹಾಸವನ್ನು ತಿಳಿಸುವ ದುಗ್ಗಹಟ್ಟಿ ಧೀಮಂತ ಎಂಬ ಕೃತಿ ಸಂಗ್ರಹ ಯೋಗ್ಯವಾಗಿದೆ ಎಂದರು.ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಜಿ ಮಾತನಾಡಿ, ಶಿವಶರಣರ ಕಾಯಕ ತತ್ವವನ್ನು ಮೈಗೂಡಿಸಿಕೊಂಡ ಕೆಲವರಲ್ಲಿ ವೀರಭದ್ರಪ್ಪ ಅವರೂ ಒಬ್ಬರಾಗಿದ್ದಾರೆ. ಇದು ಅಭಿನಂದನಾ ಸಮಾರಂಭಕ್ಕಿಂತ ಹೆಚ್ಚಾಗಿ ಒಂದು ಸಾಮಾಜಿಕ ಸೇವೆ, ತ್ಯಾಗ ಮಾಡಿದ ವ್ಯಕ್ತಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವಾಗಿದೆ ಎಂದರು.ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಯಳಂದೂರು ತಾಲೂಕು ಚಿಕ್ಕ ತಾಲೂಕಾದರೂ ಇಲ್ಲಿ ಅನೇಕ ಮಹಾನ್ ವ್ಯಕ್ತಿಗಳು, ಕವಿಗಳು, ಸಮಾಜ ಸುಧಾರಕರು ಆಗಿ ಹೋಗಿದ್ದಾರೆ. ಇದರಲ್ಲಿ ದುಗ್ಗಹಟ್ಟಿ ಪಿ.ವೀರಭದ್ರಪ್ಪ ಅವರೂ ಒಬ್ಬರಾಗಿದ್ದಾರೆ. ಇವರ ಮನಸ್ಸು ಸದಾಜನಪರ ಕಾಳಜಿ ಹಾಗೂ ತಾಲೂಕಿನ ಅಭಿವೃದ್ಧಿಗೆ ತುಡಿಯುತ್ತಿರುತ್ತದೆ. ೯೦ ವಸಂತ ಕಂಡಿರುವ ಇವರು ಈಗಲೂ ಕೂಡ ಲವಲವಿಕೆಯಿಂದ ತಾಲೂಕಿನ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಮನೋಭಾವನೆ ಹೊಂದಿರುವುದು ಇವರ ಪ್ರಾಮಾಣಿಕ ಸೇವೆಗೆ ಹಿಡಿದ ಕನ್ನಡಿಯಾಗಿದೆ ಎಂದರು.ಮಾಜಿ ಗೃಹ ಸಚಿವ, ಸ್ಕೌಟ್ ಆ್ಯಂಡ್ ಗೈಡ್ಸ್‌ನ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ದುಗ್ಗಹಟ್ಟಿ ಪಿ.ವೀರಭದ್ರಪ್ಪ, ಕುಂದೂರು ಮಠದ ಡಾ. ಶರತ್ ಚಂದ್ರ ಸ್ವಾಮೀಜಿ ಕೃತಿ ಪರಿಚಯವನ್ನು ಮಾಡಿಕೊಟ್ಟರು. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್, ಮಾಜಿ ಶಾಸಕರಾದ ಎಸ್. ಬಾಲರಾಜು, ಜಿ.ಎನ್. ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ ಚಾಮುಲ್, ಅಧ್ಯಕ್ಷ ವೈ.ಸಿ. ನಾಗೇಂದ್ರ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಮಾತನಾಡಿದರು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಎಸ್‌ಡಿವಿಎಸ್‌ನ ವಿ. ಮಲ್ಲಿಕಾರ್ಜುನಸ್ವಾಮಿ, ವಿ. ಗಂಗಾಧರಸ್ವಾಮಿ, ದುಗ್ಗಹಟ್ಟಿ ರಾಜೇಶ್, ವಿಖ್ಯಾತ್, ವೀರಭದ್ರಸ್ವಾಮಿ ಮತ್ತಿತರರು ಇದ್ದರು.